ಲೋಕಸಭೆಯಲ್ಲಿ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ| ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಳಿಸಿದ ಕೇಂದ್ರ ಹಣಕಾಸು ಸಚಿವೆ| ಅರ್ಥ ಪಥದ ನೀಲನಕ್ಷೆ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್| NRI ಸಮುದಾಯಕ್ಕೆ ಬಂಪರ್ ಕೊಡುಗೆ ಘೋಷಣೆ| ಆಧಾರ್ ಕಾರ್ಡ್’ಗಾಗಿ NRI ಸಮುದಾಯ 180 ದಿನ ಕಾಯಬೇಕಿಲ್ಲ| ಭಾರತೀಯ ಪಾಸ್ ಪೋರ್ಟ್ ಮೂಲಕ ಶೀಘ್ರ ಆಧಾರ್ ಕಾರ್ಡ್ ವಿತರಣೆಗೆ ಅಸ್ತು|
ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಟ್ಟಿದ್ದಾರೆ. ಬಜೆಟ್ ಭಾಷಣ ಪೂರ್ಣಗೊಳಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಈ ವೇಳೇ ಅನಿವಾಸಿ ಭಾರತೀಯರಿಗೆ ಬಂಪರ್ ಕೊಡುಗೆ ಘೋಷಿಸಿರುವ ನಿರ್ಮಲಾ ಸೀತಾರಾಮನ್, NRI ಸಮುದಾಯವನ್ನು ಸಂತುಷ್ಟಗೊಳಿಸಿದ್ದಾರೆ.
ಭಾರತೀಯ ಪಾಸ್’ಪೋರ್ಟ್ ಬಳಸಿ ಭಾರತಕ್ಕೆ ಬಂದು ಆಧಾರ್ ಕಾರ್ಡ್ ಪಡೆಯಲು NRI ಸಮುದಾಯ ಇನ್ನು ಮುಂದೆ 180 ದಿನಗಳ ಕಾಯಬೇಕಾಗಿಲ್ಲ ಎಂದು ವಿತ್ತ ಸಚಿವರ ಸ್ಪಷ್ಟಪಡಿಸಿದ್ದಾರೆ.
ಸದ್ಯದ ಕಾನೂನಿನ ಪ್ರಕಾರ NRIಗಳು ಭಾರತೀಯ ಪಾಸ್ ಪೋರ್ಟ್ ಮೂಲಕ ಆಧಾರ್ ಕಾರ್ಡ್ ಪಡೆಯಲು 180 ದಿನ ಕಾಯಬೇಕು. ಆದರೆ ಈ ಕಾನೂನಿಗೆ ತಿದ್ದುಪಡಿ ಮಾಡಿರುವ ಸರ್ಕಾರ, ಶೀಘ್ರ ಆಧಾರ್ ಕಾರ್ಡ್ ವಿಲೇವಾರಿಗೆ ಕ್ರಮ ಕೈಗೊಂಡಿದೆ.
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಒಟ್ಟು 123.82 ಕೋಟಿ ಜನತೆಗೆ ಆಧಾರ್ ಕಾರ್ಡ್ ವಿತರಿಸಿದ್ದು, ಆಫ್ರಿಕಾ ಖಂಡದ ಹಲವು ಸ್ಥಳಗಳಲ್ಲಿ 18 ಹೊಸ ರಾಯಭಾರಿ ಕಚೇರಿಗಳನ್ನು ತೆರೆಯಲಾಗುವುದು ಎಂದು ಈ ವೇಳೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
