ಐಟಿಆರ್ ಸಲ್ಲಿಕೆಯಾಯ್ತು, ರೀಫಂಡ್ ಯಾವಾಗ? ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ
ಐಟಿಆರ್ ಸಲ್ಲಿಕೆ ಮಾಡಿರೋರಿಗೆ ಈಗ ರೀಫಂಡ್ ಚಿಂತೆ ಶುರುವಾಗಿದೆ. ಕೆಲವರಿಗೆ ಈಗಾಗಲೇ ರೀಫಂಡ್ ಬಂದಿದ್ದರೆ, ಇನ್ನೂ ಕೆಲವರಿಗೆ ಬಂದಿಲ್ಲ. ಹಾಗಾದ್ರೆ ಐಟಿಆರ್ ಸಲ್ಲಿಕೆಯಾದ ಎಷ್ಟು ದಿನಗಳ ಬಳಿಕ ರೀಫಂಡ್ ಬರುತ್ತದೆ? ರೀಫಂಡ್ ತಡವಾಗಲು ಕಾರಣವೇನು?
Business Desk: 2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ನೀಡಿದ ಗಡುವು ಜುಲೈ 31ಕ್ಕೆ ಮುಕ್ತಾಯವಾಗಿದೆ. ಹೀಗಿರುವಾಗ ಐಟಿಆರ್ ಸಲ್ಲಿಕೆ ಮಾಡಿರುವ ತೆರಿಗೆದಾರರು ಈಗ ರೀಫಂಡ್ ಗಾಗಿ ಕಾಯುತ್ತಿದ್ದಾರೆ. ತೆರಿಗೆ ಮರುಪಾವತಿ ಅಥವಾ ರೀಫಂಡ್ ಅನ್ನು ಆದಾಯದ ಮೇಲೆ ಹೆಚ್ಚುವರಿ ತೆರಿಗೆ ಪಾವತಿಸಿದವರಿಗೆ ನೀಡಲಾಗುತ್ತದೆ. ಹೀಗಾಗಿ ಆದಾಯದ ಮೇಲೆ ಹೆಚ್ಚುವರಿ ತೆರಿಗೆ ಪಾವತಿಸಿರೋರು ಸದ್ಯ ನಮಗೆ ಯಾವಾಗ ರೀಫಂಡ್ ಬರುತ್ತದೋ ಎಂಬ ನಿರೀಕ್ಷೆಯಲ್ಲಿರುತ್ತಾರೆ. ಸಾಮಾನ್ಯವಾಗಿ ಆದಾಯ ತೆರಿಗೆ ರೀಫಂಡ್ ಐಟಿಆರ್ ಸಲ್ಲಿಕೆ ಮಾಡಿದ 7ರಿಂದ 120 ದಿನಗಳೊಳಗೆ ಸಿಗುತ್ತದೆ. ಇನ್ನು ರೀಫಂಡ್ ಮೊತ್ತವನ್ನು ತೆರಿಗೆದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ ಅಥವಾ ರೀಫಂಡ್ ಚೆಕ್ ಮೂಲಕ ನೀಡಲಾಗುತ್ತದೆ. ಆದರೆ, ಕೆಲವೊಮ್ಮೆ ಅನೇಕ ಕಾರಣಗಳಿಂದ ರೀಫಂಡ್ ಸಿಗೋದು ತಡವಾಗುತ್ತದೆ. ಉದಾಹರಣೆಗೆ ಬ್ಯಾಂಕ್ ಖಾತೆ ಸಂಖ್ಯೆಯನ್ನು ತಪ್ಪಾಗಿ ನೀಡಿದ್ದರೆ ಅಥವಾ ಐಟಿಆರ್ ವೆರಿಫೈ ಮಾಡದ ಸಂದರ್ಭಗಳಲ್ಲಿ ರೀಫಂಡ್ ಸಿಗೋದು ತಡವಾಗುತ್ತದೆ. ಇನ್ನು ಐಟಿಆರ್ ಸಲ್ಲಿಕೆಯನ್ನು ಬೇಗ ಮಾಡಿದಷ್ಟು ನಿಮಗೆ ರೀಫಂಡ್ ಕೂಡ ಬೇಗ ಸಿಗುತ್ತದೆ.
ಇನ್ನು ತೆರಿಗೆದಾರರು ಆದಾಯ ತೆರಿಗೆ ವೆಬ್ ಸೈಟ್ incometaxindiaefiling.gov.in ನಲ್ಲಿ ಕೂಡ ತೆರಿಗೆ ರೀಫಂಡ್ ಸ್ಟೇಟಸ್ ಚೆಕ್ ಮಾಡಬಹುದು. ಇನ್ನು ಐಟಿಆರ್ ರೀಫಂಡ್ಸ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯೋದು ಕೂಡ ಮುಖ್ಯ. ತೆರಿಗೆದಾರರು ಟಿಡಿಎಸ್ ಅಥವಾ ಅಡ್ವಾನ್ಸ್ ತೆರಿಗೆ ಮೂಲಕ ಅವರಿಗೆ ವಿಧಿಸಲ್ಪಡುವ ತೆರಿಗೆಗಿಂತ ಹೆಚ್ಚಿನ ಮೊತ್ತ ಪಾವತಿಸಿದ್ರೆ ಆಗ ಅವರು ರೀಫಂಡ್ ಪಡೆಯಲು ಅರ್ಹರಾಗಿರುತ್ತಾರೆ. ಒಬ್ಬ ವ್ಯಕ್ತಿ ಐಟಿಆರ್ ಫೈಲ್ ಮಾಡಿದ ಬಳಿಕ ಆದಾಯ ತೆರಿಗೆ ಇಲಾಖೆ ಅವರ ಕ್ಲೇಮ್ ಗಳನ್ನು ಪರಿಶೀಲಿಸುತ್ತದೆ ಹಾಗೂ ಹೆಚ್ಚುವರಿ ತೆರಿಗೆ ಮೊತ್ತವನ್ನು ರೀಫಂಡ್ ಮಾಡುತ್ತದೆ.
ITR Filing:ಅಂತಿಮ ಗಡುವಿನೊಳಗೆ ಐಟಿಆರ್ ಸಲ್ಲಿಕೆ ಮಾಡಿಲ್ವಾ? ಹಾಗಾದ್ರೆ ನಿಮ್ಮ ಮುಂದಿರುವ ಆಯ್ಕೆಗಳೇನು?
ಇನ್ನು ತೆರಿಗೆ ರೀಫಂಡ್ ಅನ್ನು ತೆರಿಗೆದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಸಮಯವನ್ನು ಕಾಯ್ದುಕೊಳ್ಳಲು ಆದಾಯ ತೆರಿಗೆ ಇಲಾಖೆ ಈ ಪ್ರಕ್ರಿಯೆಯನ್ನು ಸಂಪೂರ್ಣ ಆನ್ ಲೈನ್ ಮುಖಾಂತರ ಮಾಡುತ್ತಿದೆ. ಇನ್ನು ಡಿಜಿಟಲೀಕರಣ ರೀಫಂಡ್ ಪ್ರಕ್ರಿಯೆ ಅವಧಿಯನ್ನು ತಗ್ಗಿಸದ್ದು, ಪ್ರಕ್ರಿಯೆಯನ್ನು ಹೆಚ್ಚು ದಕ್ಷ ಹಾಗೂ ಬಳಕೆದಾರರ ಸ್ನೇಹಿಯನ್ನಾಗಿಸಿದೆ.
ಐಟಿಆರ್ ರೀಫಂಡ್ ಅವಧಿ ಮೇಲೆ ಪರಿಣಾಮ ಬೀರೋ ಅಂಶಗಳು
1.ಮಾಹಿತಿ ನಿಖರತೆ: ಐಟಿಆರ್ ಮಾಹಿತಿಯಲ್ಲಿ ನಿಖರತೆ ಅತೀಅಗತ್ಯ. ಯಾವುದೇ ವ್ಯತ್ಯಾಸಗಳು ಅಥವಾ ಅಸ್ಪಷ್ಟತೆ ಮರುಪಾವತಿ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಸಾಧ್ಯತೆಯಿದೆ. ಇದರಲ್ಲಿ ಆದಾಯ, ಕಡಿತಗಳು ಹಾಗೂ ತೆರಿಗೆ ಪಾವತಿಯನ್ನು ಸಮರ್ಪಕವಾಗಿ ವರದಿ ಮಾಡುವುದು ಸೇರಿದೆ. ಇನ್ನು ಐಟಿಆರ್ ಸಲ್ಲಿಕೆ ಮಾಡುವ ಮುನ್ನ ಎಲ್ಲ ಮಾಹಿತಿಗಳನ್ನು ಮರುಪರಿಶೀಲಿಸುವುದು ಅಗತ್ಯ. ಒಂದೇಒಂದು ಸಣ್ಣ ತಪ್ಪಾದರೂ ತೆರಿಗೆ ರೀಫಂಡ್ ತಡವಾಗುತ್ತದೆ. ಇನ್ನು ಬ್ಯಾಂಕ್ ಮಾಹಿತಿಗಳನ್ನು ಸಮರ್ಪಕವಾಗಿ ನಮೂದಿಸೋದು ಅಗತ್ಯ. ಒಂದು ವೇಳೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಯಾವುದಕ್ಕೆ ತೆರಿಗೆ ಜಮೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.
2.ಸಲ್ಲಿಕೆ ಗಡುವು: ಐಟಿಆರ್ ವೆರಿಫಿಕೇಷನ್ ಪ್ರಕ್ರಿಯೆ ಮುಗಿದ ಬಳಿಕ ಆದಾಯ ತೆರಿಗೆ ಇಲಾಖೆ ರೀಫಂಡ್ ಪ್ರಕ್ರಿಯೆ ಪ್ರಾರಂಭಿಸುತ್ತದೆ. ಒಮ್ಮೆ ತೆರಿಗೆದಾರರ ಐಟಿಆರ್ ವೆರಿಫೈಯಾದರೆ, ಆ ಬಳಿಕ ಆದಾಯ ತೆರಿಗೆ ಇಲಾಖೆ ಅದರ ನಿಖರತೆಯನ್ನು ಪರಿಶೀಲಿಸುತ್ತದೆ. ಒಂದು ವೇಳೆ ಎಲ್ಲವೂ ಸರಿಯಾಗಿದ್ದರೆ, ರೀಫಂಡ್ ಪ್ರಕ್ರಿಯೆ ನಡೆಸುತ್ತದೆ. ಈ ಪ್ರಕ್ರಿಯೆಗೆ ತಗಲುವ ಸಮಯ ಐಟಿಆರ್ ಸಂಕೀರ್ಣತೆ ಹಾಗೂ ರಿಇಲಾಖೆ ಎಷ್ಟು ರಿಟರ್ನ್ ಗಳ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂಬುದರ ಪ್ರಮಾಣವನ್ನು ಆಧರಿಸಿದೆ.
3.ಸಲ್ಲಿಕೆ ವಿಧಾನ : ಇನ್ನು ಇ-ಫೈಲಿಂಗ್ ಐಟಿಆರ್ ಗಳು ಪೇಪರ್ ಫೈಲಿಂಗ್ ಐಟಿಆರ್ ಗಳಿಗಿಂತ ಹೆಚ್ಚು ವೇಗ ಹೊಂದಿವೆ. ಆದಾಯ ತೆರಿಗೆ ಇಲಾಖೆ ಸಾಮಾನ್ಯವಾಗಿ ತೆರಿಗೆದಾರರಿಗೆ ಐಟಿಆರ್ ಗಳ ಇ-ಫೈಲಿಂಗ್ ಮಾಡಲು ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ಇದರಿಂದ ಪ್ರಕ್ರಿಯೆಗಳು ತ್ವರಿತವಾಗಿ ಆಗುವ ಜೊತೆಗೆ ರೀಫಂಡ್ ಕೂಡ ಬೇಗ ಸಿಗುತ್ತದೆ.
ಜು.31ರ ಬಳಿಕವೂ ಐಟಿಆರ್ ವೆರಿಫೈ ಮಾಡ್ಬಹುದಾ? ಹೇಗೆ? ಇಲ್ಲಿದೆ ಮಾಹಿತಿ
4.ವೆರಿಫಿಕೇಷನ್: ಐಟಿಆರ್ ಸಲ್ಲಿಕೆ ಬಳಿಕ ವೆರಿಫೈ ಮಾಡೋದು ಅತ್ಯಗತ್ಯ. ಐಟಿಆರ್ ವೆರಿಫಿಕೇಷನ್ ಅನ್ನು ಆಧಾರ್ ಒಟಿಪಿ ಬಳಸಿಕೊಂಡು ಆನ್ ಲೈನ್ ನಲ್ಲಿ ಮಾಡಬಹುದು ಅಥವಾ ಸಹಿ ಹೊಂದಿರುವ ಐಟಿಆರ್-v ಪ್ರತಿಯನ್ನು ಬೆಂಗಳೂರಿನ ಕೇಂದ್ರೀಕೃತ ಪ್ರಕ್ರಿಯೆ ಕೇಂದ್ರಕ್ಕೆ ಕಳುಹಿಸುವ ಮೂಲಕ ಕೂಡ ಮಾಡಬಹುದು. ಒಮ್ಮೆ ವೆರಿಫಿಕೇಷನ್ ಯಶಸ್ವಿಯಾದ್ರೆ ರೀಫಂಡ್ ನೀಡುವ ಪ್ರಕ್ರಿಯೆಯನ್ನು ಮುಂದುವರಿಸಲಾಗುತ್ತದೆ. ಒಂದು ವೇಳೆ ವರಿಫಿಕೇಷನ್ ನಲ್ಲಿ ತಡವಾದ್ರೆ ರೀಫಂಡ್ ಸಿಗೋದು ಕೂಡ ವಿಳಂಬವಾಗುತ್ತದೆ.