ಕಳೆದ ತಿಂಗಳು 200 ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿದ್ದ ಗೂಗಲ್ ಇದೀಗ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಆದರೆ ಈ ಬಾರಿ ಉದ್ಯೋಗ ಕಡಿತಕ್ಕೆ VEP ಜಾರಿ ಮಾಡಿದೆ.
ನವದಹಲಿ(ಜೂ.11) ಗೂಗಲ್ ಅತೀ ದೊಡ್ಡ ಟೆಕ್ ಕಂಪನಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಖರ್ಚು ವೆಚ್ಚ ಕಡಿಮೆ ಮಾಡಲು ಉದ್ಯೋಗ ಕಡಿತ ಮಾಡಿದೆ. ಇದರ ಜೊತೆಗೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಕೂಡ ಉದ್ಯೋಗ ಕಡಿತಕ್ಕೆ ವೇಗ ನೀಡಿದೆ. ಕಳೆದ ತಿಂಗಳು 200 ಮಂದಿ ಉದ್ಯೋಗ ಕಡಿತ ಮಾಡಿದ್ದ ಗೂಗಲ್ ಇದೀಗ ಹೊಸ ಪ್ರಯೋಗದ ಮೂಲಕ ಉದ್ಯೋಗ ಕಡಿತ ಮಾಡುತ್ತಿದೆ. ಈ ಬಾರಿ ಸ್ವಂಪ್ರೇರಿತ ನಿರ್ಗಮನ ಪ್ರೋಗ್ರಾಮ್(VEP ) ಮೂಲಕ ಉದ್ಯೋಗ ಕಡಿತಕ್ಕೆ ಗೂಗಲ್ ಮುಂದಾಗಿದೆ.
ಸೆಟ್ಲೆಮೆಂಟ್ ಪಾವತಿ ಆಫರ್
ಸಿಎನ್‌ಬಿಸಿ ವರದಿ ಪ್ರಕಾರ ಗೂಗಲ್ ಈಗಾಗಲೇ ಬಹುತೇಕ ಎಲ್ಲಾ ವಿಭಾಗಕ್ಕೆ VEP ಜಾರಿ ಮಾಡಿದೆ. ಉದ್ಯೋಗಿಗಳಿ ಈ ಮೂಲಕ ಒಂದು ಆಫರ್ ನೀಡಲಾಗಿದೆ. 14 ವಾರಗಳ ನಿರ್ಗಮನ ಪಾವತಿ ಹಾಗೂ ಎಷ್ಟು ವರ್ಸ ಸೇವೆ ಸಲ್ಲಿಸಿದ್ದೀರಿ ಅನ್ನೋದರ ಮೇಲೆ ಹೆಚ್ಚುವರಿ ವಾರದ ಪಾವತಿ ಕೂಡ ನೀಡಲಾಗುತ್ತಿದೆ. ಈ ಆಯ್ಕೆ ಮೂಲಕ ಸ್ವಂಪ್ರೇರಿತವಾಗಿ ಉದ್ಯೋಗಿಗಳು ರಾಜೀನಾಮೆ ನೀಡುವ ಕಾರ್ಯಕ್ರಮವನ್ನು ಗೂಗಲ್ ಜಾರಿಗೊಳಿಸಿದೆ.
ನಾಲೇಜ್ ಆ್ಯಂಡ್ ಇನ್‌ಫಾರ್ಮೇಶನ್, ಸೆಂಟ್ರಲ್ ಎಂಜಿನೀಯರಿಂಗ್, ಮಾರ್ಕೆಟಿಂಗ್, ರೀಸರ್ಚ್ , ಕಮ್ಯೂನಿಕೇಶನ್ ಸೇರಿದಂತೆ ಹಲವು ವಿಭಾಗದಲ್ಲಿ ಈ ರೀತಿ ಉದ್ಯೋಗ ಕಡಿತ ಮಾಡಲು ಗೂಗಲ್ ಮುಂದಾಗಿದೆ. ಈ ಪೈಕಿ ನಾಲೇಜ್ ಆ್ಯಂಡ್ ಇನ್‌ಫಾರ್ಮೇಶನ್ ವಿಭಾಗದಲ್ಲಿ ಬರೋಬ್ಬರಿ 20,000 ಉದ್ಯೋಗಿಗಳಿದ್ದಾರೆ. ಕಂಪನಿಯ ಖರ್ಚು ವೆಚ್ಚ ಕಡಿತಗೊಳಿಸಲು ಹಾಗೂ ಎಐ ಅಳವಡಿಕೆಯಿಂದ ಹೊರೆಯಾಗುತ್ತಿರುವ, ಅನಗತ್ಯ ಹುದ್ದೆಗಳನ್ನು ಕಡಿತಗೊಳಿಸಲು ಗೂಗಲ್ ಮುಂದಾಗಿದೆ.
ಅಮೆರಿಕ ಉದ್ಯೋಗಿಗಳು ಮೊದಲ ಟಾರ್ಗೆಟ್
VEP ಕಾರ್ಯಕ್ರಮದ ಮೂಲಕ ಉದ್ಯೋಗ ಕಡಿತಕ್ಕೆ ಮುಂದಾಗಿರುವ ಗೂಗಲ್ ಮೊದಲ ಹಂತದಲ್ಲಿ ಅಮೇರಿಕದಲ್ಲಿ ಕೆಲಸ ಮಾಡುತ್ತಿರುವ ಗೂಗಲ್ ಉದ್ಯೋಗಳ ಟಾರ್ಗೆಟ್ ಮಾಡಿದೆ. ಒಂದೊಂದು ವಿಭಾಗದಿಂದ ಇಂತಿಷ್ಟು ಉದ್ಯೋಗಿಗಳ ಕಡಿತಕ್ಕೆ ಗೂಗಲ್ ಮುಂದಾಗಿದೆ. ಇದಕ್ಕೂ ಮೊದಲು ಸ್ವಂಪ್ರೇರಿತ ನಿರ್ಗಮನ ಕಾರ್ಯಕ್ರಮದ ಮೂಲಕ ರಾಜೀನಾಮೆ ನೀಡಿದರೆ ಸೆಟ್ಲೆಂಟ್ ಮೊತ್ತ ಪಡೆದು ನಿರ್ಗಮಿಸುವ ಯೋಜನೆ ಪ್ರಕಟಿಸಿದೆ.ಇದರ ಜೊತೆಗೆ ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಲು ಸೂಚಿಸಿದೆ. ಒಂದು ವೇಳೆ ಮನೆಯಿಂದಲೇ ಕೆಲಸ ಮುಂದುವರಿಸಲು ಬಯಸಿದರೆ ಗೂಗಲ್ ಉದ್ಯೋಗ ಕಡಿತದಲ್ಲಿ ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ.
