ನವದೆಹಲಿ(ಸೆ.15): ಕೊನೆಗೂ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆ(ಸಿಎಡಿ: ಆಮದು-ರಫ್ತು ನಡುವಿನ ಅಂತರ)ಯನ್ನು ತಡೆಯಲು ಮುಂದಾಗಿದ್ದು, ಸಾಗರೋತ್ತರ ಸಾಲ ಹೆಚ್ಚಿಸಲು ನಿಯಮಗಳ ಸಡಿಲಿಕೆ ಮತ್ತು ಅನಗತ್ಯ ಆಮದುಗಳ ಮೇಲೆ ನಿರ್ಬಂಧ ವಿಧಿಸಲು ನಿರ್ಧರಿಸಿದೆ.

ದೇಶದ ಆರ್ಥಿಕ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು ಎಂದು ಜೇಟ್ಲಿ ಮಾಹಿತಿ ನೀಡಿದ್ದಾರೆ.

ಸರ್ಕಾರ ರಫ್ತು ಉತ್ತೇಜನಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಮತ್ತು ಅಗತ್ಯವಲ್ಲದ ಆಮದುಗಳ ಮೇಲೆ ನಿರ್ಬಂಧ ವಿಧಿಸಲಾಗುವುದು ಎಂದು ಅವರು ಹೇಳಿದರು. ಆದರೆ ವಾಯ ವಸ್ತುಗಳ ಆಮದಿಗೆ ನಿರ್ಬಂಧ ವಿಧಿಸಲಾಗುವುದು ಎಂಬುದನ್ನು ಜೇಟ್ಲಿ ಬಹಿರಂಗಪಡಿಸಿಲ್ಲ.

ಯಾವ ವಸ್ತಗಳ ಆಮದಿಗೆ ನಿರ್ಬಂಧ ವಿಧಿಸಬೇಕು ಎಂಬುದನ್ನು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಜೇಟ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 12ರಂದು ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ವಿನಿಮಯ ಮೌಲ್ಯ ಸಾರ್ವಕಾಲಿಕ ದಾಖಲೆಯ ಕುಸಿತ ಕಂಡಿದ್ದು, 72.91 ರೂಪಾಯಿಗೆ ತಲುಪಿತ್ತು.