ಬೆಳ್ತಂಗಡಿ(ಅ.07): ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಹಣಕಾಸು ಸಚಿವಾಲಯದಲ್ಲಿ ಸಲಹೆಗಾರರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಮೂಲದ ಡಾ.ಶಶಾಂಕ ಭಿಡೆ ಇದೀಗ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ)ನ ಹಣಕಾಸು ನೀತಿ ಸಮಿತಿಗೆ ಸಲಹೆಗಾರರಾಗಿ ನಿಯುಕ್ತರಾಗಿದ್ದಾರೆ.

ಈ ಹುದ್ದೆಯು ಮೂರು ವರ್ಷದ ಅವಧಿಯದಾಗಿದ್ದು, ತಿಂಗಳಲ್ಲಿ ಒಂದು ದಿನ ಪ್ರಧಾನ ಮಂತ್ರಿಗಳೊಂದಿಗೆ ಆರ್ಥಿಕ ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ಅವರಿಗೆ ಸಿಗಲಿದೆ. 67 ವರ್ಷದ ಶಶಾಂಕ್‌ ಭಿಡೆ ಪ್ರಸ್ತುತ ಪ್ರಸ್ತುತ ದೆಹಲಿಯ ಎನ್‌ಸಿಎಇಆರ್‌ನಲ್ಲಿ ಹಿರಿಯ ಸಂಶೋಧನಾ ಸಲಹೆಗಾರರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕೊಂಬಿನಡ್ಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಉಜಿರೆ ಎಸ್‌ಡಿಎಂನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದಿರುವ ಭಿಡೆ ಅವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪಡೆದಿದ್ದಾರೆ. ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಿಂದ ಎಂಎಸ್ಸಿ ಪಡೆದು, ಅಮೆರಿಕದ ಅಯೋವಾ ಸ್ಟೇಟ್‌ ಯೂನಿವರ್ಸಿಟಿಯಿಂದ ಕೃಷಿ ಅರ್ಥಶಾಸ್ತ್ರದಲ್ಲಿ ಪಿಎಚ್‌.ಡಿ ಪಡೆದಿದ್ದಾರೆ.

ಭಿಡೆ ಅವರೊಂದಿಗೆ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್‌ ಡೆವಲಪ್ಮೆಂಟ್‌ ರಿಸಚ್‌ರ್‍ ಪ್ರೊಫೆಸರ್‌ ಅಶಿಮಾ ಗೋಯಲ್‌ ಹಾಗೂ ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌ ಪ್ರಾಧ್ಯಾಪಕ ಪ್ರೊ. ಜಯಂತ್‌ ಆರ್‌. ವರ್ಮಾ ಸಹ ನೇಮಕವಾಗಿದ್ದಾರೆ.

ಆಸ್ಪ್ರೇಲಿಯಾದ ದಕ್ಷಿಣ ಏಷ್ಯಾ ಸಂಶೋಧನಾ ಕೇಂದ್ರ, ಕ್ಯಾನ್ಬೆರಾದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲೂ ಅವರು ಕಾರ್ಯನಿರ್ವಹಿಸಿದ್ದರು.