Asianet Suvarna News Asianet Suvarna News

Gold consumption:ಭಾರತದಲ್ಲಿ ಚಿನ್ನ ಖರೀದಿಗೆ ಅಡ್ಡಿಯಾಗದ ಕೋವಿಡ್ -19 ಭೀತಿ; 2021ರಲ್ಲಿ797.3 ಟನ್ಸ್ ಬಂಗಾರ ಬಳಕೆ!

*2021ನೇ ಸಾಲಿನಲ್ಲಿ ಭಾರತದಲ್ಲಿ ಐದು ವರ್ಷಗಳ ಅವಧಿಯಲ್ಲೇ ಅತ್ಯಧಿಕ ಪ್ರಮಾಣದ ಚಿನ್ನ ಬಳಕೆ 
*ಚಿನ್ನದ ಬಳಕೆ ಕುರಿತು ಮಾಹಿತಿ ಬಿಡುಗಡೆ ಮಾಡಿದ ವರ್ಲ್ಡ್ ಗೋಲ್ಡ್ ಕೌನ್ಸಿಲ್
*2021 ರಲ್ಲಿ ಚಿನ್ನದ ಖರೀದಿಯಲ್ಲಿ 78% ಹೆಚ್ಚಳ
 

Gold consumption in India increases to 797.3 tonnes in 2021 says World Gold Council data
Author
Bangalore, First Published Jan 29, 2022, 1:43 PM IST

Business Desk: 2021ನೇ ಸಾಲಿನಲ್ಲಿ ಭಾರತದಲ್ಲಿ ಚಿನ್ನದ ಬಳಕೆ  797.3 ಟನ್ಸ್ ಗೆ ಏರಿಕೆ ಕಂಡಿದ್ದು,ಇದು ಕಳೆದ ಐದು ವರ್ಷಗಳ ಅವಧಿಯಲ್ಲಿ ಅತ್ಯಧಿಕ ಪ್ರಮಾಣದ್ದಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ (World Gold Council) ಇತ್ತೀಚೆಗೆ ಮಾಹಿತಿ ನೀಡಿದೆ. 2021ರಲ್ಲಿ ಬಂಗಾರದ ಒಡವೆಗಳಿಗೆ ಬೇಡಿಕೆ ದ್ವಿಗುಣಗೊಂಡಿದೆ. ಕೋವಿಡ್  ಪೂರ್ವ ಬೇಡಿಕೆ ಮಟ್ಟವನ್ನು ಮೀರಿ ಆರು ವರ್ಷಗಳ ಅವಧಿಯಲ್ಲಿ ಅತ್ಯಧಿಕ 610.9 ಟನ್ಸ್ ಗೆ ತಲುಪಿದೆ. ಮದುವೆ ಹಾಗೂ ಹಬ್ಬಗಳ ಅವಧಿಯಲ್ಲಿ ಬೇಡಿಕೆ ಹೆಚ್ಚಿದ್ದು, ನಗರ ಪ್ರದೇಶದ ಗ್ರಾಹಕರೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿದ್ದಾರೆ. 2020ರಲ್ಲಿ ಭಾರತದ ಚಿನ್ನ ಆಮದು 165% ಹೆಚ್ಚಳಗೊಂಡು 349.5 ಟನ್ಸ್ ನಿಂದ 924.6 ಟನ್ಸ್ ತಲುಪಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾದ ಕಾರಣ 2021 ರಲ್ಲಿ ಚಿನ್ನದ ಖರೀದಿಯಲ್ಲಿ 78% ಹೆಚ್ಚಳವಾಗಿದೆ. 

2021ರ ದ್ವಿತೀಯಾರ್ಧದಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದ್ದು, ವ್ಯಾಕ್ಸಿನೇಷನ್ ಕಾರ್ಯಕ್ರಮದ ಯಶಸ್ವಿ ಹಾಗೂ ಆರ್ಥಿಕ ಪ್ರಗತಿ ಗ್ರಾಹಕರ ಭಾವನೆಗಳ ಮೇಲೆ ಪರಿಣಾಮ ಬೀರಿದೆ. ಇದ್ರಿಂದ ದಸರಾ ಹಾಗೂ ದೀಪಾವಳಿ ಸಮಯದಲ್ಲಿ ಚಿನ್ನದ ಮೇಲಿನ ವೆಚ್ಚ ಹಾಗೂ ಹೂಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು  ವರ್ಲ್ಡ್ ಗೋಲ್ಡ್ ಕೌನ್ಸಿಲ್ ತಿಳಿಸಿದೆ.

Work from Home Challenges: ಹೇಳಿದಷ್ಟು ಯಾವುದೂ ಸುಲಭವಲ್ಲ, ಇದ್ರಲ್ಲೂ ಇದೆ ಅನೇಕ ಸವಾಲು!

'2016-2019 ಅವಧಿಯಲ್ಲಿ ಭಾರತದಲ್ಲಿ ಚಿನ್ನದ ಉದ್ಯಮ ಅನೇಕ ಸಾಂಸ್ಥಿಕ ಬದಲಾವಣೆಗಳು ಹಾಗೂ ಅನುಸರಣಾ ನಿಯಮಗಳಿಗೊಳಪಟ್ಟ ಕಾರಣ ಚಿನ್ನದ ಸರಾಸರಿ ಬಳಕೆ 720 ಟನ್ ಗೆ ಇಳಿಕೆಯಾಗಿತ್ತು. ಹಿಂದಿನ ಐದು ವರ್ಷಗಳಲ್ಲಿ ಚಿನ್ನದ ಸರಾಸರಿ ಬಳಕೆ 908 ಟನ್ಸ್ ಆಗಿತ್ತು' ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಭಾರತದ ಪ್ರಾದೇಶಿಕ ಸಿಇಒ ಶ್ಯಾಂಸುಂದರಂ ಪಿಆರ್ ಮಾಹಿತಿ ನೀಡಿದ್ದಾರೆ. 

ಭಾರತದ ಚಿನ್ನದ ಮಾರುಕಟ್ಟೆ ಸಾಕಷ್ಟು ಬದಲಾವಣೆಗೊಳಪಟ್ಟಿದೆ. ಈಗ ಸಾಕಷ್ಟು ವ್ಯವಸ್ಥಿತವಾಗಿದೆ ಕೂಡ.  2022ರ ಬಳಿಕ ಚಿನ್ನದ ಬಳಕೆಯ ಸಾಮಾನ್ಯ ಮಟ್ಟ ಸುಮಾರು 800-850 ಟನ್ಸ್ ಇದೆ' ಎಂದು ಶ್ಯಾಂಸುಂದರಂ ತಿಳಿಸಿದ್ದಾರೆ. 
2022ರಲ್ಲಿ ಗ್ರಾಮೀಣ ಭಾರತದ ಆರ್ಥಿಕ ಚೇತರಿಕೆ ಎಲ್ಲ ವಲಯಗಳಲ್ಲೂ ಕಂಡುಬಂದಿದೆ ಎಂದು ಶ್ಯಾಂಸುಂದರಂ ಹೇಳಿದ್ದಾರೆ. 

ನಾಲ್ಕನೇ ತ್ರೈಮಾಸಿಕದಲ್ಲಿ ಚಿನ್ನದ ಮೇಲಿನ ಹೂಡಿಕೆಗೆ ಬೇಡಿಕೆ ಹೆಚ್ಚಿದ್ದು, ಎಂಟು ವರ್ಷಗಳಲ್ಲೇ ಅತ್ಯಧಿಕ 79 ಟನ್ಸ್ ಗೆ ತಲುಪಿದೆ. ಇನ್ನು ಡಿಜಿಟಲ್ ಚಿನ್ನದ ಉಳಿತಾಯ ಕೂಡ ಹೆಚ್ಚಿದ್ದು, ಇದು ಭವಿಷ್ಯದಲ್ಲಿ ಚಿನ್ನದ ಮೇಲಿನ ಹೂಡಿಕೆಗೆ ಸಂಬಂಧಿಸಿ ಜನರ ವರ್ತನೆ ಹೇಗಿರಬಲ್ಲದು ಎಂಬುದರ ದ್ಯೋತಕವಾಗಿದೆ. 

Earn Money: ಮನೆಯಲ್ಲೇ ಕುಳಿತು ಯುಟ್ಯೂಬ್ ಮೂಲಕ ಹಣ ಗಳಿಸಿ

2022ರಲ್ಲಿ ಕೋವಿಡ್ -19 ರೂಪಾಂತರಿಗಳು ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಚಿನ್ನದ ಬೆಲೆ ಹಾಗೂ ಬೇಡಿಕೆ ಮೇಲೆ ಪರಿಣಾಮ ಬೀರಲಿದೆ. ಜಾಗತಿಕ ಹಣದುಬ್ಬರ, ಬಡ್ಡಿದರ ಹಾಗೂ ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನಗಳು ಕೂಡ ಚಿನ್ನದ ದರದ ಮೇಲೆ ಪರಿಣಾಮ ಬೀರಲಿವೆ. ಪ್ರಸ್ತುತ ಕೋವಿಡ್ ಹಾಗೂ ಅದರ ಹೊಸ ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಹೆಚ್ಚಿದ್ದರೂ ಕೂಡ ಅವುಗಳು ಅಷ್ಟೊಂದು ಅಪಾಯಕಾರಿಯಲ್ಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೆಲವು ರಾಷ್ಟ್ರಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯವಲ್ಲ ಎಂಬ ನಿಯಮವನ್ನು ಕೂಡ ಜಾರಿ ಮಾಡಲಾಗಿದೆ. ಭಾರತದಲ್ಲಿ ಕೂಡ ಕೋವಿಡ್ ಸಂಬಂಧಿ ನಿಯಮಗಳನ್ನು ಈಗಾಗಲೇ ಸಡಿಲಗೊಳಿಸಲಾಗಿದೆ. ಮುಂದಿನ ಕೆಲವೇ ಸಮಯದಲ್ಲಿ ಜನಜೀವನ ಮತ್ತೆ ಸಹಜ ಸ್ಥಿತಿಗೆ ತಲುಪೋ ನಿರೀಕ್ಷೆಯಿದೆ. ಎಲ್ಲವೂ ಸಹಜ ಸ್ಥಿತಿಗೆ ಮರಳಿದ್ರೆ ಚಿನ್ನದ ಬೇಡಿಕೆ ಇನ್ನೂ ಹೆಚ್ಚೋ ಸಾಧ್ಯತೆಯಿದೆ. 
 

Follow Us:
Download App:
  • android
  • ios