ಉದ್ಯೋಗಿಗಳಿಗೆ ಕಹಿಸುದ್ದಿ,ಇಪಿಎಫ್ ಬಡ್ಡಿದರ ಶೇ.8ಕ್ಕೆ ನಿಗದಿಪಡಿಸುವ ಸಾಧ್ಯತೆ!

ಇಪಿಎಫ್ ಠೇವಣಿಗಳ ಮೇಲಿನ  2021-22 ನೇ ಸಾಲಿನ ಬಡ್ಡಿದರವನ್ನು ಸರ್ಕಾರ  ಶೇ.8.5ರಿಂದ ಶೇ.8.1ಗೆ ತಗ್ಗಿಸಿತ್ತು. ಈ ಬಾರಿ ಕೂಡ ಇಪಿಎಫ್ ಠೇವಣಿಗಳ ಬಡ್ಡಿದರವನ್ನು ಸರ್ಕಾರ ಶೇ.8ಕ್ಕೆ ನಿಗದಿಪಡಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. 
 

Govt May Fix EPF Deposit Interest Rate at 8percent For 2022 23 CBT Likely To Meet Within A Month

ನವೆದಹಲಿ (ಫೆ.13): 2022-23ನೇ ಆರ್ಥಿಕ ಸಾಲಿಗೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿ ಮೇಲಿನ ಬಡ್ಡಿದರ ಹೆಚ್ಚಳವಾಗಬಹುದು ಎಂಬ ಉದ್ಯೋಗಿಗಳ ನಿರೀಕ್ಷೆ ಹುಸಿಯಾಗುವ ಸಾಧ್ಯತೆಯಿದೆ. ಈ ಬಾರಿ ಕೂಡ  ಇಪಿಎಫ್ ಠೇವಣಿ ಬಡ್ಡಿದರವನ್ನು ಶೇ.8ಕ್ಕೆ ನಿಗದಿಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದು ಹಿಂದಿನ ಸಾಲಿಗಿಂತ ಸ್ವಲ್ಪ ಕಡಿಮೆ. ಹಿಂದಿನ ಸಾಲಿನಲ್ಲಿ ಪಿಎಫ್ ಬಡ್ಡಿದರ ಶೇ.8.1ರಷ್ಟಿತ್ತು.  ಬಡ್ಡಿದರದ ಕುರಿತು ತೀರ್ಮಾನ ಕೈಗೊಳ್ಳಲು ಈ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಇಪಿಎಫ್ಒ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಸಭೆ ಸೇರುವ ನಿರೀಕ್ಷೆಯಿದೆ.  2022-23ನೇ ಸಾಲಿನ ಗಳಿಕೆಯನ್ನು ಆಧರಿಸಿ ಹಣಕಾಸು ಹೂಡಿಕೆ ಹಾಗೂ ಅಡಿಟ್ ಸಮಿತಿ ಬಡ್ಡಿದರ ನಿರ್ಧಾರದ ಕುರಿತು ಸಿಬಿಟಿಗೆ ಶಿಫಾರಸ್ಸು ಮಾಡುತ್ತದೆ. ಸಿಬಿಟಿ ಇಪಿಎಫ್ಒನ ತ್ರಿಪಕ್ಷ ಸಮಿತಿಯಾಗಿದ್ದು, ಇದರಲ್ಲಿ ಸರ್ಕಾರ, ಉದ್ಯೋಗಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳ ಪ್ರತಿನಿಧಿಗಳು ಇರುತ್ತಾರೆ. ಕೇಂದ್ರ ರ್ಕಾಮಿಕ ಸಚಿವರು ಸಿಬಿಟಿಯ ಮುಖ್ಯಸ್ಥರಾಗಿರುತ್ತಾರೆ. 2021-22ನೇ ಆರ್ಥಿಕ ಸಾಲಿನಲ್ಲಿ ಪಿಎಫ್ ಠೇವಣಿಗಳ ಬಡ್ಡಿದರವನ್ನು ಸರ್ಕಾರ  ಶೇ8.1ಕ್ಕೆ ಇಳಿಕೆ ಮಾಡಿತ್ತು. ನಾಲ್ಕು ದಶಕಗಳ ಬಳಿಕದ ಅತೀಕಡಿಮೆ ಬಡ್ಡಿದರವಾಗಿತ್ತು. 

ಇಪಿಎಫ್ ಠೇವಣಿಗಳ ಮೇಲಿನ  2021-22 ನೇ ಸಾಲಿನ ಬಡ್ಡಿದರವನ್ನು ಬಡ್ಡಿದರವನ್ನು ಸರ್ಕಾರ 2022ರ ಮಾರ್ಚ್ ನಲ್ಲಿ ಶೇ.8.5ರಿಂದ ಶೇ.8.1ಗೆ ತಗ್ಗಿಸಲು ನಿರ್ಧಾರ ಮಾಡಿತ್ತು. ಇದಕ್ಕೆ ಕಾರ್ಮಿಕ ಸಂಘಟನೆಗಳು ಮತ್ತು ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇದರ ಹೊರತಾಗಿಯೂ, ಇಪಿಎಫ್‌ ಬಡ್ಡಿದರವನ್ನು ಶೇ.8.5ರಿಂದ ಶೇ.8.1ಕ್ಕೆ ಇಳಿಸುವ ಮಂಡಳಿ ನಿರ್ಧಾರವನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಅನುಮೋದಿಸಿತ್ತು.  1977-79ರ ನಂತರ ಇಪಿಎಫ್‌ ಮೇಲಿನ ಬಡ್ಡಿದರವು ಶೇ. 8.1ಕ್ಕೆ ಇಳಿಕೆಯಾಗಿದ್ದು ಇದೇ ಮೊದಲಾಗಿತ್ತು. 1977-78ರಲ್ಲಿ ಶೇ.8 ರಷ್ಟುಬಡ್ಡಿದರ ನೀಡಲಾಗಿತ್ತು.

ರೆಪೋ ದರ ಏರಿಕೆ: ವೈಯಕ್ತಿಕ ಸಾಲದ ಇಎಂಐ ಎಷ್ಟು ಹೆಚ್ಚುತ್ತೆ? ಇಲ್ಲಿದೆ ಮಾಹಿತಿ

ಇಪಿಎಫ್‌ ಠೇವಣಿಗಳಿಗೆ 2015-16ರಲ್ಲಿ ಶೇ.8.8, 2016-17ರಲ್ಲಿ ಶೇ.8.65, 2017-18ರಲ್ಲಿ ಶೇ.8.55, 2018-19ರಲ್ಲಿ ಶೇ.8.65, 2019-20ರಲ್ಲಿ ಶೇ.8.5 ಮತ್ತು 2020-21ರಲ್ಲಿ ಶೇ.8.5ರಷ್ಟುಬಡ್ಡಿ ನೀಡಲಾಗಿತ್ತು.

ಉದ್ಯೋಗಿಗಳ ಭವಿಷ್ಯ ನಿಧಿ, ಇದನ್ನು ಸಾಮಾನ್ಯವಾಗಿ ಪಿಎಫ್ (ಪ್ರಾವಿಡೆಂಟ್ ಫಂಡ್) ಎಂದು ಕರೆಯಲಾಗುತ್ತದೆ. ಇದು ನಿವೃತ್ತಿ ಅಥವಾ ನಿವೃತ್ತಿಯ ನಂತರದ ಪ್ರಯೋಜನ ಯೋಜನೆಯಾಗಿದೆ. ಈ ಸೌಲಭ್ಯವು ಎಲ್ಲ ವೇತನದಾರರಿಗೆ ಲಭ್ಯವಿದೆ.  ಭಾರತದಲ್ಲಿ ವೇತನ ಪಡೆಯುವ ಎಲ್ಲ ವ್ಯಕ್ತಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಖಾತೆ ಹೊಂದಿರುತ್ತಾರೆ. ಪ್ರತಿ ತಿಂಗಳು ನೌಕರರ ಮೂಲ ವೇತನದಿಂದ (Basic Salary) ಶೇ. 12ರಷ್ಟು ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.ಹಾಗೆಯೇ ಕಂಪನಿ (Company) ಕೂಡ ಶೇ.12 ರಷ್ಟು ಪಾಲನ್ನು ತನ್ನ ನೌಕರನ ಪಿಎಫ್ ಖಾತೆಗೆ ಜಮೆ ಮಾಡುತ್ತದೆ.

ಉತ್ತಮ ರಿಟರ್ನ್ಸ್ ನೀಡುವ ಅಂಚೆ ಇಲಾಖೆಯ 5 ಯೋಜನೆಗಳು ಇವೇ ನೋಡಿ

ಟಿಡಿಎಸ್ ಕಡಿತ ಇಳಿಕೆ
2023-24ನೇ ಸಾಲಿನ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ವಿತ್ ಡ್ರಾ ಮೇಲಿನ ಟಿಡಿಎಸ್ ಅನ್ನು ಶೇ.30ರಿಂದ ಶೇ.20ಕ್ಕೆ ಇಳಿಕೆ ಮಾಡಲಾಗಿದೆ. ಇದು ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಹೊಂದಿರದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಹೊಸ ತಿದ್ದುಪಡಿ 2023ರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.ಈ ಘೋಷಣೆಯಿಂದ ಇಪಿಎಫ್ಒ ದಾಖಲೆಗಳಲ್ಲಿ ಪ್ಯಾನ್ ಮಾಹಿತಿ ನವೀಕರಿಸದ ವ್ಯಕ್ತಿಗಳಿಗೆ ಪ್ರಯೋಜನವಾಗಲಿದೆ. ಪ್ರಸ್ತುತವಿರುವ ಆದಾಯ ತೆರಿಗೆ ಕಾನೂನಿನ ಅನ್ವಯ ಇಪಿಎಫ್ ಖಾತೆ ತೆರೆದು ಐದು ವರ್ಷದೊಳಗೆ ಹಣವನ್ನು ವಿತ್ ಡ್ರಾ ಮಾಡಿದ್ರೆ ಟಿಡಿಎಸ್ ಕಡಿತ ಮಾಡಲಾಗುತ್ತದೆ.  ವಿತ್ ಡ್ರಾ ಮೊತ್ತ 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿದ್ರೆ ಮಾತ್ರ ಟಿಡಿಎಸ್ ಕಡಿತ ಮಾಡಲಾಗುತ್ತದೆ.


 

Latest Videos
Follow Us:
Download App:
  • android
  • ios