ಭಾರತದಲ್ಲಿ ಹೆಚ್ಚುತ್ತಿರುವ ಚಿನ್ನದ ಬೇಡಿಕೆ ಆಮದಿನ ಪ್ರಮಾಣವನ್ನು ಕೂಡ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಚಿನ್ನದ ಆಮದಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮೂಲ ಆಮದು ತೆರಿಗೆಯನ್ನು ಶೇ.7.5ರಿಂದ ಶೇ.12.5ಕ್ಕೆ ಹೆಚ್ಚಳ ಮಾಡಿದೆ. ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಈಗಾಗಲೇ ದುಬಾರಿಯಾಗಿರುವ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ.
ನವದೆಹಲಿ (ಜು.1): ಕೇಂದ್ರ ಸರ್ಕಾರ (Central Government) ಚಿನ್ನದ (Gold) ಮೇಲಿನ ಮೂಲ ಆಮದು ತೆರಿಗೆಯನ್ನು (Basic Import Duty) ಶೇ.7.5ರಿಂದ ಶೇ.12.5ಕ್ಕೆ ಹೆಚ್ಚಳ ಮಾಡಿದೆ. ದೇಶದ ವ್ಯಾಪಾರ ಕೊರತೆಯು (trade deficit) ಕಳೆದ ತಿಂಗಳು ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದ್ದರೆ, ರೂಪಾಯಿ ಮೌಲ್ಯ ಕೂಡ ಡಾಲರ್ (Dollar) ಎದುರು ದಾಖಲೆಯ ಮಟ್ಟಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ (Government) ಚಿನ್ನದ (Gold) ಮೇಲಿನ ಆಮದು ಸುಂಕ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದೆ.
ಚಿನ್ನದ ಮೇಲಿನ ಮೂಲ ಆಮದು ತೆರಿಗೆ (Basic Import Duty) ಹೆಚ್ಚಳದಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗುವ ನಿರೀಕ್ಷೆಯಿದೆ. ಚಿನ್ನದ ಮೇಲಿನ ಆಮದು ಸುಂಕ ಈ ಹಿಂದೆ ಶೇ.10.75 ಇತ್ತು, ಈಗ ಆಮದು ತೆರಿಗೆ ಹೆಚ್ಚಳದ ಬಳಿಕ ಶೇ.15.75ಕ್ಕೆ ಏರಿಕೆಯಾಗಲಿದೆ.
ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಲು ಕಾರಣವೇನು?
ಭಾರತದ ವ್ಯಾಪಾರ ಕೊರತೆ (trade deficit) ಹೆಚ್ಚುತ್ತಲೇ ಸಾಗುತ್ತಿದೆ. ಸರ್ಕಾರ ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ ಒಂದು ವರ್ಷದಲ್ಲಿ ಭಾರತದ ವ್ಯಾಪಾರ ಕೊರತೆ 6.53 ಬಿಲಿಯನ್ ಡಾಲರ್ ನಿಂದ 24.29 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಈ ಆರ್ಥಿಕ ಸಾಲಿನ ಮೊದಲ ಎರಡು ತಿಂಗಳಲ್ಲಿ ವ್ಯಾಪಾರ ಕೊರತೆ 44.69 ಬಿಲಿಯನ್ ಡಾಲರ್ ಗೆ ಹೆಚ್ಚಾಗಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ ವ್ಯಾಪಾರ ಕೊರತೆ 21.82 ಬಿಲಿಯನ್ ಡಾಲರ್ ಇತ್ತು. ವ್ಯಾಪಾರದಲ್ಲಿ ಹೆಚ್ಚುತ್ತಿರುವ ಅಂತರ ಹಾಗೂ ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಸಾರ್ವಕಾಲಿಕ 79.12ರೂ.ಗೆ ಇಳಿಕೆ ಮಾಡಿದೆ.
ಭಾರತವು (India) ಜಗತ್ತಿನ ಎರಡನೇ ಅತೀದೊಡ್ಡ ಚಿನ್ನ ಬಳಕೆ ಮಾಡುವ ರಾಷ್ಟ್ರವಾಗಿದೆ. ಚೀನಾ (China) ಜಗತ್ತಿನ ಅತೀದೊಡ್ಡ ಚಿನ್ನ ಬಳಕೆ ರಾಷ್ಟ್ರವಾಗಿದೆ. ಭಾರತದ ಬಹುಪಾಲು ಚಿನ್ನದ ಬೇಡಿಕೆಯನ್ನು ಆಮದಿನ ಮೂಲಕವೇ ಪೂರ್ಣಗೊಳಿಸಲಾಗುತ್ತಿದೆ. ಅದರಲ್ಲೂ ಆಭರಣ ಕೈಗಾರಿಕಾ ಕ್ಷೇತ್ರದಿಂದ ಚಿನ್ನಕ್ಕೆ ಹೆಚ್ಚಿನ ಬೇಡಿಕೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷದ ಮೇನಲ್ಲಿ ಚಿನ್ನದ ಆಮದು ಸುಮಾರು 9 ಪಟ್ಟು ಹೆಚ್ಚಳವಾಗಿ 7.7 ಬಿಲಿಯನ್ ಡಾಲರ್ ತಲುಪಿದೆ. ಹೀಗಾಗಿ ಹೆಚ್ಚುತ್ತಿರುವ ವ್ಯಾಪಾರ ಕೊರತೆ ಹಾಗೂ ಕುಸಿಯುತ್ತಿರುವ ರೂಪಾಯಿ ಮೌಲ್ಯದ ನಡುವೆ ಚಿನ್ನದ ಆಮದಿನ ಮೇಲೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ (Central Government) ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳಕ್ಕೆ ಮುಂದಾಗಿದೆ.
LPG Cylinder Price Cut:ಎಲ್ ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್; ಸಿಲಿಂಡರ್ ಬೆಲೆಯಲ್ಲಿ 198ರೂ. ಇಳಿಕೆ
ದುಬಾರಿಯಾಗಲಿದೆ ಚಿನ್ನ
ಕೊರೋನಾ ಸಾಂಕ್ರಾಮಿಕದ ಬಳಿಕ ಚಿನ್ನಕ್ಕೆ ಬೇಡಿಕೆ ಹೆಚ್ಚಿದ ಪರಿಣಾಮ ಚಿನ್ನದ ಆಮದು ಕೂಡ ಹೆಚ್ಚಿತು. ಹೀಗಾಗಿ ಹೆಚ್ಚುತ್ತಿರುವ ಚಿನ್ನದ ಆಮದಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಚಿನ್ನವನ್ನು ದುಬಾರಿಯಾಗಿಸಿತು. ಈ ನಡುವೆ ಕಳೆದ ವರ್ಷ ದೇಶೀಯ ಮಾರುಕಟ್ಟೆಯನ್ನು ಬಲಪಡಿಸಲು ಸರ್ಕಾರ ಆಮದು ಸುಂಕವನ್ನು ಶೇ.7.5ಕ್ಕೆ ಕಡಿತಗೊಳಿಸಿತ್ತು. ಈಗ ಆಮದು ಸುಂಕವನ್ನು ಹೆಚ್ಚಳ ಮಾಡಿದೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಲಿದೆ. ಆಮದು ಸುಂಕದ ಹೆಚ್ಚಳದ ಬಳಿಕ ಚಿನ್ನದ ಮೇಲಿನ ಒಟ್ಟು ತೆರಿಗೆ ಶೇ.18.75ಕ್ಕೆ ಏರಿಕೆಯಾಗಲಿದೆ. ಈಗಾಗಲೇ ದೇಶದಲ್ಲಿ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದು, ಆಮದು ಸುಂಕ ಹೆಚ್ಚಳದಿಂದ ಮತ್ತಷ್ಟು ಏರಿಕೆಯಾಗಲಿದೆ.ಇದು ಆಭರಣಪ್ರಿಯರಿಗೆ ಮುಂದಿನ ದಿನಗಳಲ್ಲಿನಿರಾಸೆ ಮೂಡಿಸೋದು ಖಚಿತ. ಅಮೆರಿಕ, ಚೀನಾ ಮುಂತಾದ ಕೆಲವು ರಾಷ್ಟ್ರಗಳು ದೇಶೀಯ ಮಾರುಕಟ್ಟೆಗೆ ಬೆಂಬಲ ನೀಡಲು ಈಗಾಗಲೇ ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿವೆ.
