ನವದೆಹಲಿ(ಆ.12): ನಕಲಿ ಕಂಪನಿಗಳ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದ್ದು, ಇದರ ಒಂದು ಭಾಗವಾಗಿ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಕಳೆದ ವಾರ 50,000 ಕಂಪನಿಗಳ ನೋಂದಣಿಯನ್ನು ರದ್ದುಪಡಿಸಿದೆ. 

ಕಳೆದ ಮೂರು ದಿನಗಳಲ್ಲಿ ದಿಲ್ಲಿಯ ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌(ಆರ್‌ಒಸಿ) 30,000 ಕಂಪನಿಗಳ ನೋಂದಣಿಯನ್ನು ರದ್ದುಗೊಳಿಸಿದೆ. ರಾಜಧಾನಿ ಆಚೆಯ 11,000 ಕಂಪನಿಗಳನ್ನು ಮುಂಬಯಿ ಆರ್‌ಒಸಿ ರದ್ದು ಮಾಡಿದೆ. ಇತರೆ ಆರ್‌ಒಸಿಗಳು ಉಳಿಕೆ ಕಂಪನಿಗಳನ್ನು ರದ್ದು ಮಾಡಿವೆ. 

ಸತತ ಎರಡು ವರ್ಷಗಳ ಕಾಲ ಯಾವುದೆ ವ್ಯವಹಾರ ನಡೆಸದ ಕಂಪನಿಗಳನ್ನು ರದ್ದು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳು ಈ ಪಟ್ಟಿಗೆ ಸೇರಲಿವೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 

ನೋಂದಣಿ ರದ್ದು ಮಾಡಿರುವ ಆದೇಶಗಳನ್ನು ಕಂಪನಿಗಳಿಗೆ ರವಾನಿಸಲಾಗಿದ್ದು, ನಕಲಿ ಕಂಪನಿಗಳ ವಿರುದ್ದದ ಸಮರ ಮುಂದುವರೆಯಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ ಸರ್ಕಾರ 2,50,000 ಕಂಪನಿಗಳ ನೋಂದಣಿಯನ್ನು ರದ್ದು ಮಾಡಿತ್ತು. ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ಅಂದಾಜಿನ ಪ್ರಕಾರ, ಈ ವರ್ಷವೂ ಇಷ್ಟೇ ಪ್ರಮಾಣದ ಕಂಪನಿಗಳ ನೋಂದಣಿ ರದ್ದಾಗುವ ಸಾಧ್ಯತೆಗಳಿವೆ.