ಸೂರತ್(ಆ.25): ಸಹೋದರ-ಸಹೋದರಿಯರ ಬಂಧನ ಸಾರುವ ಪವಿತ್ರ ರಕ್ಷಾಬಂಧನ ಹಬ್ಬಕ್ಕೆ ಕೇವಲ ಒಂದು ದಿನ ಬಾಕಿಯಿದ್ದು, ಈಗಾಗಲೇ ಮಾರುಕಟ್ಟೆಗಳಲ್ಲಿ ವಿಧ ವಿಧವಾದ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 

ಈ ನಡುವೆ ಗುಜರಾತ್ ರಾಜ್ಯದ ಸೂರತ್'ನಲ್ಲಿರುವ ಆಭರಣದ ಮಳಿಗೆಯೊಂದು ವಿಶೇಷ ರಾಖಿಯನ್ನು ಸಿದ್ಧಪಡಿಸಿದ್ದು, ಈ ರಾಖಿಗೆ ಎಲ್ಲಿಲ್ಲದ ಬೇಡಿಕೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರ ಭಾವಚಿತ್ರವನ್ನೊಳಗೊಂಡ ಬಂಗಾರದ ರಾಖಿಯನ್ನು ಈ ಮಳಿಗೆ ಸಿದ್ಧಪಡಿಸಿದ್ದು, ಮಾರುಕಟ್ಟೆಯಲ್ಲಿ ಈ ರಾಖಿಗೆ ಬೇಡಿಕೆ ಆರಂಭವಾಗಿದೆ. 

22 ಕ್ಯಾರೆಟ್ ಚಿನ್ನದಲ್ಲಿ ಈ ಬಂಗಾರ ರಾಖಿ ಸಿದ್ಧಪಡಿಸಲಾಗಿದ್ದು, ಸುಮಾರು 50 ರಾಖಿಗಳನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ 47 ರಾಖಿಗಳು ಮಾರಾಟವಾಗಿದ್ದು, ಇನ್ನುಳಿದ ಮೂರು ರಾಖಿಗೆ ಜನ ಮುಗಿಬಿದ್ದಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿ, ಗುಜರಾತ್ ಹಾಗೂ ಉತ್ತರಪ್ರದೇಶ ಸಿಎಂ ದೇಶಕ್ಕಾಗಿ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದರಿಂದ ವಿಶ್ವದ ಲಕ್ಷಾಂತರ ಜನರು ಸ್ಫೂರ್ತಿ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಮಳಿಗೆ ಬರುವ ಮಹಿಳೆಯರು ರಾಖಿಯನ್ನು ನೋಡಿ ಸ್ಫೂರ್ತಿ ಪಡೆದುಕೊಂಡು ತಮ್ಮ ಸಹೋದರರೂ ಕೂಡ ಇಂತಹ ನಾಯಕರಾಗಬೇಕೆಂದು ರಾಖಿಗಳನ್ನು ಖರೀದಿ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.