ನವದೆಹಲಿ[ಜ.10]: ಎಲ್‌ಪಿಜಿ ಹಾಗೂ ಸೀಮೆಎಣ್ಣೆಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ಎಲ್ಲ ಬಗೆಯ ಅಡುಗೆ ಅನಿಲಗಳಿಗೂ ಕೇಂದ್ರ ಸರ್ಕಾರ ವಿಸ್ತರಣೆ ಮಾಡುವ ಸಾಧ್ಯತೆ ಕಂಡುಬರುತ್ತಿದೆ.

ನೈಸರ್ಗಿಕ ಅನಿಲ ಹಾಗೂ ಜೈವಿಕ ಅನಿಲ (ಬಯೋ ಗ್ಯಾಸ್‌) ಸೇರಿದಂತೆ ಅಡುಗೆ ತಯಾರಿಕೆಗೆ ಬಳಸುವ ಎಲ್ಲ ಬಗೆಯ ಅನಿಲಗಳಿಗೂ ಸಬ್ಸಿಡಿ ವಿಸ್ತರಿಸಬೇಕು. ತನ್ಮೂಲಕ ಜನರನ್ನು ಪರಾರ‍ಯಯ ಇಂಧನಗಳತ್ತ ಆಕರ್ಷಿಸಬೇಕು ಎಂದು ನೀತಿ ಆಯೋಗ ನೀಡಿದ್ದ ಪ್ರಸ್ತಾವನೆಯನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಈ ವಿಚಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಸ್ಥಾನ ಪಡೆಯಲೂಬಹುದು ಎನ್ನಲಾಗುತ್ತಿದೆ.

ನಗರ ಪ್ರದೇಶಗಳಲ್ಲಿ ಪೈಪ್‌ಗಳ ಮೂಲಕ ಸರಬರಾಜಾಗುವ ನೈಸರ್ಗಿಕ ಅನಿಲ (ಪಿಎನ್‌ಜಿ) ಬಳಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕಚ್ಚಾ ವಸ್ತುಗಳನ್ನು ಬಳಸಿ ಜೈವಿಕ ಅನಿಲ ತಯಾರಿಸಿ, ಅಡುಗೆಗೆ ಉಪಯೋಗಿಸಲಾಗುತ್ತಿದೆ. ಎಲ್‌ಪಿಜಿ ಹಾಗೂ ಸೀಮೆಎಣ್ಣೆಯಂತಹ ಅಡುಗೆ ತಯಾರಿಕಾ ಇಂಧನಕ್ಕೆ ಸಿಗುತ್ತಿರುವ ಸಬ್ಸಿಡಿಯನ್ನು ಈ ಅನಿಲಗಳಿಗೂ ವಿಸ್ತರಿಸಬೇಕು ಎಂದು ಕಳೆದ ವರ್ಷವೇ ಪೆಟ್ರೋಲಿಯಂ ಸಚಿವಾಲಯಕ್ಕೆ ನೀತಿ ಆಯೋಗ ಪತ್ರ ಬರೆದಿತ್ತು.

ಆ ಪ್ರಸ್ತಾವ ಜಾರಿಯಿಂದ ಆಗಬಹುದಾದ ಆರ್ಥಿಕ ಹೊರೆ ಕುರಿತು ಕೇಂದ್ರ ಸರ್ಕಾರ ಇದೀಗ ಸಂಬಂಧಿಸಿದ ಸಚಿವಾಲಯದಿಂದ ಮಾಹಿತಿ ಕೇಳಿದೆ. 2018-19ನೇ ಸಾಲಿನಲ್ಲಿ ಎಲ್‌ಪಿಜಿ ಸಬ್ಸಿಡಿಗಾಗಿ 20 ಸಾವಿರ ಕೋಟಿ ಹಾಗೂ ಸೀಮೆಎಣ್ಣೆ ಸಬ್ಸಿಡಿಗಾಗಿ 4500 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ತೆಗೆದಿರಿಸಿದೆ.