ರಾಜ್ಯಗಳಿಗೆ ಪರಿಹಾರ ಕೊಡಲು ಮಾಡಿದ್ದ ಸಾಲ ತೀರಿಸಲೆಂದು ಸೆಸ್ 4 ವರ್ಷ ವಿಸ್ತರಣೆ!
* ಜಿಎಸ್‌ಟಿ ಸೆಸ್ 4 ವರ್ಷ ವಿಸ್ತರಣೆ
* ತಂಬಾಕು, ಸಿಗರೆಟ್, ಐಷಾರಾಮಿ ವಸ್ತುಗಳಿಗೆ ವಿಧಿಸಲಾಗುವ ಹೊರೆ ಇದು
* ರಾಜ್ಯಗಳಿಗೆ ಪರಿಹಾರ ಕೊಡಲು ಮಾಡಿದ್ದ ಸಾಲ ತೀರಿಸಲೆಂದು ಸೆಸ್ ವಿಸ್ತರಣೆ
* ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಅವಧಿ ವಿಸ್ತರಣೆ ಬಗ್ಗೆ ಇನ್ನೂ ತೀರ್ಮಾನವಿಲ್ಲ
ನವದೆಹಲಿ(ಜೂ.26): ದುಬಾರಿ ಮೋಟರ್ ಸೈಕಲ್, ವಿಹಾರ ನೌಕೆಯಂತಹ ಐಷಾರಾಮಿ ವಸ್ತುಗಳು ಹಾಗೂ ತಂಬಾಕು, ಸಿಗರೆಟ್, ಹುಕ್ಕಾದಂತಹ ವಸ್ತುಗಳ ಮೇಲೆ ವಿಧಿಸಲಾಗುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರ ಸೆಸ್ ಅನ್ನು ಇನ್ನೂ ನಾಲ್ಕು ವರ್ಷ ವಿಸ್ತರಿಸಿ ಸರ್ಕಾರ ಆದೇಶಿಸಿದೆ.
2022ರ ಜು.1ರಿಂದ 2026ರ ಮಾ.31ರವರೆಗೂ ಈ ಸೆಸ್ ಇರಲಿದೆ. ಇದೇ ಜೂ.30ಕ್ಕೆ ಅಂತ್ಯಗೊಳ್ಳಬೇಕಿದ್ದ ಸೆಸ್ ಅನ್ನು 4 ವರ್ಷಗಳ ಕಾಲ ವಿಸ್ತರಿಸಿ ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ವಿಸ್ತರಣೆ ಏಕೆ?:
2020-21 ಹಾಗೂ 2021-22ನೇ ಸಾಲಿನಲ್ಲಿ ಕೋವಿಡ್‌ನಿಂದಾಗಿ ಜಿಎಸ್‌ಟಿ ಆದಾಯ ಖೋತಾ ಆಗಿತ್ತು. ಜಿಎಸ್‌ಟಿ ಜಾರಿ ಪೂರ್ವದಲ್ಲಿ ರಾಜ್ಯಗಳಿಗೆ ನೀಡಿದ್ದ ವಾಗ್ದಾನದಂತೆ 5 ವರ್ಷಗಳ ಅವಧಿಗೆ ಪರಿಹಾರ ತುಂಬಿಕೊಡಬೇಕಿದ್ದ ಸರ್ಕಾರ, ಈ ಪರಿಹಾರ ಪಾವತಿಗೆ 2020-21ನೇ ಸಾಲಿನಲ್ಲಿ 1.1 ಲಕ್ಷ ಕೋಟಿ, 2021-22ನೇ ಸಾಲಿನಲ್ಲಿ 1.58 ಲಕ್ಷ ಕೋಟಿ ರು. ಸಾಲ ಮಾಡಿತ್ತು. ಆ ಸಾಲಕ್ಕೆ 2021-22ನೇ ಸಾಲಿಲ್ಲಿ 7500 ಕೋಟಿ ರು. ಬಡ್ಡಿ ಪಾವತಿಸಿದೆ. ಈ ವರ್ಷ 14 ಸಾವಿರ ಕೋಟಿ ರು. ಬಡ್ಡಿ ಪಾವತಿಸಬೇಕಿದೆ. 2023-24ನೇ ಸಾಲಿನಿಂದ ಅಸಲು ಮರುಪಾವತಿ ಆರಂಭವಾಗಲಿದ್ದು, 2026ರ ಮಾಚ್‌ರ್‍ವರೆಗೂ ಮುಂದುವರಿಯಲಿದೆ. ಅದಕ್ಕೆ ಹಣ ಹೊಂದಿಸಲು ಜಿಎಸ್‌ಟಿ ಪರಿಹಾರ ಸೆಸ್ ಅವಧಿಯನ್ನು ವಿಸ್ತರಿಸಲಾಗಿದೆ.
ಪರಿಹಾರ ಅವಧಿ ವಿಸ್ತರಣೆ ಮಾಹಿತಿ ಇಲ್ಲ:
ಜಿಎಸ್‌ಟಿ ಜಾರಿಯಾದ ಬಳಿಕ 5 ವರ್ಷಗಳ ಅವಧಿಗೆ ರಾಜ್ಯಗಳಿಗೆ ಪರಿಹಾರ ತುಂಬಿಕೊಡುವುದಾಗಿ ಸರ್ಕಾರ ಹೇಳಿತ್ತು. ಆ ಐದು ವರ್ಷಗಳ ಅವಧಿ ಈಗ ಮುಕ್ತಾಯವಾಗುತ್ತಿದೆ. ಮತ್ತಷ್ಟುವರ್ಷ ಪರಿಹಾರ ಕೊಡಬೇಕು ಎಂದು ರಾಜ್ಯಗಳು ಮೊರೆ ಇಡುತ್ತಿವೆ. ಆ ಕುರಿತು ಮುಂಬರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.