ಚಿನ್ನದ ಬೆಲೆಯಲ್ಲಿ 300 ರು. ಏರಿಕೆ: 10 ಗ್ರಾಂಗೆ ರೂ. 88500
ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ₹88,500ಕ್ಕೆ ತಲುಪಿದೆ. ಕುಂಭಮೇಳದ ಅವಧಿ ವಿಸ್ತರಣೆ ಕುರಿತ ವದಂತಿಗಳನ್ನು ಪ್ರಯಾಗರಾಜ್ ಜಿಲ್ಲಾಧಿಕಾರಿ ತಳ್ಳಿಹಾಕಿದ್ದಾರೆ. ಕೇರಳ ಸರ್ಕಾರ ಒಂದನೇ ತರಗತಿ ಪ್ರವೇಶ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ.

ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚತತೆ ನಡುವೆಯೇ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಂಡಿದೆ. ಬುಧವಾರ ಇಲ್ಲಿ ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 300 ರು.ನಷ್ಟು ಏರಿಕೆ ಕಂಡು 88500 ರು.ಗೆ ತಲುಪಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 88200 ರು.ಗೆ ತಲುಪಿದೆ. ಇನ್ನೊಂದೆಡೆ ಬೆಳ್ಳಿ ಧಾರಣೆಯು ಪ್ರತಿ ಕೆ.ಜಿ.ಗೆ 800 ರು. ಹೆಚ್ಚಳವಾಗಿ 99,000 ರು. ತಲುಪಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ತಿಳಿಸಿದೆ.
ಕುಂಭಮೇಳ ಅವಧಿ ವಿಸ್ತರಣೆ ಇಲ್ಲ: ವದಂತಿಗೆ ಪ್ರಯಾಗ ಡೀಸಿ ಸ್ಪಷ್ಟನೆ
ಪ್ರಯಾಗರಾಜ್: ಕುಂಭಮೇಳದ ಅವಧಿ ವಿಸ್ತರಣೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬುತ್ತಿರುವ ವದಂತಿಗಳಿಗೆ ಪ್ರಯಾಗರಾಜ್ ಜಿಲ್ಲಾಧಿಕಾರಿ ರವೀಂದ್ರ ಮಂದರ್ ತೆರೆ ಎಳೆದಿದ್ದಾರೆ. ಕುಂಭದ ಅವಧಿಯು ಧಾರ್ಮಿಕ ಮುಹೂರ್ತಗಳ ಮೇಲೆ ನಿರ್ಧರಿತವಾಗಿದ್ದು, ಫೆ.26ರ ಶಿವರಾತ್ರಿಯಂದು ಕೊನೆಗೊಳ್ಳಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಮೇಳದ ದಿನಾಂಕ ವಿಸ್ತರಿಸುವ ಯಾವುದೇ ಪ್ರಸ್ತಾಪ ಜಿಲ್ಲಾಡಳಿತದ ಮುಂದಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಅವಧಿ ವಿಸ್ತರಣೆಗೆ ಮನವಿ ಮಾಡಿದ್ದರು. ಕುಂಭಮೇಳದಲ್ಲಿ ಈವರೆಗೆ 55 ಕೋಟಿ ಜನರು ಮಿಂದೆದ್ದಿದ್ದಾರೆ.
1ನೇ ತರಗತಿ ಪ್ರವೇಶ ಪರೀಕ್ಷೆಗೆ ಅನುಮತಿ ಇಲ್ಲ: ಕೇರಳ ಸರ್ಕಾರ
ತಿರುವನಂತಪುರಂ: ಒಂದನೇ ತರಗತಿ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಕೆಲವು ಶಾಲೆಗಳು ಪ್ರವೇಶ ಪರೀಕ್ಷೆಗಳನ್ನು ನಡೆಸುವ ಪದ್ಧತಿಯನ್ನು ಕೇರಳ ಸರ್ಕಾರ ವಿರೋಧಿಸಿದೆ. ರಾಜ್ಯದಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇರಳ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು 'ಕೆಲವು ಶಾಲೆಗಳು ಒಂದನೇ ತರಗತಿ ಪ್ರವೇಶಕ್ಕೂ ಪರೀಕ್ಷೆ ನಡೆಸುತ್ತಿವೆ, ಸಂದರ್ಶನ ನಡೆಸುತ್ತಿವೆ. ಮೊದಲನೇ ತರಗತಿಗೆ ಇಂಥದ್ದೆಲ್ಲಾ ಅಗತ್ಯವಿದೆಯೇ ಎಂದು ಚಿಂತಿಸುವ ಸಮಯವಿದು. ಇದಕ್ಕೆಲ್ಲಾ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ' ಎಂದು ಹೇಳಿದ್ದಾರೆ.
ಬೆಂಗೂರು ಜೈಲಿಗೆ ವರ್ಗ ಕೋರಿದ್ದ ಸುಕೇಶ್‌ಗೆ ಸುಪ್ರೀಂ ಛೀಮಾರಿ
ನವದೆಹಲಿ: ಇಲ್ಲಿನ ಮಂಡೋಲಿ ಜೈಲಿನಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಯಾವುದಾದರೂ ಜೈಲಿಗೆ ತನ್ನನ್ನು ಸ್ಥಳಾಂತರಿಸುವಂತೆ ಕೋರಿ ಆರೋಪಿ ವಂಚಕ ಸುಕೇಶ್ ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಜತೆಗೆ, ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದೀರೆಂದು ಛೀಮಾರಿ ಹಾಕಿದೆ. ನಿಮ್ಮ ಬಳಿ ಖರ್ಚು ಮಾಡಲು ಹಣ ವಿದೆಯೆಂದು ಅವಕಾಶಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ಇದೇ ರೀತಿ ಅರ್ಜಿಗಳನ್ನು ಪದೇ ಪದೇ ಹೇಗೆ ಸಲ್ಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಕುಟುಂಬದ ಸಮೀಪ ಇರಲು ಕರ್ನಾಟಕ ಜೈಲಿಗೆ ವರ್ಗ ಮಾಡುವಂತೆ ಸುಕೇಶ್ ಮನವಿ ಮಾಡಿದ್ದ.
ಇದು ಮಹಾ ಕುಂಭಅಲ್ಲ, ಮೃತ್ಯು ಕುಂಭ: ಬಂಗಾಳ ಸಿಎಂ ದೀದಿ
ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ ಮಹಾ ಕುಂಭಮೇಳವನ್ನು ಮೃತ್ಯುಕುಂಭ ಮೇಳ ಎಂದು ಕರೆದಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಮಮತಾ, 'ನನಗೆ ಕುಂಭಮೇಳದ ಬಗ್ಗೆ ಗೌರವವಿದೆ. ಗಂಗಾಮಾತೆಯ ಬಗ್ಗೆ ಗೌರವವಿದೆ. ಆದರೆ ಕುಂಭಮೇಳವು ಮೃತ್ಯುಕುಂಭ ಮೇಳವಾಗಿದೆ. ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿಲ್ಲ. ಹತರಾದ ಬಂಗಾಳದವರ ಮರಣೋತ್ತರ ಪರೀಕ್ಷೆಯನ್ನು ಯೋಗಿ ಸರ್ಕಾರ ನಡೆಸಲಿಲ್ಲ. ಅದನ್ನೂ ನಾವೇ ಮಾಡಿದೆವು. ಸಾವಿನ ಸಂಖ್ಯೆ ಸರಿಯಾಗಿ ಕೊಟ್ಟಿಲ್ಲ' ಎಂದು ದೂರಿದರು.