ಚಿನ್ನ ಖರೀದಿಸುವ ಪ್ಲ್ಯಾನ್ ಮಾಡುತ್ತಿರೋರು ಸ್ವಲ್ಪ ಸಮಯ ಕಾಯೋದು ಉತ್ತಮ. ಏಕೆಂದ್ರೆ ಚಿನ್ನದ ದರ ಇಂದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಸಮೀಪಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಕೂಡ ಹೆಚ್ಚಿದೆ ಅನ್ನೋದು ತಜ್ಞರ ಅಭಿಪ್ರಾಯ.
ನವದೆಹಲಿ (ಜ.9): ಭಾರತದಲ್ಲಿ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಸಮೀಪಿಸಿದೆ. ಇಂದು ಚಿನ್ನದ ದರದಲ್ಲಿ ಶೇ.0.6 ಏರಿಕೆಯಾಗಿದ್ದು, 10ಗ್ರಾಂ ಬೆಲೆ 56,175 ರೂ. ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಎಂಟು ತಿಂಗಳ ಗರಿಷ್ಠ ಮಟ್ಟ 1,873.72 ಡಾಲರ್ ಗೆ ಏರಿಕೆಯಾಗಿದೆ. ಇದಕ್ಕೆ ಮುಖ್ಯಕಾರಣ ಡಾಲರ್ ದುರ್ಬಲಗೊಳ್ಳುತ್ತಿರೋದು ಹಾಗೂ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಈ ಬಾರಿ ಬಡ್ಡಿದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡೋದಿಲ್ಲ ಎಂಬ ನಂಬಿಕೆ ಮೂಡಿರೋದು. ಶುಕ್ರವಾರ (ಜ.6) ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. 2022ರ ಕೊನೆಯ ತಿಂಗಳು ಅಂದ್ರೆ ಡಿಸೆಂಬರ್ ಅಂತಿಮ ವಾರದಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಬೆಲೆಯೇರಿಕೆ ಪರಿಣಾಮ ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲಿ ಚಿನ್ನದ ಖರೀದಿ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಆದರೆ, ಅತ್ಯಧಿಕ ಗ್ರಾಹಕರನ್ನು ಹೊಂದಿರುವ ಚೀನಾದಲ್ಲಿ ಮಾತ್ರ ಹೊಸ ವರ್ಷದ ಹಬ್ಬದ ಹಿನ್ನೆಲೆಯಲ್ಲಿ ಬೆಲೆಯೇರಿಕೆ ಹೊರತಾಗಿ ಕೂಡ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಸುಮಾರು ಎರಡು ತಿಂಗಳಿಂದ ಚಿನ್ನದ ದರದಲ್ಲಿ ಏರಿಕೆ ಕಂಡುಬರುತ್ತಿದೆ.
ಚಿನ್ನದ ಬೆಲೆಯೇರಿಕೆಗೆ ಕಾರಣವೇನು?
ಯುಎಸ್ ಟ್ರೆಷರ್ ಯೀಲ್ಡ್ ಇಳಿಕೆ, ಮುಂದಿನ ನೀತಿ ಸಭೆಯಲ್ಲಿ ಬಡ್ಡಿ ಏರಿಕೆ ಸಣ್ಣ ಪ್ರಮಾಣದಲ್ಲಿರುತ್ತದೆ ಎಂದು ಫೆಡರಲ್ ಅಧಿಕಾರಿಗಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಏರಿಕೆಯ ಹಾದಿ ಹಿಡಿದಿದೆ. ಕೆಲವು ತಿಂಗಳ ಹಿಂದೆ ಭಾರತದ ರೂಪಾಯಿ ಸೇರಿದಂತೆ ಇತರ ರಾಷ್ಟ್ರಗಳ ಕರೆನ್ಸಿ ಎದುರು ಏರಿಕೆ ಕಂಡಿದ್ದ ಡಾಲರ್ ಮೌಲ್ಯ ಇತ್ತೀಚಿನ ದಿನಗಳಲ್ಲಿ ಇಳಿಕೆ ಕಂಡಿದೆ. ಹೀಗಾಗಿ ದುರ್ಬಲಗೊಳ್ಳುತ್ತಿರುವ ಡಾಲರ್ ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಡಾಲರ್ ಹಾಗೂ ಚಿನ್ನದ ಬೆಲೆಗೆ ಸಂಬಂಧವಿದೆ. ಡಾಲರ್ ಬಲಿಷ್ಠಗೊಂಡಾಗ ಚಿನ್ನದ ಬೆಲೆ ಕುಸಿಯುತ್ತದೆ. ಹಾಗೆಯೇ ಡಾಲರ್ ದುರ್ಬಲಗೊಂಡಾಗ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಅಮೆರಿಕ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹಣದುಬ್ಬರದಲ್ಲಿ ಬಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಜನರ ಖರೀದಿ ಸಾಮರ್ಥ್ಯ ಕಡಿಮೆಯಾಗಿತ್ತು. ಹೀಗಾಗಿ ಚಿನ್ನದ ಖರೀದಿಗೆ ಜನರು ಮುಂದಾಗುತ್ತಿರಲಿಲ್ಲ. ಪರಿಣಾಮ ಚಿನ್ನದ ದರ ಇಳಿಕೆ ಕಂಡಿತ್ತು. ಹಾಗೆಯೇ ಡಾಲರ್ ಮೌಲ್ಯ ಏರಿಕೆಯಾಗಿತ್ತು. ಇನ್ನು ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಹೆಚ್ಚಳವಾಗಿರೋದ್ರಿಂದ ಆರ್ಥಿಕತೆ ಮತ್ತೆ ನಿಧಾನಗತಿಗೆ ಮರಳುವ ಭೀತಿ ಕೂಡ ಚಿನ್ನದ ಬೆಲೆಯೇರಿಕೆಗೆ ಕಾರಣವಾಗಿದೆ. ಈ ಹಿಂದೆ ಕೂಡ ಕೋವಿಡ್ -19 ಕಾರಣದಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು.
ನೋಟಿನ ಮೇಲೆ ಏನಾದ್ರೂ ಬರೆದಿದ್ರೆ ಅಮಾನ್ಯವಾಗುತ್ತ? ಈ ಸುದ್ದಿ ನಿಜಾನಾ?
ಭಾರತದಲ್ಲಿ ಹೇಗೆ?
ಭಾರತದಲ್ಲಿ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಿದ್ಯಮಾನಗಳನ್ನು ಆಧರಿಸಿರುತ್ತದೆ. ಹಾಗೆಯೇ ಡಾಲರ್ ಎದುರು ರೂಪಾಯಿ ಮೌಲ್ಯ ಹೇಗಿದೆ ಎಂಬುದನ್ನು ಕೂಡ ಅವಲಂಬಿಸಿರುತ್ತದೆ. ಭಾರತದಲ್ಲಿ ಚಿನ್ನದ ಬೆಲೆಯನ್ನು ಡಾಲರ್ ಎದುರು ರೂಪಾಯಿ ಮೌಲ್ಯದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಾಗ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತದೆ. ಹಾಗೆಯೇ ಡಾಲರ್ ಎದುರು ರೂಪಾಯಿ ಮೌಲ್ಯ ವರ್ಧಿಸಿದಾಗ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಪ್ರಸ್ತುತ ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಕೆ ಕಾಣುತ್ತಿದೆ. ಹೀಗಾಗಿ ಚಿನ್ನದ ಬೆಲೆ ಕೂಡ ಹೆಚ್ಚಳವಾಗಿದೆ.
ಇನ್ನೂ ಏರಿಕೆಯಾಗುತ್ತ?
ತಜ್ಞರ ಪ್ರಕಾರ ಚಿನ್ನದ ಬೆಲೆಯಲ್ಲಿ ಮುಂದಿನ ಕೆಲವು ದಿನಗಳಲ್ಲಿ ಇನ್ನಷ್ಟು ಏರಿಕೆ ಕಂಡುಬರುವ ಸಾಧ್ಯತೆಯಿದೆ. ಪ್ರಸ್ತುತ ವಿದ್ಯಮಾನಗಳು ಇದಕ್ಕೆ ಪೂರಕ ಕೂಡ ಆಗಿವೆ. 2023ರಲ್ಲಿ ಚಿನ್ನದ ದರ ಏರಿಕೆಯ ಹಾದಿಯಲ್ಲೇ ಇರುವ ಎಲ್ಲ ಸಾಧ್ಯತೆಯೂ ಇದೆ ಎನ್ನಲಾಗಿದೆ.
Budget 2023: ಒಂದೇ ವರ್ಷದಲ್ಲಿ ನಾಟಕೀಯ ಬದಲಾವಣೆಗೆ ಸಾಕ್ಷಿಯಾದ ಜಗತ್ತು!
ಚಿನ್ನ ಖರೀದಿಸಬಹುದಾ?
ನೀವು ಈಗಲೇ ಚಿನ್ನ ಖರೀದಿಸುವ ಪ್ಲ್ಯಾನ್ ಮಾಡಿದ್ರೆ ಸ್ವಲ್ಪ ದಿನ ಕಾದು ನೋಡೋದು ಉತ್ತಮ. ತಜ್ಞರ ಲೆಕ್ಕಾಚಾರದ ಪ್ರಕಾರ ಚಿನ್ನದ ದರ ಇನ್ನಷ್ಟು ಏರಿಕೆ ಕಂಡರೂ ಅಚ್ಚರಿಯಿಲ್ಲ. ಹೀಗಾಗಿ ಇಳಿಕೆಯಾಗುವ ತನಕ ಕಾಯೋದು ಉತ್ತಮ.
