ನವದೆಹಲಿ(ಸೆ.19): ಕೊರೋನಾ ವೈರಸ್‌ ಲಾಕ್‌ಡೌನ್‌ ವೇಳೆ ಬ್ಯಾಂಕುಗಳು ಸಾಲಗಾರರಿಗೆ 6 ತಿಂಗಳ ಕಾಲ ಮಾಸಿಕ ಕಂತು (ಇಎಂಐ) ಪಾವತಿಯಿಂದ ವಿನಾಯ್ತಿ ನೀಡಿದ್ದ ಅವಧಿಗೆ ಚಕ್ರಬಡ್ಡಿ ಮನ್ನಾ ಮಾಡುವ ಸಾಧ್ಯತೆಯಿದೆ. ಅಂದರೆ, ಇಎಂಐ ಮುಂದೂಡಿಕೆಯಾಗಿದ್ದ ಅವಧಿಗೂ ಸಾಲಗಾರರು ಈಗಾಗಲೇ ಇರುವ ನಿಯಮದಂತೆ ಬಡ್ಡಿ ಪಾವತಿಸಲೇಬೇಕು, ಆದರೆ ಅವರಿಗೆ ಚಕ್ರಬಡ್ಡಿಯ ಹೊರೆಯಿಂದ ಮುಕ್ತಿ ಸಿಗುವ ಸಾಧ್ಯತೆಯಿದೆ.

ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ: ಕೇಂದ್ರದ ಪರಿಶೀಲನೆ

ಸಾಲಗಾರರಿಗೆ 6 ತಿಂಗಳ ಕಾಲ ಇಎಂಐ ಪಾವತಿಸುವುದರಿಂದ ಐಚ್ಛಿಕ ವಿನಾಯ್ತಿ ನೀಡಿದ್ದ ಬ್ಯಾಂಕುಗಳು ಆ ಅವಧಿಯಲ್ಲಿ ಸಾಲದ ಕಂತಿಗೆ ಬಡ್ಡಿ ಮತ್ತು ಚಕ್ರಬಡ್ಡಿ ವಿಧಿಸುತ್ತಿರುವುದನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಇದರ ಬಗ್ಗೆ ಪರಿಶೀಲಿಸಲು ಸುಪ್ರೀಂಕೋರ್ಟ್‌ ಮಹಾಲೇಖಪಾಲ ರಾಜೀವ್‌ ಮಹರ್ಷಿ ನೇತೃತ್ವದಲ್ಲಿ ಮೂವರು ತಜ್ಞರ ಸಮಿತಿ ನೇಮಿಸಿತ್ತು. ಈ ಸಮಿತಿಯು ಚಕ್ರಬಡ್ಡಿ ವಿಧಿಸಬಾರದು ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದೆ. ಆದರೆ, ಈ ಸೌಲಭ್ಯವನ್ನು ಸಣ್ಣ ಸಾಲಗಾರರಿಗೆ ಮಾತ್ರ ನೀಡುವಂತೆಯೂ ಶಿಫಾರಸು ಮಾಡುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ಸೆ.28ಕ್ಕೆ ನಿಗದಿಯಾಗಿದೆ.

ಲೋನ್ ವಿನಾಯ್ತಿ; ಖಾತೆಯನ್ನು NPA ಘೋಷಿಸಿದಂತೆ ಬ್ಯಾಂಕ್‌ಗೆ ಸುಪ್ರೀಂ ಕೋರ್ಟ್ ಸೂಚನೆ!

ಮುಂದೂಡಲ್ಪಟ್ಟಇಎಂಐಗಳಿಗೆ ಬಡ್ಡಿ ಮತ್ತು ಚಕ್ರಬಡ್ಡಿ ವಿಧಿಸದಿದ್ದರೆ ಕಷ್ಟಪಟ್ಟು ಕಂತು ಪಾವತಿಸಿದ ಸಾಲಗಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಮತ್ತು ಇದರಿಂದ ಬ್ಯಾಂಕುಗಳ ಆರ್ಥಿಕ ಆರೋಗ್ಯವೂ ಕೆಡುತ್ತದೆ ಎಂದು ಆರ್‌ಬಿಐ ಹೇಳಿತ್ತು. ಈಗ ತಜ್ಞರ ಸಮಿತಿ ಚಕ್ರಬಡ್ಡಿಯನ್ನು ಮನ್ನಾ ಮಾಡಲು ಶಿಫಾರಸು ಮಾಡಿದರೆ ಬ್ಯಾಂಕುಗಳಿಗೆ 15,000 ಕೋಟಿ ರು. ಹೊರೆಯಾಗಲಿದೆ. ಬಡ್ಡಿಯನ್ನೂ ಮನ್ನಾ ಮಾಡಿದರೆ 2.1 ಲಕ್ಷ ಕೋಟಿ ರು. ಹೊರೆಯಾಗಲಿದೆ ಎಂದು ಹೇಳಲಾಗಿದೆ