ಖರೀದಿ ಬಳಿಕ ಬಿಲ್ ಕೇಳಿ,1 ಕೋಟಿ ರೂ. ನಗದು ಬಹುಮಾನ ಗೆಲ್ಲಿ; ಸೆ.1ರಿಂದ ಜಾರಿಗೆ ಬರಲಿದೆ ಕೇಂದ್ರದ ಹೊಸ ಯೋಜನೆ
ಖರೀದಿ ಬಳಿಕ ಗ್ರಾಹಕರು ವ್ಯಾಪಾರಿಗಳ ಬಳಿ ತಪ್ಪದೇ ಬಿಲ್ ಕೇಳುವ ಅಭ್ಯಾಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 'ಮೇರಾ ಬಿಲ್ ಮೇರಾ ಅಧಿಕಾರ' ಎಂಬ ಇನ್ ವಾಯ್ಸ್ ಪ್ರೋತ್ಸಾಹಕ ಯೋಜನೆಯನ್ನು ಸೆಪ್ಟೆಂಬರ್ 1ರಿಂದ ಪ್ರಾರಂಭಿಸಲಿದೆ.

ನವದೆಹಲಿ (ಆ.22): ಖರೀದಿ ಬಳಿಕ ಬಿಲ್ ಕೇಳುವ ಅಭ್ಯಾಸವನ್ನು ಗ್ರಾಹಕರಲ್ಲಿ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 'ಮೇರಾ ಬಿಲ್ ಮೇರಾ ಅಧಿಕಾರ' ಎಂಬ ಇನ್ ವಾಯ್ಸ್ ಪ್ರೋತ್ಸಾಹಕ ಯೋಜನೆಯನ್ನು ಸೆಪ್ಟೆಂಬರ್ 1ರಿಂದ ಪ್ರಾರಂಭಿಸಲಿದೆ. ಈ ಯೋಜನೆಯಡಿ 10 ಸಾವಿರ ರೂ.ನಿಂದ 1 ಕೋಟಿ ರೂ. ತನಕ ನಗದು ಬಹುಮಾನ ನೀಡಲಾಗುವುದು. ಆರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಪ್ರಾರಂಭವಾಗಲಿದೆ. ಪ್ರತಿ ಬಾರಿ ಖರೀದಿ ಮಾಡಿದ ಬಿಳಿಕ ಬಿಲ್ ಕೇಳುವಂತೆ ಗ್ರಾಹಕರನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ 'ಮೇರಾ ಬಿಲ್ ಮೇರಾ ಅಧಿಕಾರ' ಯೋಜನೆ ರೂಪಿಸಲಾಗಿದೆ. ಅಸ್ಸಾಂ, ಗುಜರಾತ್, ಹರಿಯಾಣ ರಾಜ್ಯಗಳಲ್ಲಿ ಹಾಗೂ ಪಾಂಡಿಚೇರಿ, ದಮನ್ ಹಾಗೂ ದಿಯು, ದಾದ್ರ ಹಾಗೂ ನಗರ ಹವೇಲಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆಗಳ ಹಾಗೂ ಸುಂಕ ಮಂಡಳಿ (ಸಿಬಿಐಸಿ) ತಿಳಿಸಿದೆ. ಜಿಎಸ್ ಟಿ ಇನ್ ವಾಯ್ಸ್ ಅಪ್ಲೋಡ್ ಮಾಡಿ ನಗದು ಬಹುಮಾನಗಳನ್ನು ಗಳಿಸಲು ಇನ್ ವಾಯ್ಸ್ ಪ್ರೋತ್ಸಾಹಕ ಯೋಜನೆ ಅವಕಾಶ ನೀಡಲಿದೆ ಎಂದು ಸಿಬಿಐಸಿ ಟ್ವೀಟ್ ಮಾಡಿದೆ.
ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ನೋಂದಣಿಗೊಂಡಿರುವ ವ್ಯಾಪಾರಿಗಳು ಗ್ರಾಹಕರಿಗೆ ವಿತರಿಸಿರುವ ಎಲ್ಲ ಇನ್ ವಾಯ್ಸ್ ಗಳು 'ಮೇರಾ ಬಿಲ್ ಮೇರಾ ಅಧಿಕಾರ್' ಯೋಜನೆ ಪ್ರಯೋಜನ ಪಡೆಯಲು ಅರ್ಹತೆ ಹೊಂದಿವೆ. ಈ ಯೋಜನೆಯಡಿಯಲ್ಲಿ ಮಾಸಿಕ ಹಾಗೂ ತ್ರೈಮಾಸಿಕ ಲಾಟ್ಸ್ ಡ್ರಾ ಮಾಡಲಾಗುತ್ತದೆ. ಹಾಗೆಯೇ ವಿಜೇತರು 10,000ರೂ.ನಿಂದ ಹಿಡಿದು ಒಂದು ಕೋಟಿ ರೂ. ತನಕ ನಗದು ರಿವಾರ್ಡ್ ಪ್ರಶಸ್ತಿ ಪಡೆಯಲು ಅರ್ಹತೆ ಹೊಂದಿರುತ್ತಾರೆ.
ಇನ್ನು ಲಕ್ಕಿ ಡ್ರಾಗೆ ಕನಿಷ್ಠ ಖರೀದಿ ಮೌಲ್ಯ 200ರೂ. ಆಗಿದ್ದು, ಒಬ್ಬ ವ್ಯಕ್ತಿ ಒಂದು ತಿಂಗಳಲ್ಲಿ ಗರಿಷ್ಠ 25 ಇನ್ ವಾಯ್ಸ್ ಅನ್ನು ಸೆಪ್ಟೆಂಬರ್ 1ರಿಂದ ಅಪ್ಲೋಡ್ ಮಾಡಬಹುದು. ಇನ್ನು 'ಮೇರಾ ಬಿಲ್ ಮೇರಾ ಅಧಿಕಾರ್' ಮೊಬೈಲ್ ಅಪ್ಲಿಕೇಷನ್ ಅನ್ನು ಐಒಸ್ ಹಾಗೂ ಆಂಡ್ರಾಯ್ಡ್ ಪ್ಲಾರ್ಟ್ ಫಾರ್ಮ್ಸ್ ಎರಡರಲ್ಲೂ ಸಿಗುವಂತೆ ಮಾಡಬಹುದು. ಇನ್ನು ಆಪ್ ನಲ್ಲಿ ಅಪ್ಲೋಡ್ ಮಾಡಿದ ಇನ್ ವಾಯ್ಸ್ ಮಾರಾಟಗಾರರ ಜಿಎಸ್ ಟಿನ್, ಇನ್ ವಾಯ್ಸ್ ಸಂಖ್ಯೆ, ಪಾವತಿಸಿದ ಮೊತ್ತ ಹಾಗೂ ತೆರಿಗೆ ಮೊತ್ತವನ್ನು ಕೂಡ ಹೊಂದಿರಬೇಕು.
ಸರಕು ಅಥವಾ ಸೇವೆಗಳನ್ನು ಖರೀದಿಸುವಾಗ ಮಾರಾಟಗಾರರಿಂದ ಇನ್ ವಾಯ್ಸ್ ಅನ್ನು ಗ್ರಾಹಕರು ಕೇಳಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಅದರಲ್ಲೂ ಸರಕು ಅಥವಾ ಸೇವೆಗಳ ಬ್ಯುಸಿನೆಸ್ ಟೂ ಕನ್ಸೂಮರ್ (ಬಿ2ಸಿ) ಖರೀದಿ ಮಾಡುವಾಗ ಇನ್ ವಾಯ್ಸ್ ಅನ್ನು ಗ್ರಾಹಕರು ಕೇಳಬೇಕು ಎಂಬುದು 'ಮೇರಾ ಬಿಲ್ ಮೇರಾ ಅಧಿಕಾರ' ಯೋಜನೆ ಉದ್ದೇಶವಾಗಿದೆ.
ವೈಯಕ್ತಿಕ ಸಾಲಕ್ಕೆ ಸಂಬಂಧಿಸಿ RBI ಮಹತ್ವದ ಸೂಚನೆ; ಸ್ಥಿರ, ಫ್ಲೋಟಿಂಗ್ ಬಡ್ಡಿದರದ ನಡುವೆ ಬದಲಾವಣೆಗೆ ಅವಕಾಶ
ಕೆಲವು ಗ್ರಾಹಕರು ವಸ್ತುಗಳು ಅಥವಾ ಸೇವೆಗಳನ್ನು ಖರೀದಿಸಿದ ಬಳಿಕ ವ್ಯಾಪಾರಿಗಳ ಬಳಿ ಬಿಲ್ ಕೇಳೋದಿಲ್ಲ. ಇದು ಜಿಎಸ್ ಟಿ ಸಂಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಬಿಲ್ ನೀಡಿದರೆ ಮಾತ್ರ ಜಿಎಸ್ ಟಿ ಲೆಕ್ಕ ಹಾಕಲು ಸಾಧ್ಯವಾಗುತ್ತದೆ. ಹೀಗಾಗಿ ಬಿಲ್ ನೀಡದಿರೋದ್ರಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಸರ್ಕಾರ ಈ ಹೊಸ ಯೋಜನೆ ಪರಿಚಯಿಸಿದೆ.
ಇನ್ನು ಸರ್ಕಾರ 2023ರ ಆಗಸ್ಟ್ 1ರಿಂದ 5 ಕೋಟಿ ರೂ.ಗಿಂತ ಅಧಿಕ ವಹಿವಾಟಿನ ವ್ಯವಹಾರಗಳಿಗೆ ಎಲೆಕ್ಟ್ರಾನಿಕ್ ಇನ್ ವಾಯ್ಸ್ ನೀಡೋದು ಅಗತ್ಯ ಎಂಬ ನಿಯಮ ಕೂಡ ಜಾರಿಗೊಳಿಸಿದೆ.