ನವದೆಹಲಿ(ಜ.15): ಹಾಲ್ಮಾರ್ಕ್ ಇರದ ಚಿನ್ನದ ಮಾರಾಟವನ್ನು 2021ರಿಂದ ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇಂದಿನಿಂದ ಹಾಲ್ಮಾರ್ಕ್ ಇರುವ ಚಿನ್ನದ ಮಾರಾಟವನ್ನು ಕಡ್ಡಾಯಗೊಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಗ್ರಾಹಕ ವ್ಯವಹಾರ ಖಾತೆ ಸಚಿವೆ ರಾಮ್ ವಿಲಾಸ್ ಪಾಸ್ವಾನ್, ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಸ್'ನಲ್ಲಿ ರೆಜಿಸ್ಟರ್ ಮಾಡುವ ಮೂಲಕ ಹಾಲ್ಮಾರ್ಕ್ ಸರ್ಟಿಫಿಕೆಟ್ ಪಡೆಯುವುದು ಕಡ್ಡಾಯ ಎಂದು ಹೇಳಿದ್ದಾರೆ.

ದೇಶದ ಸಣ್ಣ ನಗರಗಳಲ್ಲಿರುವ ಗ್ರಾಹಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಾಲಾಗಿದೆ ಎಂದು ರಾಮ್ ವಿಲಾಸ್ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ.

ಅದಾಗ್ಯೂ ಹಾಲ್ಮಾರ್ಕ್ ಇರದ ಚಿನ್ನದ ಮಾರಾಟಕ್ಕೆ 2021ರ ಜನವರಿ 15ರ ವರೆಗೂ ಅವಕಾಶ ನೀಡಲಾಗಿದ್ದು, ಆಭರಣ ಮಾರಾಟಗಾರರು ಈ ಒಂದು ವರ್ಷದ ಅವಧಿಯಲ್ಲಿ ತಮ್ಮಲ್ಲಿರುವ ಹಳೆಯ ಚಿನ್ನದ ಸಂಗ್ರಹವನ್ನು ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.

2021 ರಿಂದ ಹಾಲ್ಮಾರ್ಕ್ ಇರದ ಚಿನ್ನದ ಮಾರಾಟ ಬಂದ್!

ಹೊಸ ನಿಯಮದ ಪ್ರಕಾರ ಬಿಐಎಸ್ 14 ಕ್ಯಾರೆಟ್, 18 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಗುಣಮಟ್ಟದ ಹಾಲ್ಮಾರ್ಕ್ ನೀಡುತ್ತದೆ. ಈ ಹಾಲ್ಮಾರ್ಕ್ ಅಡಿಯಲ್ಲೇ ಚಿನ್ನದ ಮಾರಾಟ ಮಾಡುವುದು ವ್ಯಾಪಾರಿಗಳಿಗೆ ಅನಿವಾರ್ಯವಾಗಲಿದೆ.

ಹಾಲ್ಮಾರ್ಕ್ ಚಿನ್ನದ ಕುರಿತು ಪ್ರಮುಖ ಮಾಹಿತಿ:
1) ಗೋಲ್ಡ್ ಹಾಲ್ಮಾರ್ಕಿಂಗ್ ಅಮೂಲ್ಯವಾದ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದ್ದು, ಇದು ಆಭರಣ ಖರೀದಿದಾರರಿಗೆ ಶುದ್ಧತೆಯ ಭರವಸೆ ನೀಡುತ್ತದೆ.

2) 14 ಕ್ಯಾರೆಟ್, 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎಂಬ 3 ವಿಭಾಗಗಳಲ್ಲಿ ಆಭರಣಗಳಿಗಾಗಿ ಹಾಲ್ಮಾರ್ಕಿಂಗ್ ಮಾಡಲಾಗುತ್ತದೆ.

3) ಹತ್ತು ಶ್ರೇಣಿಗಳ ಚಿನ್ನದ ಆಭರಣಗಳು ಮಾರಾಟಕ್ಕೆ ಲಭ್ಯವಿದ್ದು, ಹಾಲ್ಮಾರ್ಕ್ ಆಭರಣ ಖರೀದಿಯ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ.

4) ಚಿನ್ನದ ಆಭರಣಗಳ ಕಡ್ಡಾಯ ಹಾಲ್ಮಾರ್ಕಿಂಗ್ ಖರೀದಿದಾರರನ್ನು ಕಡಿಮೆ ಕ್ಯಾರೆಟೇಜ್ ಚಿನ್ನ ಖರೀದಿಯಿಂದ ರಕ್ಷಿಸುತ್ತದೆ.

5) ಕಡ್ಡಾಯ ಹಾಲ್ಮಾರ್ಕಿಂಗ್ ಚಿನ್ನದ ಆಭರಣಗಳನ್ನು ಖರೀದಿಸುವಾಗ ಗ್ರಾಹಕರು ಮೋಸ ಹೋಗದಂತೆ ನೋಡಿಕೊಳ್ಳುತ್ತದೆ. ಅಲ್ಲದೇ ಆಭರಣದ ಮೇಲೆ ಗುರುತಿಸಲಾದ ಶುದ್ಧತೆ ಮತ್ತು ಕ್ಯಾರೆಟ್ ಅನ್ನು ನುಮೋದಿಸುತ್ತದೆ.

6) ಬಿಐಎಸ್ ಹಾಲ್ಮಾರ್ಕ್ ಇಲ್ಲದೆ ಮಾರಾಟ ಮಾಡಿದರೆ, ಆಭರಣ ವ್ಯಾಪಾರಿಗೆ ದಂಡ ಮತ್ತು ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. 

7) ಚಿನ್ನದ ಆಭರಣಗಳ ಮೇಲಿನ ಹಾಲ್ಮಾರ್ಕ್ ಈಗ ನಾಲ್ಕು ಅಂಕಗಳನ್ನು ಹೊಂದಿದೆ: ಬಿಐಎಸ್ ಗುರುತು, ಕ್ಯಾರೆಟ್‌ನಲ್ಲಿ ಶುದ್ಧತೆ, ಮೌಲ್ಯಮಾಪನ ಕೇಂದ್ರದ ಹೆಸರು ಮತ್ತು ಆಭರಣಕಾರರ ಗುರುತಿನ ಗುರುತು.

8) ಆಭರಣ ವ್ಯಾಪಾರಿಗಳು ಮತ್ತು ಸಾಮಾನ್ಯ ಗ್ರಾಹಕರಿಗೆ ಕಡ್ಡಾಯವಾಗಿ ಹಾಲ್ಮಾರ್ಕಿಂಗ್ ಕುರಿತು ಜಾಗೃತಿ ಅಭಿಯಾನವನ್ನು ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗುವುದು.

9) ಬಿಐಎಸ್ ಈಗಾಗಲೇ ಹಾಲ್ಮಾರ್ಕಿಂಗ್ ಅಭಿಯಾನ ಆರಂಭಿಸಿದ್ದು, ಪ್ರಸ್ತುತ ಶೇ. 40 ರಷ್ಟು ಚಿನ್ನಾಭರಣಗಳಿಗೆ ಹಾಲ್ಮಾರ್ಕ್ ನೀಡಲಾಗಿದೆ. 

10) 2019 ರ ಡಿಸೆಂಬರ್ 31ರ ವೇಳೆಗೆ ದೇಶಾದ್ಯಂತ 234 ಜಿಲ್ಲಾ ಸ್ಥಳಗಳಲ್ಲಿ 892 ಅಸ್ಸೇಯಿಂಗ್ ಮತ್ತು ಹಾಲ್ಮಾರ್ಕಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ  28,849 ಆಭರಣ ವ್ಯಾಪಾರಿಗಳನ್ನು ಬಿಐಎಸ್ ಈಗಾಗಲೇ ನೋಂದಾಯಿಸಿದೆ.