Asianet Suvarna News Asianet Suvarna News

ಆದಾಯ ತೆರಿಗೆ ರೀಫಂಡ್ ಹೆಸರಲ್ಲಿ ವಂಚನೆ; ಎಚ್ಚರ ವಹಿಸುವಂತೆ ತೆರಿಗೆದಾರರಿಗೆ ಸರ್ಕಾರದ ಸಲಹೆ

ತೆರಿಗೆದಾರರಿಗೆ ಆದಾಯ ತೆರಿಗೆ ರೀಫಂಡ್ ಹೆಸರಲ್ಲಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ತೆರಿಗೆದಾರರು ಎಚ್ಚರಿಕೆ ವಹಿಸುವಂತೆ ಸರ್ಕಾರ ಸಲಹೆ ನೀಡಿದೆ. 

Government Alerts Taxpayers About Latest Scam Targeting Income Tax Refunds anu
Author
First Published Aug 8, 2023, 5:25 PM IST

ನವದೆಹಲಿ (ಆ.8): ತಂತ್ರಜ್ಞಾನ ಮುಂದುವರಿದಂತೆ ವಂಚಕರು ಹಣಕ್ಕಾಗಿ ಜನರನ್ನು ವಂಚಿಸಲು ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ ಕೂಡ. ವಂಚಿಕರು ಹೊಸ ಹೊಸ ವಿಧಾನಗಳ ಮೂಲಕ ವಂಚಿಸಲು ಪ್ರಾರಂಭಿಸಿದ್ದಾರೆ. 2022-23ನೇ ಆರ್ಥಿಕ ಸಾಲಿನ ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ದಿನವಾಗಿತ್ತು. ಹೀಗಾಗಿ ಐಟಿಆರ್ ಸಲ್ಲಿಕೆ ಮಾಡಿದವರಿಗೆ ಈಗ ರೀಫಂಡ್ ಸಿಗುತ್ತಿದೆ. ಇದೀಗ ಈ ತೆರಿಗೆ ರೀಫಂಡ್ ಅನ್ನೇ ವಂಚಕರು ತಮ್ಮ ವಂಚನೆಗೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಹೆಸರಲ್ಲಿ ತೆರಿಗೆದಾರರನ್ನು ವಂಚಕರು ವಂಚಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ತೆರಿಗೆ ರೀಫಂಡ್ ಪಡೆಯಲು ನೀವು ಅರ್ಹರಾಗಿದ್ದೀರಿ ಎಂಬ ಸಂದೇಶವನ್ನು ತೆರಿಗೆದಾರರ ಮೊಬೈಲ್ ಗಳಿಗೆ ಕಳುಹಿಸುವ ಮೂಲಕ ವಂಚಿಸಲಾಗುತ್ತಿದೆ ಎಂಬ ಬಗ್ಗೆ ಪ್ರೆಸ್ ಇನ್ಫಾರ್ಮೇಷನ್ ಬ್ಯುರೋ (ಪಿಐಬಿ) ಫ್ಯಾಕ್ಟ್ ಚೆಕ್ ಅಧಿಕೃತ ಟ್ವಿಟ್ಟರ್ ಖಾತೆ ಇತ್ತೀಚೆಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. 

15,490ರೂ. ಆದಾಯ ತೆರಿಗೆ ರೀಫಂಡ್ ಪಡೆಯಲು ನೀವು ಅರ್ಹರಾಗಿದ್ದೀರಿ ಎಂಬ ಸಂದೇಶವನ್ನು ವಂಚಕರು ಮೊಬೈಲ್ ಗಳಿಗೆ ಕಳುಹಿಸುತ್ತಿದ್ದಾರೆ. ಈ ಸಂದೇಶಗಳನ್ನು ಆದಾಯ ತೆರಿಗೆ ಇಲಾಖೆಯಿಂದ ಅಧಿಕೃತವಾಗಿ ಬಂದಿರುವ ಮಾದರಿಯಲ್ಲೇ ರೂಪಿಸಲಾಗಿರುತ್ತದೆ. ಈ ಸಂದೇಶದೊಂದಿಗೆ ಒಂದು ಲಿಂಕ್ ಕೂಡ ಇರುತ್ತದೆ. ಖಾತೆ ಮಾಹಿತಿಗಳನ್ನು ದೃಢೀಕರಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಕೂಡ ಸಂದೇಶದಲ್ಲಿ ಮನವಿ ಮಾಡಲಾಗಿರುತ್ತದೆ. ಈ ಸಂದೇಶದ ಸತ್ಯಾಸತ್ಯತೆಯನ್ನು (ಫ್ಯಾಕ್ಟ್ ಚೆಕ್) ಪರಿಶೀಲಿಸಿರುವ ಪ್ರೆಸ್ ಇನ್ಫಾರ್ಮೇಷನ್ ಬ್ಯುರೋ (ಪಿಐಬಿ), ಈ ಸಂದೇಶ ನಕಲಿಯಾಗಿದ್ದು, ಆದಾಯ ತೆರಿಗೆ ಇಲಾಖೆ ಇಂಥ ಯಾವುದೇ ಸಂದೇಶಗಳನ್ನು ಕಳುಹಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಅಲ್ಲದೆ, ಇಂಥ ಸಂದೇಶಗಳ ಬಗ್ಗೆ ಎಚ್ಚರದಿಂದ ಇರುವಂತೆ ಹಾಗೂ ಪ್ರತಿಕ್ರಿಯಿಸುವ ಮೂಲಕ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಸಲಹೆ ನೀಡಿದೆ. 

ಈ ವಂಚನೆ ಸಂದೇಶವ್ನು ಪಿಐಬಿ ಫ್ಯಾಕ್ಟ್ ಚೆಕ್ ಖಾತೆ ಹಂಚಿಕೊಂಡಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೋರಿದೆ. ಅಲ್ಲದೆ, ಇಂಥ ವಂಚಕರು ಹೇಗೆ ವಂಚಿಸುತ್ತಾರೆ ಎಂಬ ಅಂಶಗಳನ್ನು ಹೈಲೈಟ್ ಮಾಡಿದೆ. ಆದಾಯ ತೆರಿಗೆ ಇಲಾಖೆ ಇ-ಮೇಲ್ ಮೂಲಕ ಇಂಥ ಮಾಹಿತಿಗಳನ್ನು ತೆರಿಗೆದಾರರಿಂದ ಕೇಳುವುದಿಲ್ಲ ಎಂದು ಕೂಡ ತಿಳಿಸಿದೆ. ಹಾಗೆಯೇ ಇಲಾಖೆ ಪಿನ್, ಪಾಸ್ ವರ್ಡ್ ಅಥವಾ ಹಣಕಾಸಿನ ಖಾತೆಗಳ ಬಗ್ಗೆ ಇ-ಮೇಲ್ ಮೂಲಕ ಮಾಹಿತಿ ಕೋರುವುದಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.

ವಂಚನೆಯಿಂದ ರಕ್ಷಿಸಿಕೊಳ್ಳುವುದು ಹೇಗೆ?
ಇಂಥ ವಂಚನೆಗಳಿಗೆ ಬಲಿಯಾಗುತ್ತೇವೆ ಎಂಬ ಭಯ ಹೊಂದಿರೋರಿಗೆ ಪಿಐಬಿ ಮಹತ್ವದ ಸಲಹೆಗಳನ್ನು ನೀಡಿದೆ.
*ಪ್ರತಿಕ್ರಿಯೆ ನೀಡಬೇಡಿ: ಅಪರಿಚಿತ ಮೂಲಗಳಿಂದ ಬಂದಿರುವ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ಹಾಗೆಯೇ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಸಂದೇಶದೊಂದಿಗೆ ಬಂದಿರುವ ಅಟ್ಯಾಚ್ ಮೆಂಟ್ ಗಳನ್ನು ತೆರೆಯಬೇಡಿ. 

ಐಟಿಆರ್ ಸಲ್ಲಿಕೆಯಾಯ್ತು, ರೀಫಂಡ್ ಯಾವಾಗ? ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ

*ಅನುಮಾನಾಸ್ಪದ ಚಟುವಟಿಕೆಗಳನ್ನು ವರದಿ ಮಾಡಿ: ಒಂದು ವೇಳೆ ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ಬಂದಿದೆ ಎಂಬಂತೆ ಬಿಂಬಿಸುವ ಇ-ಮೇಲ್ ಬಂದಿದ್ದರೆ ಅಥವಾ ಈ ಇಲಾಖೆಯ ವೆಬ್ ಸೈಟ್ ಗೆ ತೆಗೆದುಕೊಂಡು ಹೋಗುವ ಲಿಂಕ್ ಇದ್ದರೆ, ಅದನ್ನು ಕ್ಲಿಕ್ ಮಾಡ್ಬೇಡಿ ಹಾಗೂ ಮಾಹಿತಿಗಳನ್ನು ನೀಡಬೇಡಿ. ಇನ್ನು ಈ ಇ-ಮೇಲ್ ಅನ್ನು ಅಥವಾ ವೆಬ್ ಸೈಟ್ URL ಅನ್ನು  webmanager@incometax.gov.in.ಗೆ ಕಳುಹಿಸಿ.

*ಸಂದೇಶ ಡಿಲೀಟ್ ಮಾಡಿ: ಅನುಮಾನಾಸ್ಪದ ಲಿಂಕ್ ಅಥವಾ ಇ-ಮೇಲ್ ಫಾರ್ವರ್ಡ್ ಮಾಡಿದ ಬಳಿಕ ಅದನ್ನು ನಿಮ್ಮ ಇನ್ ಬಾಕ್ಸ್ ನಿಂದ ಡಿಲೀಟ್ ಮಾಡಿ. 


 

Follow Us:
Download App:
  • android
  • ios