143 ವಸ್ತುಗಳ ಜಿಎಸ್‌ಟಿ ದರ ಏರಿಕೆಗೆ ಪ್ರಸ್ತಾಪ!

* ಈಗಾಗಲೇ ಬೆಲೆ ಏರಿಕೆಯ ಹೊಡೆತ ಅನುಭವಿಸುತ್ತಿರುವ ದೇಶದ ಜನತೆ

* ರಾಜ್ಯಗಳ ಅಭಿಪ್ರಾಯ ಕೋರಿದ ಜಿಎಸ್‌ಟಿ ಮಂಡಳಿ

* ಇನ್ನು ಬೆಲ್ಲ, ಹಪ್ಪಳದಂಥ ವಸ್ತುಗಳಿಗೆ ತೆರಿಗೆ ಭಾರ

GST Council for hiking rates of 143 items asks states for views pod

ನವದೆಹಲಿ(ಏ.26): ಈಗಾಗಲೇ ಬೆಲೆ ಏರಿಕೆಯ ಹೊಡೆತ ಅನುಭವಿಸುತ್ತಿರುವ ದೇಶದ ಜನತೆಗೆ, ಸರ್ಕಾರ ಮತ್ತೆ ಭಾರೀ ಪ್ರಮಾಣದ ತೆರಿಗೆ ದರ ಏರಿಕೆ ಶಾಕ್‌ ನೀಡಲು ಸಜ್ಜಾಗಿದೆ. ಹಾಲಿ ಇರುವ ಶೇ.5, 12,18 ಮತ್ತು ಶೇ.28ರ ಸ್ತರ ಬದಲಾಯಿಸಲು ನಿರ್ಧರಿಸಿರುವ ಸರ್ಕಾರ, ಅದರ ಜೊತೆಜೊತೆಗೆ ಸುಮಾರು 143 ವಸ್ತುಗಳನ್ನು ಹೊಸ ತೆರಿಗೆ ಸ್ತರಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ರಾಜ್ಯಗಳ ಮುಂದಿಟ್ಟಿದೆ.

ಒಂದು ವೇಳೆ ಕೇಂದ್ರೀಯ ಜಿಎಸ್‌ಟಿ ಮಂಡಳಿಯ ಪ್ರಸ್ತಾಪವನ್ನು ರಾಜ್ಯಗಳು ಒಪ್ಪಿಕೊಂಡರೆ, ಶೀಘ್ರವೇ 143 ವಸ್ತುಗಳ ದರ ಮತ್ತಷ್ಟುಏರಿಕೆಯಾಗಲಿದೆ. ಜೊತೆಗೆ ಇದುವರೆಗೂ ತೆರಿಗೆ ವ್ಯಾಪ್ತಿಗೆ ಒಳಪಡದ ಬೆಲ್ಲ, ಹಪ್ಪಳದಂಥ ವಸ್ತುಗಳು ಕೂಡಾ ಇನ್ನು ತೆರಿಗೆ ವ್ಯಾಪ್ತಿಗೆ ಸೇರಲಿವೆ.

ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಬಳಿಕ ರಾಜ್ಯಗಳು ಅನುಭವಿಸುತ್ತಿದ್ದ ನಷ್ಟವನ್ನು 5 ವರ್ಷಗಳ ಕಾಲ ಭರಿಸಲು ಸರ್ಕಾರ ಒಪ್ಪಿತ್ತು. ಆದರೆ ಈ ಪದ್ಧತಿ ಮುಂದಿನ ಜೂನ್‌ನಿಂದ ಸ್ಥಗಿತವಾಗಲಿದೆ. ಹೀಗಾಗಿ ರಾಜ್ಯಗಳ ನಷ್ಟಭರಿಸಿಕೊಡಲು, ತೆರಿಗೆ ವ್ಯಾಪ್ತಿಗೆ ಒಂದಷ್ಟುಹೊಸ ವಸ್ತುಗಳನ್ನು ತರುವ ಮತ್ತು ಕೆಲವೊಂದಿಷ್ಟುವಸ್ತುಗಳನ್ನು ಹೆಚ್ಚಿನ ತೆರಿಗೆ ಸ್ತರಕ್ಕೆ ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಎಷ್ಟುಹೆಚ್ಚಳ?:

ವರದಿ ಅನ್ವಯ 143 ವಸ್ತುಗಳ ಪೈಕಿ ಶೇ.92ರಷ್ಟುವಸ್ತುಗಳನ್ನು ಶೇ.18ರ ತೆರಿಗೆ ಸ್ತರದಿಂದ ಶೇ.28ಕ್ಕೆ ವರ್ಗಾಯಿಸಲು ಪ್ರಸ್ತಾಪ ಮಾಡಲಾಗಿದೆ. ಇದರ ಜೊತೆಗೆ ಬೆಲ್ಲ, ಹಪ್ಪಳವನ್ನು ಶೂನ್ಯ ಸ್ತರದಿಂದ ಶೇ.5ಕ್ಕೆ ಹೆಚ್ಚಿಸುವ, ಇನ್ನಿತರೆ ಕೆಲ ವಸ್ತುಗಳ ಸ್ತರವನ್ನು ಶೇ.5ರಿಂದ ಶೇ.12ಕ್ಕೆ ಮತ್ತು ಶೇ.12ರಿಂದ ಶೇ.18ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ.

ಯಾವುದರ ದರ ಏರಿಕೆ?:

ಕಸ್ಟರ್ಡ್‌ ಪೌಡರ್‌, ವಾಚ್‌, ಸೂಟ್‌ಕೇಟ್‌, ಬೆಲ್ಲ, ಹ್ಯಾಂಡ್‌ಬ್ಯಾಗ್‌, ಸುಗಂಧ್ರ ದ್ರವ್ಯ, ಪವರ್‌ ಬ್ಯಾಂಕ್‌, 32 ಇಂಚಿಗಿಂತ ಸಣ್ಣ ಟೀವಿ, ಚಾಕಲೆಟ್‌, ಸೆರಾಮಿಕ್‌ ಸಿಂಕ್‌, ವಾಷ್‌ ಬೇಸಿನ್‌, ಚ್ಯೂಯಿಂಗ್‌ ಗಮ್‌, ಕನ್ನಡಕ, ಕನ್ನಡಕದ ಫ್ರೇಮ್‌, ಆಲ್ಕೋಹಾಲ್‌ ಅಂಶ ಇರದ ಪಾನೀಯಗಳು, ಚರ್ಮದಿಂದ ಮಾಡಿ ವಸ್ತ್ರಗಳು.

Latest Videos
Follow Us:
Download App:
  • android
  • ios