ನವದೆಹಲಿ(ಅ.10): ಈರುಳ್ಳಿ ರಫ್ತಿಗೆ ನಿಷೇಧ ಹೇರಿದ್ದರಿಂದ ಕಂಗಾಲಾಗಿದ್ದ ಕರ್ನಾಟಕ, ಆಂಧ್ರಪ್ರದೇಶದ ಈರುಳ್ಳಿ ಬೆಳೆಗಾರರಿಗೆ ಇದೀಗ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಫ್ತಿನ ಮೇಲೆ ಹೇರಿದ್ದ ನಿಷೇಧವನ್ನು ಶುಕ್ರವಾರ ಕೇಂದ್ರ ಸರ್ಕಾರ ಸಡಿಲಗೊಳಿಸಿದ್ದು, ಬೆಂಗಳೂರು ಗುಲಾಬಿ ಈರುಳ್ಳಿ ಮತ್ತು ಆಂಧ್ರಪ್ರದೇಶದ ಕೃಷ್ಣಾಪುರಂ ಈರುಳ್ಳಿ ಬೆಳೆಗಾರರಿಗೆ ಷರತ್ತು ಬದ್ಧ ರಫ್ತಿಗೆ ಅನುಮತಿ ನೀಡಿದೆ. ಆದರೆ ಉಳಿದ ವಿಧದ ಈರುಳ್ಳಿ ಮೇಲಿನ ರಫ್ತು ನಿಷೇಧ ಇನ್ನೂ ತೆರವುಗೊಂಡಿಲ್ಲ.

ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ, ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ 2021ರ ಮಾಚ್‌ರ್‍ 31ರವರೆಗೆ 10,000 ಟನ್‌ವರೆಗೆ ಬೆಂಗಳೂರು ಗುಲಾಬಿ ಈರುಳ್ಳಿ ಮತ್ತು ಕೃಷ್ಣಾಪುರ ಈರುಳ್ಳಿಗಳನ್ನು ರಫ್ತು ಮಾಡಬಹುದು. ಆದರೆ ಚೆನ್ನೈ ಬಂದರಿಂದ ಮಾತ್ರ ರಫ್ತು ಮಾಡಬೇಕು ಎಂದು ಷರತ್ತು ವಿಧಿಸಿದೆ. ಅಲ್ಲದೆ ಬೆಂಗಳೂರು ಗುಲಾಬಿ ಈರುಳ್ಳಿ ರಫ್ತಿಗೆ ಕರ್ನಾಟಕ ಸರ್ಕಾರದ ತೋಟಗಾರಿಕಾ ಆಯುಕ್ತರಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು. ಕೃಷ್ಣಾಪುರಂ ಈರುಳ್ಳಿ ರಫ್ತಿಗೆ ಆಂಧ್ರಪ್ರದೇಶ ಸರ್ಕಾರದಿಂದ ಪ್ರಮಾಣಪತ್ರ ಪಡೆದಿರಬೇಕು ಎಂದು ತಿಳಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಗುಲಾಬಿ ಈರುಳ್ಳಿಗೆ ಬೇಡಿಕೆ ಇಲ್ಲ. ಆದರೆ ಆಗ್ನೇಯ ಏಷ್ಯಾ ದೇಶಗಳಾದ ಮಲೇಷಿಯಾ, ಸಿಂಗಾಪುರ, ಥಾಯ್ಲೆಂಡ್‌ ಮತ್ತು ತೈವಾನ್‌ನಲ್ಲಿ ಈ ಈರುಳ್ಳಿಗೆ ಬೇಡಿಕೆ ಇದೆ. ಹಾಗಾಗಿ 10,000 ಟನ್‌ ಗುಲಾಬಿ ಈರುಳ್ಳಿ ರಫ್ತಿಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ರೈತರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು. ಕೃಷ್ಣಾಪುರಂ ಈರುಳ್ಳಿ ಸಹ ಅದರ ಗಾತ್ರ ಹಾಗೂ ಖಾರದ ಕಾರಣದಿಂದಾಗಿ ಭಾರತದಲ್ಲಿ ಬಳಕೆಯಾಗುತ್ತಿಲ್ಲ. ಈ ಈರುಳ್ಳಿಗಳನ್ನು ಥಾಯ್ಲೆಂಡ್‌, ಹಾಂಕಾಂಗ್‌, ಮಲೇಷಿಯಾ, ಶ್ರೀಲಂಕಾ ಮತ್ತು ಸಿಂಗಾಪುರಗಳಿಗೆ ರಫ್ತು ಮಾಡಲಾಗುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದ್ದರಿಂದ ಕೇಂದ್ರ ಸರ್ಕಾರ ಸೆ.14ರಂದು ಎಲ್ಲ ರೀತಿಯ ಈರುಳ್ಳಿ ರಫ್ತಿಗೆ ನಿಷೇಧ ಹೇರಿತ್ತು.