51 ಸಾವಿರ ಗಟಿ ದಾಟಿದ ಚಿನ್ನದ ದರ: ಬೆಳ್ಳಿ ಕೆ.ಜಿ.ಗೆ 60,000 ರು.!
ದಾಖಲೆಯ 51 ಸಾವಿರ ಗಟಿ ದಾಟಿದ ಚಿನ್ನದ ದರ: ಬೆಳ್ಳಿ ಕೆ.ಜಿ.ಗೆ 60,000 ರು.| ಬುಧವಾರ 10 ಗ್ರಾಮ್ ಚಿನ್ನದ ದರ 50 ಸಾವಿರ ರು. ದಾಟಿ ದಾಖಲೆ ನಿರ್ಮಿಸಿತ್ತು
ಮುಂಬೈ(ಜು.25): ದಿನೇ ದಿನೆ ಗಗನಮುಖಿ ಆಗುತ್ತಿರುವ ಚಿನ್ನದ ದರ ಮತ್ತೊಮ್ಮೆ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ. ಶುಕ್ರವಾರ ಮುಂಬೈ ಚಿನಿವಾರ ಪೇಟೆಯಲ್ಲಿ 99.9 ಶುದ್ಧತೆಯ 10 ಗ್ರಾಂ ಚಿನ್ನ 419 ರು. ಏರಿಕೆ ಆಗಿದ್ದು, 51,124 ರು. ಹಾಗೂ ಆಭರಣ ಚಿನ್ನ 421 ರು. ಏರಿಕೆ ಆಗಿದ್ದು, 50,919ರು.ಗೆ ತಲುಪಿದೆ. ಇದೇ ವೇಳೆ ಬೆಳ್ಳಿಯ ದರ ಕೆ.ಜಿ.ಗೆ 900 ರು. ಇಳಿಕೆ ಆಗಿದ್ದು, 59,885 ರು. ಆಗಿದೆ.
ಈ ಮುನ್ನ ಬುಧವಾರ 10 ಗ್ರಾಮ್ ಚಿನ್ನದ ದರ 50 ಸಾವಿರ ರು. ದಾಟಿ ದಾಖಲೆ ನಿರ್ಮಿಸಿತ್ತು. ಇದೇ ವೇಳೆ ಬೆಂಗಳೂರಿನಲ್ಲಿ 10 ಗ್ರಾಂ ಶುದ್ಧ ಚಿನ್ನಕ್ಕೆ 51,125 ರು. ಹಾಗೂ ಅಭರಣ ಚಿನ್ನಕ್ಕೆ 4,805 ರು. ಆಗಿದ್ದು, ಬೆಳ್ಳಿ ಕೇಜಿಗೆ 60,500 ರು.ಗೆ ಏರಿಕೆ ಆಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನದ ದರ ಕಳೆದ ಮೂರು ತಿಂಗಳಿನಲ್ಲೇ ಅತಿ ಗರಿಷ್ಠ ಏರಿಕೆ ದಾಖಲಿಸಿದೆ. ಅಲ್ಲದೇ ಡಾಲರ್ ದುರ್ಬಲಗೊಂಡಿದ್ದರಿಂದ ಚಿನ್ನದ ಮೇಲಿನ ಹೂಡಿಕೆ ಹಾಗೂ ಹಣದುಬ್ಬರದ ನಿರೀಕ್ಷೆಗಳು ಚಿನ್ನದ ದರ ಏರಿಕೆಗೆ ಕಾರಣವಾಗಿದೆ.