ನವದೆಹಲಿ(ಡಿ.02): ನವೆಂಬರ್‌ ತಿಂಗಳಿನಲ್ಲಿ ಸರ್ಕಾರದ ಬೊಕ್ಕಸಕ್ಕೆ 1.04 ಲಕ್ಷ ಕೋಟಿ ರು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹರಿದುಬಂದಿದೆ. ಅದರೊಂದಿಗೆ, ಸತತ ಎರಡನೇ ತಿಂಗಳು 1 ಲಕ್ಷ ಕೋಟಿ ರು.ಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾದಂತಾಗಿದೆ. ಅಕ್ಟೋಬರ್‌ನಲ್ಲಿ 1.05 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು.

ಕೊರೋನಾ ವೈರಸ್‌ ತಡೆಯಲು ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ಉಂಟಾದ ಆರ್ಥಿಕ ಹಿಂಜರಿಕೆಯಿಂದ ಜಿಎಸ್‌ಟಿ ಸಂಗ್ರಹ ಕೂಡ ತೀವ್ರ ಪ್ರಮಾಣದಲ್ಲಿ ಕುಸಿದಿತ್ತು. ಅದು ಕೆಲ ತಿಂಗಳಿನಿಂದ ಚೇತರಿಸಿಕೊಳ್ಳುತ್ತಿದ್ದು, ದೇಶದ ಆರ್ಥಿಕತೆ ಮೊದಲಿನ ಹಂತಕ್ಕೆ ತಲುಪುವ ಆಶಾಭಾವನೆ ಮೂಡಿಸಿದೆ. ಗಮನಾರ್ಹ ಸಂಗತಿಯೆಂದರೆ, 2020ರ ನವೆಂಬರ್‌ನಲ್ಲಿ ಸಂಗ್ರಹವಾದ ಜಿಎಸ್‌ಟಿ 2019ರ ನವೆಂಬರ್‌ನಲ್ಲಿ ಸಂಗ್ರಹವಾದ ಜಿಎಸ್‌ಟಿಗಿಂತ ಶೇ.1.4ರಷ್ಟುಹೆಚ್ಚಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ 1.03 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು.

ನವೆಂಬರ್‌ ತಿಂಗಳಿನಲ್ಲಿ ಆಮದಿನಿಂದ ಬಂದ ಆದಾಯ ಕಳೆದ ವರ್ಷದ ಇದೇ ಅವಧಿಗಿಂತ ಶೇ.4.9ರಷ್ಟುಹಾಗೂ ದೇಸೀ ವ್ಯವಹಾರಗಳಿಂದ ಬಂದ ಆದಾಯ ಶೇ.0.5ರಷ್ಟುಹೆಚ್ಚಾಗಿದೆ. ನವೆಂಬರ್‌ನ ಒಟ್ಟು 1.04 ಲಕ್ಷ ಕೋಟಿ ರು. ಆದಾಯದಲ್ಲಿ ಕೇಂದ್ರದ ಜಿಎಸ್‌ಟಿ 19,189 ಕೋಟಿ, ರಾಜ್ಯಗಳ ಜಿಎಸ್‌ಟಿ 25,540 ಕೋಟಿ ಹಾಗೂ ಐಜಿಎಸ್‌ಟಿ 51,992 ಕೋಟಿ ರು. ಆಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ತಿಳಿಸಿದೆ.

ಕಳೆದ ವಿತ್ತೀಯ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹ 12 ತಿಂಗಳ ಪೈಕಿ 8 ತಿಂಗಳಲ್ಲಿ 1 ಲಕ್ಷ ಕೋಟಿ ರು. ದಾಟಿತ್ತು. ಆದರೆ, ಈ ವರ್ಷ ಕೊರೋನಾದ ಕಾರಣದಿಂದ ಇಲ್ಲಿಯವರೆಗೆ 2 ತಿಂಗಳು ಮಾತ್ರ 1 ಲಕ್ಷ ಕೋಟಿ ರು. ದಾಟಿದ್ದು, 6 ತಿಂಗಳು ಲಕ್ಷ ಕೋಟಿ ರು.ಗಿಂತ ಕಡಿಮೆ ಸಂಗ್ರಹವಾಗಿದೆ.