ಕೇಂದ್ರ ಸರ್ಕಾರ ಡಿಬಿಟಿ ಅಳವಡಿಕೆ ಮೂಲಕ ಕಳೆದ 9 ವರ್ಷಗಳಲ್ಲಿ ಒಟ್ಟು 2.73ಲಕ್ಷ ಕೋಟಿ ರೂ. ಉಳಿತಾಯ ಮಾಡಿದೆ. ಈ ಹಣವನ್ನು ಬೇರೆ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಂಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. 

ನವದೆಹಲಿ (ಆ15): ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸಲು ಹಾಗೂ ನಕಲಿ ಖಾತೆಗಳ ತಡೆಗೆ ನೇರ ಲಾಭ ವರ್ಗಾವಣೆಯನ್ನು (ಡಿಬಿಟಿ) ಬಳಸಿಕೊಳ್ಳುವ ಮೂಲಕ ಸರ್ಕಾರ ಕಳೆದ 9 ವರ್ಷಗಳಲ್ಲಿ ತೆರಿಗೆದಾರರ 2.73ಲಕ್ಷ ಕೋಟಿ ರೂ. ಹಣವನ್ನು ಉಳಿತಾಯ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸರ್ಕಾರಿ ಯೋಜನೆಗಳ ಪ್ರಯೋಜನ ಅರ್ಹ ಹಾಗೂ ಪ್ರಾಮಾಣಿಕ ಫಲಾನುಭವಿಗಳಿಗೆ ತಲುಪಿಸಲು ಹಾಗೂ ಹಣದ ದುರ್ಬಳಕೆ ತಡೆಗೆ ಡಿಬಿಟಿ ನೆರವು ನೀಡಿದೆ ಎಂದು ದಿಶಾ ಭಾರತ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ತಿಳಿಸಿದ್ದಾರೆ. ಸರ್ಕಾರ ಕೈಗೊಂಡ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಸೀತಾರಾಮನ್ ಕಳೆದ 9 ವರ್ಷಗಳಲ್ಲಿ ದಕ್ಷ ಆಡಳಿತದಿಂದಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಹಣ ದೊರಕುವಂತೆ ಮಾಡುವ ಸಾಧ್ಯತೆಯನ್ನು ಹೆಚ್ಚಿಸಲು ಸಾಧ್ಯವಾಗಿದೆ. ಇದಕ್ಕೆಲ್ಲ ಕಾರಣವಾಗಿದ್ದು ಡಿಬಿಟಿ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಲ್ಲದೆ, ಕರ್ನಾಟಕ ರಾಜ್ಯ ಸರ್ಕಾರದ ಹೆಸರು ಪ್ರಸ್ತಾಪಿಸದೆ ಉಚಿತ ಯೋಜನೆಗಳು ಮಧ್ಯಮ ವರ್ಗದವರ ಮೇಲಿನ ಹೊರೆಯನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ. 

ಡಿಬಿಟಿ ಮೂಲಕ ಪಿಂಚಣಿ, ಕೆಲಸಕ್ಕೆ ಹಣ, ಬಡ್ಡಿ ಹಾಗೂ ಎಲ್ ಪಿಜಿ ಗ್ಯಾಸ್ ಸಬ್ಸಿಡಿಯನ್ನು ಅರ್ಹ ಫಲಾನುಭವಿಗಳ ಆಧಾರ್ ಪರಿಶೀಲಿತ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ ಹಾಗೂ ಎಲ್ಲ ನಕಲಿ ಖಾತೆಗಳನ್ನು ನಿರ್ಮೂಲನ ಮಾಡಲು ಸಾಧ್ಯವಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. 2014ರಿಂದ ಡಿಬಿಟಿ ಅಡಿಯಲ್ಲಿ ಯೋಜನೆಗಳ ಸಂಖ್ಯೆಯನ್ನು ಕ್ರಮೇಣವಾಗಿ ಏರಿಕೆ ಮಾಡಲಾಗಿತ್ತು. ಈ ಮೂಲಕ 2.73ಲಕ್ಷ ಕೋಟಿ ರೂ. ಉಳಿತಾಯ ಮಾಡಲಾಗಿದೆ. ಈ ಹಣವನ್ನು ಈಗ ಅನೇಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. 
ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಇತರ ಸಾಧನೆಗಳ ಬಗ್ಗೆ ಕೂಡ ಮಾಹಿತಿಗಳನ್ನು ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದರು. ಸ್ಪರ್ಧೆ ಹಾಗೂ ಸರ್ಕಾರದ ಬೆಂಬಲಿತ ನೀತಿಗಳ ಕಾರಣದಿಂದ 2014ರಲ್ಲಿ ಪ್ರತಿ ಜಿಬಿಗೆ 308ರೂ. ಇದ್ದ ಮೊಬೈಲ್ ಡೇಟಾ ವೆಚ್ಚ ಈಗ 9.94ರೂ.ಗೆ ಇಳಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 11.72 ಕೋಟಿ ಟಾಯ್ಲೆಟ್ ಗಳು ಹಾಗೂ 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಹಣಕಾಸು ಸಚಿವೆ ಮಾಹಿತಿ ನೀಡಿದ್ದಾರೆ.

RBI ರೆಪೋ ದರ ಏರಿಕೆ ಮಾಡದಿದ್ರೂ ಸಾಲದ ಬಡ್ಡಿದರ ಹೆಚ್ಚಿಸಿವೆ ಈ ಬ್ಯಾಂಕ್ ಗಳು; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ

ಇನ್ನು ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ (ಪಿಎಂ ಸ್ವನಿಧಿ) ಅಡಿಯಲ್ಲಿ 39.76 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಅಡಮಾನವಿಲ್ಲದೆ ಸಾಲಗಳನ್ನು ನೀಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 9.6 ಕೋಟಿ ಎಲ್ ಪಿಜಿ ಕನೆಕ್ಷನ್ ಗಳನ್ನು ನೀಡಲಾಗಿದೆ. ಎಸ್ ಸಿ/ಎಸ್ ಟಿ ಫಲಾನುಭವಿಗಳಿಗೆ ಸ್ಟ್ಯಾಂಡ್ ಅಪ್ ಇಂಡಿಯಾ ಅಡಿಯಲ್ಲಿ ಎಸ್ ಸಿ/ಎಸ್ ಟಿ ಫಲಾನುಭವಿಗಳಿಗೆ 7,351 ಕೋಟಿ ರೂ. ಮೊತ್ತದ ಸಾಲ ನೀಡಲಾಗಿದೆ. ಬೇರುಮಟ್ಟದಿಂದ ಜನರಲ್ಲಿ ಉದ್ಯಮಶೀಲತೆ ಉತ್ತೇಜಿಸಲು ಈ ಸ್ಟ್ಯಾಂಡ್ ಅಪ್ ಇಂಡಿಯಾ ಕಾರ್ಯಕ್ರಮ ರೂಪಿಸಲಾಗಿದೆ ಎಂಬ ಮಾಹಿತಿಯನ್ನು ನಿರ್ಮಲಾ ಸೀತಾರಾಮನ್ ನೀಡಿದ್ದಾರೆ.

ಸರ್ಕಾರಕ್ಕೆ 45 ಸಾವಿರ ಕೋಟಿ ರೂ. ಉಳಿಸಿದ ಸರ್ಕಾರಿ ಇ-ಮಾರುಕಟ್ಟೆ, ಹೇಗೆ? ಇಲ್ಲಿದೆ ಮಾಹಿತಿ

ಹೆಸರು ಪ್ರಸ್ತಾಪಿಸದೆ ರಾಜ್ಯ ಸರ್ಕಾರವನ್ನು ಟೀಕಿಸಿದ ಸಚಿವೆ
ಅನೇ ರಾಜಕೀಯ ಪಕ್ಷಗಳು ಜನರಿಗೆ ಉಚಿತಗಳ ಭರವಸೆ ನೀಡಿರುವ ಬಗ್ಗೆ ಕೂಡ ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಅನೇಕ ರಾಜ್ಯಗಳು ಉಚಿತ ಯೋಜನೆಗಳನ್ನು ನೀಡಲು ಪ್ರಯತ್ನಿಸುತ್ತವೆ. ಆದರೆ, ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಒಟ್ಟಾರೆ ಎಲ್ಲ ಕೆಲಸಗಳಿಗೂ ದೊಡ್ಡ ಮೊತ್ತದ ಅನುದಾನದ ಕೊರತೆ ಎದುರಾಗುತ್ತದೆ. ಅಲ್ಲದೆ, ಇದು ಮಧ್ಯಮ ವರ್ಗದ ಜನರ ಮೇಲೆ ಹೆಚ್ಚಿನ ಹೊರೆಯಾಗುತ್ತದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯದ ಹೆಸರನ್ನು ಪ್ರಸ್ತಾಪಿಸದೆ ಮಾತನಾಡಿದ ಸಚಿವೆ, ಉಚಿತ ವಿದ್ಯುತ್ ಅಥವಾ ಉಚಿತ ಬಸ್ ಪ್ರಯಾಣದ ವಾಗ್ದಾನ ನೀಡೋದ್ರಿಂದ ಆ ಎಲ್ಲ ಭರವಸೆಗಳನ್ನು ಈಡೇರಿಸಲು ಮಧ್ಯಮ ವರ್ಗದ ಜನರು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.