ದೇಶೀಯ ಮಾರುಕಟ್ಟೆಯಲ್ಲಿ ಕುಚ್ಚಲಕ್ಕಿ ಲಭ್ಯತೆ ಹೆಚ್ಚಿಸಲು ಹಾಗೂ ಬೆಲೆಯೇರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ರಫ್ತಿನ ಮೇಲೆ ಶೇ.20ರಷ್ಟು ಸುಂಕ ವಿಧಿಸಿದೆ.
ನವದೆಹಲಿ (ಆ.26): ಆಹಾರ ಧಾನ್ಯಗಳ ಬೆಲೆ ಹೆಚ್ಚಳದ ತಡೆಗೆ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಕೆಲವು ಧಾನ್ಯಗಳ ರಫ್ತಿನ ಮೇಲೆ ಸುಂಕ ಹೆಚ್ಚಿಸುವ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಅವುಗಳ ಲಭ್ಯತೆಯನ್ನು ಹೆಚ್ಚಿಸಿ ಬೆಲೆಯೇರಿಕೆಗೆ ತಡೆ ಹಾಕಿದೆ. ಅದೇ ಮಾದರಿಯಲ್ಲಿಈಗ ಕುಚ್ಚಲಕ್ಕಿ ರಫ್ತಿನ ಮೇಲೆ ಶೇ.20ರಷ್ಟು ಸುಂಕ ವಿಧಿಸಿದೆ. ಕುಚ್ಚಲಕ್ಕಿ ಸ್ಥಳೀಯ ಸಂಗ್ರಹಣೆಯನ್ನು ಸಾಕಷ್ಟು ಪ್ರಮಾಣದಲ್ಲಿ ನಿರ್ವಹಣೆ ಮಾಡುವ ಜೊತೆಗೆ ದೇಶೀಯ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಆಗಸ್ಟ್ 25ರಂದು ವಿಧಿಸಿದ ರಫ್ತು ಸುಂಕ 2023ರ ಅಕ್ಟೋಬರ್ 16ರ ತನಕ ಜಾರಿಯಲ್ಲಿರಲಿದೆ ಎಂದು ಹಣಕಾಸು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಇನ್ನು ಈಗಾಗಲೇ ಬಂದರುಗಳಲ್ಲಿ ಸಂಗ್ರಹಿಸಲ್ಪಟ್ಟಿರುವ ಎಲ್ಇಒ ಅನುಮತಿ ಸಿಗದ ಹಾಗೂ ಅರ್ಹ ಎಲ್ ಸಿಎಸ್ ಅನ್ನು 2023ರ ಆಗಸ್ಟ್ 25ರ ಮುನ್ನ ಪಡೆದಿರುವ ಕುಚ್ಚಲಕ್ಕಿ ಮೇಲೆ ಸುಂಕ ವಿನಾಯ್ತಿ ನೀಡಲಾಗಿದೆ. ಈ ನಿಯಂತ್ರಣ ಕ್ರಮದ ಮೂಲಕ ಸರ್ಕಾರ ಬಾಸುಮತಿ ಹೊರತುಪಡಿಸಿ ಇತರೆಲ್ಲ ವಿಧದ ಅಕ್ಕಿಗಳ ಮೇಲೆ ನಿರ್ಬಂಧ ವಿಧಿಸಿದಂತಾಗಿದೆ. ಭಾರತದಿಂದ ರಫ್ತಾಗುವ ಒಟ್ಟು ಅಕ್ಕಿಯಲ್ಲಿ ಶೇ.25ರಷ್ಟು ಪಾಲನ್ನು ಬಾಸುಮತಿ ಹೊರತುಪಡಿಸಿ
ಇತರ ಅಕ್ಕಿಗಳು ಹೊಂದಿವೆ.
ಕಳೆದ ತಿಂಗಳು ಬಾಸುಮತಿ ಹೊರತುಪಡಿಸಿ ಇತರ ಬಿಳಿ ಅಕ್ಕಿಗಳ ರಫ್ತಿನ ಮೇಲೆ ಸರ್ಕಾರ ನಿರ್ಬಂಧ ವಿಧಿಸಿತ್ತು. ಈ ಮೂಲಕ ದೇಶೀಯ ಪೂರೈಕೆ ಉತ್ತೇಜಿಸುವ ಜೊತೆಗೆ ಚಿಲ್ಲರೆ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟಿತ್ತು. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ನುಚ್ಚಕ್ಕಿ ರಫ್ತಿನ ಮೇಲೆ ಸರ್ಕಾರ ನಿರ್ಬಂಧ ವಿಧಿಸಿತ್ತು. ಈ ಹಣಕಾಸು ಸಾಲಿನ ಏಪ್ರಿಲ್ -ಜೂನ್ ಅವಧಿಯಲ್ಲಿ ಸುಮಾರು 15.54 ಲಕ್ಷ ಟನ್ ಬಾಸ್ಮತಿಯೇತರ ಬಿಳಿ ಅಕ್ಕಿಯನ್ನು ರಫ್ತು ಮಾಡಲಾಗಿತ್ತು. ವರ್ಷದ ಹಿಂದೆ ಕೇವಲ 11.55 ಲಕ್ಷ ಟನ್ ಗಳಷ್ಟು ಅಕ್ಕಿಯನ್ನು ಮಾತ್ರ ರಫ್ತು ಮಾಡಲಾಗಿತ್ತು.
ಐತಿಹಾಸಿಕ 2410 ರು.ಗೆ ಈರುಳ್ಳಿ ಖರೀದಿ: ಕೇಂದ್ರ ಸರ್ಕಾರ ಘೋಷಣೆ
ಆಹಾರ ಧಾನ್ಯಗಳ ಬೆಲೆ ಹೆಚ್ಚಳ ಹಾಗೂ ರಫ್ತಿನಲ್ಲಿ ಏರಿಕೆ ಹಿನ್ನೆಲೆಯಲ್ಲಿ ಬಾಸ್ಮತಿಯೇತರ ಬಿಳಿ ಅಕ್ಕಿ ರಫ್ತಿನ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ವಾರ್ಷಿಕ ರಿಟೇಲ್ ಅಥವಾ ಗ್ರಾಹಕರ ಬೆಲೆ ಆಧಾರಿತ ಹಣದುಬ್ಬರ ಜುಲೈ ತಿಂಗಳಲ್ಲಿ 15 ತಿಂಗಳ ಅಧಿಕ ಮಟ್ಟವಾದ ಶೇ.7.44 ತಲುಪಿದೆ. ಜೂನ್ ನಲ್ಲಿ ಇದು ಶೇ.4.87ರಷ್ಟಿತ್ತು. ಆಹಾರ ಧಾನ್ಯಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ ಹಣದುಬ್ಬರದಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ವಾರದ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆ ಹೆಚ್ಚಿಸಲು ಭಾರತ ಈರುಳ್ಳಿ ರಫ್ತಿನ ಮೇಲೆ ಶೇ.40ರಷ್ಟು ಸುಂಕ ವಿಧಿಸಿತ್ತು. ಇನ್ನು ಬೆಲೆ ಆಧಾರದಲ್ಲಿ ಭಾರತದ ಬಾಸುಮತಿ ಅಕ್ಕಿಯ ಒಟ್ಟು ರಫ್ತು ಬೆಲೆ ಆಧಾರದಲ್ಲಿ 4.8 ಬಿಲಿಯನ್ ಡಾಲರ್ ಇತ್ತು. ಇನ್ನು ಗಾತ್ರದ ಆಧಾರದಲ್ಲಿ ಇದು 45.6 ಲಕ್ಷ ಟನ್ ಗಳಷ್ಟಿತ್ತು. ಇನ್ನು ಬಾಸ್ಮತಿಯೇತರ ಅಕ್ಕಿ ರಫ್ತು ಕಳೆದ ಆರ್ಥಿಕ ಸಾಲಿನಲ್ಲಿ ಬೆಲೆಯಲ್ಲಿ 6.36 ಬಿಲಿಯನ್ ಡಾಲರ್ ಇತ್ತು. ಇನ್ನು ಗಾತ್ರದ ಆಧಾರದಲ್ಲಿ 177.9 ಲಕ್ಷ ಟನ್ ಗಳಷ್ಟಿತ್ತು.
ಡಿ.31ರ ವರೆಗೆ ಈರುಳ್ಳಿ ರಫ್ತು ಮೇಲೆ ಶೇ.40 ರಷ್ಟು ಸುಂಕ
2022-23ನೇ ಸಾಲಿನ ಬೆಳೆ ವರ್ಷದಲ್ಲಿ (ಜುಲೈ-ಜೂನ್) ಭಾರತದ ಅಕ್ಕಿ ಉತ್ಪಾದನೆ ಅಂದಾಜು 135.54 ಮಿಲಿಯನ್ ಟನ್ ಗಳಿಗೆ ಏರಿಕೆಯಾಗಿದೆ. ಅದಕ್ಕಿಂತ ಹಿಂದಿನ ಸಾಲಿನಲ್ಲಿ ಇದು 129.47 ಮಿಲಿಯನ್ ಟನ್ ಗಳಷ್ಟಿತ್ತು ಎಂದು ಕೃಷಿ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ಭಾರತ ಕೂಡ ಜಗತ್ತಿನ ಅತೀದೊಡ್ಡ ಅಕ್ಕಿ ರಫ್ತು ರಾಷ್ಟ್ರಗಳಲ್ಲಿ ಒಂದಾಗಿದ್ದು, 2021ರಲ್ಲಿ ಭಾರತದ ಅಕ್ಕಿ ರಫ್ತು 21.5 ಮಿಲಿಯನ್ ಟನ್ ಗೆ ತಲುಪಿತ್ತು. ಇದು ಉಳಿದ ನಾಲ್ಕು ಅತೀದೊಡ್ಡ ಅಕ್ಕಿ ರಫ್ತು ರಾಷ್ಟ್ರಗಳಾದ ಥೈಲ್ಯಾಂಡ್, ವಿಯೆಟ್ನಾಂ, ಪಾಕಿಸ್ತಾನ ಹಾಗೂ ಅಮೆರಿಕದ ಒಟ್ಟು ಶಿಪ್ಪ್ ಮೆಂಟ್ ಗಿಂತ ಹೆಚ್ಚಿದೆ.
