ನೋಟಿನ ಮೇಲೆ ಏನಾದ್ರೂ ಬರೆದಿದ್ರೆ ಅಮಾನ್ಯವಾಗುತ್ತ? ಈ ಸುದ್ದಿ ನಿಜಾನಾ?
ದಿನನಿತ್ಯದ ವ್ಯವಹಾರದಲ್ಲಿ ಆಗಾಗ ಗೀಚಿರುವ ನೋಟುಗಳು ನಮಗೆ ಸಿಕ್ಕೇಸಿಗುತ್ತವೆ. ಆದರೆ, ಈ ರೀತಿ ಏನಾದ್ರೂ ಬರವಣಿಗೆ ಹೊಂದಿರುವ 2000 ರೂ., 500ರೂ., 200ರೂ. ಹಾಗೂ 100ರೂ. ನೋಟುಗಳನ್ನು ಆರ್ ಬಿಐ ಅಮಾನ್ಯಗೊಳಿಸಿದೆಯಾ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುದ್ದಿ ನಿಜಾನಾ? ಈ ಬಗ್ಗೆ ಆರ್ ಬಿಐ ಏನ್ ಹೇಳಿದೆ?
ನವದೆಹಲಿ (ಜ.9): ಕರೆನ್ಸಿ ನೋಟಿನ ಮೇಲೆ ಏನಾದ್ರೂ ಬರೆದಿರೋದನ್ನು ನಾವು ಆಗಾಗ ನೋಡುತ್ತಲೇ ಇರುತ್ತೇವೆ. ಮೊಬೈಲ್ ಸಂಖ್ಯೆಯಿಂದ ಹಿಡಿದು ಹೆಸರು, ಕೋಡ್ ವರ್ಡ್ ಗಳು ಹೀಗೆ ಇನ್ನೂ ಏನೇನೂ ನೋಟ್ ಗಳ ಮೇಲೆ ಗೀಚಿ ಅದರ ಅಂದಗೆಡಿಸೋರ ಸಂಖ್ಯೆಗೇನೂ ಕಡಿಮೆಯಿಲ್ಲ. ಈ ರೀತಿ ಬರಹಗಳನ್ನು ಹೊಂದಿರುವ ನೋಟು ಅಮಾನ್ಯಗೊಳ್ಳುತ್ತದೆಯೇ? ಹೀಗೊಂದು ಪ್ರಶ್ನೆ ಮೂಡಲು ಕಾರಣವಿದೆ. ಬರಹಗಳನ್ನು ಹೊಂದಿರುವ ನೋಟುಗಳು ಅಮಾನ್ಯಗೊಳ್ಳುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಮಾರ್ಗಸೂಚಿಗಳು ತಿಳಿಸಿವೆ ಎಂಬ ಸಂದೇಶವೊಂದು ವಾಟ್ಸಾಪ್ ಮೂಲಕ ಹರಿದಾಡುತ್ತಿದೆ. ಈ ವೈರಲ್ ಸಂದೇಶ ನಿಜಾನಾ? ಎಂಬ ಪ್ರಶ್ನೆ ಕೂಡ ಮೂಡಿದೆ. ಆದರೆ, ಇದು ಸುದ್ದಿ ಸುಳ್ಳಿಯಾಗಿದೆ. ನೋಟುಗಳು ಸ್ವಚ್ಛವಾಗಿರಬೇಕು ಎಂದು ಆರ್ ಬಿಐ ಬಯಸುತ್ತದೆ. ಹೀಗಾಗಿ ಸ್ವಚ್ಛ ನೋಟು ನೀತಿ ಭಾಗವಾಗಿ ನೋಟುಗಳ ಮೇಲೆ ಏನೂ ಗೀಚದಂತೆ ಜನರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುತ್ತದೆ. ಆದರೆ, ಬರಹ ಹೊಂದಿರುವ ಬ್ಯಾಂಕ್ ನೋಟುಗಳನ್ನು ಅಮಾನ್ಯವಾಗುವುದಿಲ್ಲ. ಬದಲಿಗೆ ಅದು ಕಾನೂನುಬದ್ಧವಾಗಿಯೇ ಇರುತ್ತದೆ. ಸರ್ಕಾರದ ಅಧಿಕೃತ ಸತ್ಯ ಪರಿಶೀಲನ ಸಂಸ್ಥೆ ಪಿಐಬಿ ಫ್ಯಾಕ್ಟ್ ಚೆಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಸುದ್ದಿ ಸುಳ್ಳು ಎಂದು ತಿಳಿಸಿದೆ.
ನೋಟುಗಳ ಅಂದಗೆಡಿಸುವ ಜೊತೆಗೆ ಜೀವಿತಾವಧಿಯನ್ನು ತಗ್ಗಿಸುವ ಕಾರಣಕ್ಕೆ ಅವುಗಳ ಮೇಲೆ ಏನೂ ಬರೆಯಬಾರದು ಎಂಬ ನಿರೀಕ್ಷೆಯಂತೂ ಆರ್ ಬಿಐಗೆ ಇದೆ. ಆದರೆ, ಬರಹಗಳನ್ನು ಹೊಂದಿರುವ ನೋಟುಗಳನ್ನು ಅಮಾನ್ಯಗೊಳಿಸೋದಾಗಿ ಆರ್ ಬಿಐ ಹೇಳಿಲ್ಲ. ಹೀಗಾಗಿ ನಿಮ್ಮ ಬಳಿ ಗೀಚಿರುವ 2000ರೂ., 500ರೂ., 200 ರೂ., 100ರೂ., 50ರೂ. ಹಾಗೂ 20 ರೂ. ನೋಟುಗಳಿದ್ರೆ ಹೆದರಬೇಕಾದ ಅಗತ್ಯವಿಲ್ಲ. ಅವುಗಳನ್ನು ಆರಾಮವಾಗಿ ಚಲಾವಣೆ ಮಾಡಬಹುದು.
ಏರ್ ಇಂಡಿಯಾ ವಿಮಾನದಲ್ಲಿ ಅಮಲೇರಿದ ವ್ಯಕ್ತಿಯ ಮತ್ತೊಂದು ಕಿಕ್ ಗದ್ದಲ: ಪುಟ್ಟ ಬಾಲಕಿ ಜತೆ ಅಸಭ್ಯ ವರ್ತನೆ
ನಕಲಿ ಸಂದೇಶದಲ್ಲಿ ಏನಿದೆ?
'ಆರ್ ಬಿಐ ಹೊಸ ಮಾರ್ಗಸೂಚಿಗಳ ಅನ್ವಯ ಹೊಸ ನೋಟುಗಳ ಮೇಲೆ ಏನಾದ್ರೂ ಬರೆಯೋದ್ರಿಂದ ಅವುಗಳು ಅಮಾನ್ಯವಾಗುತ್ತವೆ. ಅವುಗಳು ಕಾನೂನುಬದ್ಧವಾಗಿರೋದಿಲ್ಲ' ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ, ಈ ಸಂದೇಶ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ ( PIB Fact Check)ಟ್ವೀಟ್ ಮಾಡಿದೆ. 'ಇಲ್ಲ, ಗೀಚುಗಳಿರುವ ಬ್ಯಾಂಕ್ ನೋಟುಗಳು ಅಮಾನ್ಯವಲ್ಲ ಹಾಗೂ ಕಾನೂನಾತ್ಮಕ ಮಾನ್ಯತೆ ಹೊಂದಿವೆ' ಎಂದು ತಿಳಿಸಿದೆ.
ಆರ್ ಬಿಐ ಏನ್ ಹೇಳುತ್ತೆ?
ಕರೆನ್ಸಿ ನೋಟುಗಳ ಮೇಲೆ ಗೀಚುವುದರಿಂದ ಜೀವಿತಾವಧಿ ಕಡಿಮೆಯಾಗುವ ಕಾರಣಕ್ಕೆ ಆ ರೀತಿ ಮಾಡಬೇಡಿ ಎಂದು ಆರ್ ಬಿಐ ಸ್ವಚ್ಛ ನೋಟು ನೀತಿ (RBI’s Clean Note Policy) ಅಡಿಯಲ್ಲಿ ಬಳಕೆದಾರರಲ್ಲಿ ಮನವಿ ಮಾಡಿದೆ.
ಇದನ್ನು ಮಾಡದಂತೆ ಮನವಿ
ಕರೆನ್ಸಿ ನೋಟುಗಳನ್ನು ಹೂ ಮಾಲೆ ಅಥವಾ ಆಟಿಕೆಗಳನ್ನು ಮಾಡಲು ಬಳಸುವಂತಿಲ್ಲ. ಹಾಗೆಯೇ ಪೂಜಾ ಸಮಯದಲ್ಲಿ ಅಲಂಕಾರಕ್ಕೆ ಹಾಗೂ ಕಾರ್ಯಕ್ರಮಗಳಲ್ಲಿ ವ್ಯಕ್ತಿಗಳ ಮೇಲೆ ಎಸೆಯಲು ಬಳಸುವಂತಿಲ್ಲ.
ಇನ್ಮುಂದೆ ಬ್ರಿಟಿಷ್ ಏರ್‌ವೇಸ್ ಗಗನಸಖಿಯರಿಗೆ ಸಮವಸ್ತ್ರವಾಗಿ ಹಿಜಾಬ್ ಬಳಕೆ..!
ನೋಟು ಬದಲಾವಣೆ ಹೇಗೆ?
ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿದ ಮಾರ್ಗಸೂಚಿ (Guidelines)ಗಳ ಪ್ರಕಾರ, ನಿಮ್ಮ ಬಳಿ ಹರಿದ, ವಿರೂಪಗೊಂಡ ಅಥವಾ ಹಾನಿಗೊಳಗಾದ ಕರೆನ್ಸಿ ನೋಟು ಇದ್ದರೆ ಅದನ್ನು ನೀವು ಬ್ಯಾಂಕ್‌ಗೆ ನೀಡಬೇಕು. ಹರಿದ ಪ್ರಮಾಣದ ಮೇಲೆ ಬ್ಯಾಂಕ್ ಮೌಲ್ಯವನ್ನು ನಿರ್ಧರಿಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ 2009ರಡಿ ಈ ವಿನಿಮಯ ನಡೆಯುತ್ತದೆ. ನಿಮ್ಮ ಸಮೀಪದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನೀವು ಈ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಬ್ಯಾಂಕ್ ಉದ್ಯೋಗಿಗಳು ನಿಮ್ಮ ನೋಟು ವಿನಿಮಯವನ್ನು ನಿರಾಕರಿಸುವಂತಿಲ್ಲ. ಹಾಳಾಗಿರುವ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಲ್ಲ ಬ್ಯಾಂಕ್‌ಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದೆ. ಹಾಗಾಗಿ ಬ್ಯಾಂಕ್ ಗಳು ತಮ್ಮ ಶಾಖೆಯಲ್ಲಿ ಇದ್ರ ಬಗ್ಗೆ ಮಾಹಿತಿ ಬೋರ್ಡ್ ಹಾಕಿರುತ್ತವೆ. ಕೆಲ ಬ್ಯಾಂಕ್ ಗಳಲ್ಲಿ ಈ ಸೌಲಭ್ಯವಿಲ್ಲ.