ಸಿಎನ್ ಜಿ ಗ್ಯಾಸ್ ಬಳಸುವ ವಾಹನ ಸವಾರರಿಗೆ, ಪಿಎನ್ ಜಿ ಅಡುಗೆ ಅನಿಲ ಬಳಸುವ ಗೃಹಿಣಿಯರಿಗೆ ನಾಳೆ ಖುಷಿಯಾಗೋದು ಗ್ಯಾರಂಟಿ. ಏಕೆಂದ್ರೆ ನಾಳೆಯಿಂದ ದೇಶಾದ್ಯಂತ ಸಿಎನ್ ಜಿ ಹಾಗೂ ಪಿಎನ್ ಜಿ ಬೆಲೆಯಲ್ಲಿ ಶೇ.10ರಷ್ಟು ಇಳಿಕೆಯಾಗಲಿದೆ. ನೈಸರ್ಗಿಕ ಅನಿಲಗಳ ಬೆಲೆ ನಿಗದಿಪಡಿಸುವ ಹೊಸ ವಿಧಾನಕ್ಕೆ ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ.

ನವದೆಹಲಿ (ಏ.7): ಗೃಹ ಹಾಗೂ ವಾಹನಗಳಲ್ಲಿ ಬಳಸುವ ಪಿಎನ್ ಜಿ ಹಾಗೂ ಸಿಎನ್ ಜಿ ಗ್ಯಾಸ್ ಬೆಲೆಯಲ್ಲಿ ನಾಳೆಯಿಂದ ಇಳಿಕೆಯಾಗಲಿದೆ.ನೈಸರ್ಗಿಕ ಅನಿಲಗಳ ಬೆಲೆ ನಿಗದಿಪಡಿಸುವ ಹೊಸ ವಿಧಾನಕ್ಕೆ ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ. ಈ ಹೊಸ ಬೆಲೆ ನಿಗದಿ ವಿಧಾನದಿಂದ ಗೃಹ ಬಳಕೆಯ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್ ಜಿ) ಶೇ.10ರಷ್ಟುಅಗ್ಗವಾಗಲಿದೆ. ಹಾಗೆಯೇ ವಾಹನಗಳಲ್ಲಿ ಬಳಸುವ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ಬೆಲೆ ಶೇ.6-9ರಷ್ಟು ಇಳಿಕೆ ಕಾಣಲಿದೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅನಿಲ ದರದ ಆಧಾರದಲ್ಲಿ ನಿಗದಿಪಡಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಭಾರತೀಯ ಬಾಸ್ಕೆಟ್ (ದೇಶೀಯ ಮಾರುಕಟ್ಟೆ ಹಾಗೂ ಆಮದು ಬೆಲೆ) ದರದ ಆಧಾರದಲ್ಲಿ ಅನಿಲದ ಬೆಲೆ ನಿಗದಿಪಡಿಸಲಾಗುತ್ತದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ಸಭೆ ಬಳಿಕ ಈ ಬಗ್ಗೆ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಇಂದು (ಏ.7) ಸರ್ಕಾರ ಅಧಿಸೂಚನೆ ಹೊರಡಿಸಲಿದ್ದು, ನಾಳೆಯಿಂದ (ಏ.8) ಜಾರಿಗೆ ಬರಲಿದೆ ಎಂದು ಠಾಕೂರ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಇಲ್ಲಿಯ ತನಕ ಸಿನ್ ಜಿ ಹಾಗೂ ಪಿಎನ್ ಜಿ ಗ್ಯಾಸ್ ಬೆಲೆಯನ್ನು ವರ್ಷದಲ್ಲಿ ಎರಡು ಬಾರಿ ಅಥವಾ ಆರು ತಿಂಗಳಿಗೊಮ್ಮೆ ನಿರ್ಧರಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆ.

ಸರ್ಕಾರದ ಪ್ರಮುಖ ನಿರ್ಧಾರಗಳು ಹೀಗಿವೆ:
*ಇಲ್ಲಿಯ ತನಕ ದೇಶೀಯ ಅನಿಲ ಬೆಲೆಯನ್ನು 2014ರ ದೇಶೀಯ ಅನಿಲ ಬೆಲೆ ಮಾರ್ಗಸೂಚಿಗಳ ಅನ್ವಯ ನಿರ್ಧರಿಸಲಾಗುತ್ತಿತ್ತು. ಅಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಆಧಾರದಲ್ಲಿ ದೇಶೀಯ ಅನಿಲ ಬೆಲೆ ನಿರ್ಧರಿಸಲಾಗುತ್ತಿತ್ತು. ಜಗತ್ತಿನ ನಾಲ್ಕು ಅನಿಲ ಟ್ರೇಡಿಂಗ್ ತಾಣಗಳಾದ ಹೆನ್ರಿ ಹಬ್, ಅಲ್ಬೆನ, ರಾಷ್ಟ್ರೀಯ ಬ್ಯಾಲೆನ್ಸಿಂಗ್ ಪಾಯಿಂಟ್ (ಯುಕೆ) ಹಾಗೂ ರಷ್ಯಾದಲ್ಲಿನ ಬೆಲೆ ಆಧರಿಸಿ ಆರು ತಿಂಗಳಿಗೊಮ್ಮೆ ದೇಶೀಯ ಅನಿಲ ಬೆಲೆ ನಿರ್ಧರಿಸಲಾಗುತ್ತಿತ್ತು. ಆದರೆ, ಈ ಮಾರ್ಗಸೂಚಿಯನ್ನು ಸರ್ಕಾರ ಈಗ ಬದಲಾಯಿಸಿದೆ.
*ಇನ್ಮುಂದೆ ಅಂತಾರಾಷ್ಟ್ರೀಯ ಅನಿಲ ಮಾರಾಟ ತಾಣಗಳ ಬೆಲೆಯನ್ನು ಪರಿಗಣಿಸುವ ಬದಲು ಆಮದು ಮಾಡಿಕೊಂಡಿರುವ ಅನಿಲ ಬೆಲೆಯನ್ನು ಆಧರಿಸಿ ದೇಶೀಯ ಅನಿಲ ದರ ನಿಗದಿಪಡಿಸಲಾಗುತ್ತದೆ. ಅಲ್ಲದೆ, ದೇಶೀಯ ಅನಿಲ ಬೆಲೆ ಭಾರತೀಯ ಕಚ್ಚಾ ತೈಲ ಬಾಸ್ಕೆಟ್ ಅಂತಾರಾಷ್ಟ್ರೀಯ ದರದ ಶೇ.10ರಷ್ಟು ಆಗಿರಲಿದೆ.

ಬಡ್ಡಿ ದರ ಏರಿಕೆಗೆ ರಿಸರ್ವ್‌ ಬ್ಯಾಂಕ್ ತಾತ್ಕಾಲಿಕ ತಡೆ: ಸಾಲಗಾರರು ಖುಷ್‌

*ದೇಶೀಯ ಅನಿಲ ದರವನ್ನು ಇನ್ನು ಮುಂದೆ ಆರು ತಿಂಗಳ ಬದಲು ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆ. 
*ದೇಶೀಯ ಅನಿಲದ ಗರಿಷ್ಠ ಹಾಗೂ ಕನಿಷ್ಠ ಬೆಲೆ ನಿಗದಿಪಡಿಸಲಾಗಿದೆ. ಕನಿಷ್ಠ ದರ 4 ಡಾಲರ್ ಹಾಗೂ ಗರಿಷ್ಠ ದರ 6.5 ಡಾಲರ್ ಗೆ ನಿಗದಿಪಡಿಸಲಾಗಿದೆ. 

ಪ್ರಯೋಜನವೇನು?
ಇಲ್ಲಿಯ ತನಕ 2014ರ ನವೆಂಬರ್ 1ರ ಮಾರ್ಗಸೂಚಿ ಅನ್ವಯ ಅಡುಗೆ ಅನಿಲದ ಬೆಲೆ ನಿಗದಿಪಡಿಸಲಾಗುತ್ತಿತ್ತು. ಈ ವಿಧಾನದಲ್ಲಿ ಆರು ತಿಂಗಳಿಗೊಮ್ಮೆ ಬೆಲೆ ನಿಗದಿಪಡಿಸಲಾಗುತ್ತಿತ್ತು. ಇದ್ರಿಂದ ಈ ಅವಧಿಯ ಮಧ್ಯದಲ್ಲಿ ಎಲ್ಲಾದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರ ಹೆಚ್ಚಳವಾದ್ರೆ ಆಗ ಅನಿಲ ಕಂಪನಿಗಳಿಗೆ ನಷ್ಟವಾಗುತ್ತಿತ್ತು. ಹಾಗೆಯೇ ಅನಿಲ ದರ ತಗ್ಗಿದ್ರೆ ಆಗ ಗ್ರಾಹಕರಿಗೆ ಅದರ ಪ್ರಯೋಜನ ಸಿಗುತ್ತಿರಲಿಲ್ಲ. ಆದರೆ, ಹೊಸ ಬೆಲೆ ನಿಗದಿ ವಿಧಾನದಿಂದ ಅನಿಲ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆಯಾದ್ರೆ ಅದ್ರಿಂದ ಕಂಪನಿ ಹಾಗೂ ಗ್ರಾಹಕರು ಇಬ್ಬರಿಗೂ ಯಾವುದೇ ತೊಂದರೆಯಾಗುವುದಿಲ್ಲ.ಇನ್ನು ಅನಿಲ ದರದ ಕನಿಷ್ಠ ಹಾಗೂ ಗರಿಷ್ಠ ಮಿತಿಯನ್ನು ನಿಗದಿಪಡಿಸಿರುವ ಕಾರಣ ಭಾರೀ ಪ್ರಮಾಣದಲ್ಲಿ ಏರಿಕೆ ಅಥವಾ ಇಳಿಕೆಯಾದ್ರೂ ಯಾವುದೇ ತೊಂದರೆಯಾಗುವುದಿಲ್ಲ.

ವಾರ್ಷಿಕ 7 ಲಕ್ಷ ವೇತನದವನಿಗೆ 113 ಕೋಟಿ ತೆರಿಗೆ ಕಟ್ಟುವಂತೆ ಐಟಿ ನೋಟಿಸ್

ಬೆಲೆ ಎಷ್ಟಾಗಲಿದೆ?
ಉದಾಹರಣೆಗೆ ಸಿಎನ್ ಜಿ ಬೆಲೆ ಪುಣೆಯಲ್ಲಿ ಕೆಲಜಿಗೆ 92ರೂ. ಇದ್ದರೆ ಇದು 87ರೂ.ಗೆ ಇಳಿಕೆಯಾಗಲಿದೆ. ಹಾಗೆಯೇ ಪಿಎನ್ ಜಿ ಬೆಲೆ ಕೆಜಿಗೆ 57ರೂ. ಇದ್ದರೆ 52ರೂ.ಗೆ ಇಳಿಕೆಯಾಗಲಿದೆ. ಹಾಗೆಯೇ ಮುಂಬೈನಲ್ಲಿ 54ರೂ. ಇದ್ದರೆ, 52ರೂ.ಗೆ ಇಳಿಕೆಯಾಗಲಿದೆ. ದೆಹಲಿಯಲ್ಲಿ ಪಿಎನ್ ಜಿ ಬೆಲೆ 53.49ರೂ.ನಿಂದ 47.49ರೂ.ಗೆ ಇಳಿಕೆಯಾಗಲಿದೆ. ಇನ್ನು ಬೆಂಗಳೂರಿನಲ್ಲಿ 58.5ರೂ.ನಿಂದ 52ರೂ.ಗೆ ಇಳಿಕೆಯಾಗಲಿದೆ.