ವಾಷಿಂಗ್ಟನ್(ಡಿ.05): ಅಮೆರಿಕದಲ್ಲಿ ಉದ್ಯೋಗ ಮಾಡುತ್ತ ಅಲ್ಲಿನ ಕಾಯಂ ವಾಸಿಗಳಾಗಲು ದಶಕಗಳಿಂದ ಕಾಯುತ್ತಿರುವ ಭಾರತೀಯ ವೃತ್ತಿಪರರಿಗೆ ಸಂತಸದ ಸುದ್ದಿ. ವಿದೇಶೀಯರಿಗೆ ಉದ್ಯೋಗ ಆಧರಿತ ಗ್ರೀನ್‌ಕಾರ್ಡ್‌ ನೀಡುವ ಮೇಲಿನ ‘ದೇಶವಾರು ಮಿತಿ’ಯನ್ನು ತೆಗೆದು ಹಾಕುವ ಮಸೂದೆಗೆ ಅಮೆರಿಕ ಸಂಸತ್ತಿನ ಸದನವಾದ ಸೆನೆಟ್‌ ಅಂಗೀಕಾರ ನೀಡಿದೆ.

ಇದರಿಂದಾಗಿ ಉದ್ಯೋಗ ಆಧರಿತ ಗ್ರೀನ್‌ಕಾರ್ಡ್‌ (ಕಾಯಂ ಆಗಿ ಅಮೆರಿಕದಲ್ಲಿ ನೆಲೆಸಲು ಪಡೆವ ವೀಸಾ) ಪಡೆಯಲು ಹಲವಾರು ವರ್ಷಗಳಿಂದ ಕಾಯುತ್ತಿದ್ದ ಭಾರತೀಯರಿಗೆ ಅಮೆರಿಕಕ್ಕೆ ತೆರಳಲು ಅನುವಾಗಲಿದೆ.

ಈವರೆಗಿನ ಕಾನೂನಿನ ಪ್ರಕಾರ ಅಮೆರಿಕವು ವರ್ಷಕ್ಕೆ 1.40 ಲಕ್ಷ ಗ್ರೀನ್‌ ಕಾರ್ಡ್‌ ನೀಡುತ್ತದೆ. ಇದರಲ್ಲಿ ಒಂದು ದೇಶಕ್ಕೆ ಶೇ.7ರ ಮಿತಿ ಹೇರಿ, ಆ ಮಿತಿಯ ಒಳಗಷ್ಟೇ ಗ್ರೀನ್‌ಕಾರ್ಡ್‌ ನೀಡುತ್ತದೆ. ಈ ಮಿತಿಯ ಕಾರಣ 8 ಲಕ್ಷ ಭಾರತೀಯರಿಗೆ ಈವರೆಗೂ ಗ್ರೀನ್‌ಕಾರ್ಡ್‌ ಸಿಗದೇ, ಅದಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸೆನೆಟ್‌ ಅನುಮೋದನೆ ಸಿಕ್ಕರೂ ಜನಪ್ರತಿನಿಧಿ ಸಭೆಯೂ ಈ ಮಸೂದೆಗೆ ಅಂಗೀಕಾರ ನೀಡಬೇಕು. ಬಳಿಕ ಅಧ್ಯಕ್ಷರ ಒಪ್ಪಿಗೆಗೆ ಇದು ಹೋಗಬೇಕು. ಅಲ್ಲಿಯವರೆಗೆ ಇದು ಸಾಕಾರಗೊಳ್ಳುವುದು ಕಷ್ಟಎಂದು ಕಾನೂನು ತಜ್ಞರು ಹೇಳಿದ್ದಾರೆ.

ಈಗ ಅಂಗೀಕರಿಸಲಾಗಿರುವ ವಿಧೇಯಕದಲ್ಲಿ, ಶೇ.70ರಷ್ಟುಗ್ರೀನ್‌ ಕಾರ್ಡ್‌ಗಳು ಎಚ್‌1 ವೀಸಾದಾರರು ಹಾಗೂ ಅವರ ಕುಟುಂಬಗಳಿಗೆ ಹೋಗಬಹುದಾಗಿದೆ ಎಂದು ತಿಳಿಸಲಾಗಿದೆ.