ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಶೀಘ್ರವೇ ದಿನಾಂಕ ನಿಗದಿ, 5 ಲಕ್ಷ ಉದ್ಯೋಗ ಸೃಷ್ಟಿ
* 15 ದಿನದೊಳಗೆ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ದಿನಾಂಕ ನಿಗದಿ
* ಪುಡ್ ಪಾಕ್೯ಗೆ ಭೇಟಿ ಕೊಟ್ಟು ಪರಿಶೀಲಿಸಿದ ಸಚಿವ ನಿರಾಣಿ
* ಮುಂದಿನ ವರ್ಷ ಹೂಡಿಕೆದಾರರ ಸಮಾವೇಶ
* ಈ ಬಾರಿ 5 ಲಕ್ಷ ಉದ್ಯೋಗದ ಗುರಿ
* ಸ್ಥಳೀಯರಿಗೆ ಉದ್ಯೋಗ ನೀಡಬೇಕು.
ತುಮಕೂರು(ಸೆ. 02) ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಹಾಗೂ ' ಉದ್ಯೋಗ ಕ್ರಾಂತಿಗೆ' ನಾಂದಿ ಹಾಡಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ 15 ದಿನದೊಳಗೆ ದಿನಾಂಕ ನಿಗದಿಪಡಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.
ಗುರುವಾರ ತುಮಕೂರಿನ ವಸಂತನರಸಪುರದ ಕೈಗಾರಿಕಾ ಪ್ರದೇಶದಲ್ಲಿರುವ ಪುಡ್ ಪಾರ್ಕ್ ಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.
ಸದ್ಯದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೈಗಾರಿಕಾ ಸಂಘ ಸಂಸ್ಥೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗುವುದು. 15 ದಿನದೊಳಗೆ 2022 ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ದಿನಾಂಕ ನಿಗದಿ ಮಾಡುವುದಾಗಿ ಹೇಳಿದರು.
ದೇಶ-ವಿದೇಶಗಳಿಂದ ಕೈಗಾರಿಕೆ ಸ್ಥಾಪನೆ ಮಾಡಲು ಉದ್ಯಮಿಗಳಿಗೆ ಅಹ್ವಾನ ಮಾಡುವ ಮೂಲಕ 2022 ರಲ್ಲಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗುವುದು. ಕಳೆದ ಬಾರಿಯಂತೆ ಈ ಬಾರಿಯೂ ಹೂಡಿಕೆದಾರರ ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುವುದು. ಈ ಬಾರಿ ಹೊಸದಾಗಿ 5 ಲಕ್ಷ ಉದ್ಯೋಗಗಳನ್ನು ನೀಡುವ ಗುರಿ ಇದೆ ಎಂದರು.
2011- 2012 ರಲ್ಲಿ ಬೃಹತ್ ಕೈಗಾರಿಕಾ ಆಂದೋಲನ ನಡೆಸಿ ವಿವಿಧ ದೇಶಗಳಿಂದ ಉದ್ಯಮಿಗಳಿಗೆ ಆಹ್ವಾನ ನೀಡಿದ್ದೇವು. ಅದರಿಂದ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಿದೆ. ಈ ಬಾರಿಯೂ 'ಉದ್ಯೋಗ ಸೃಷ್ಟಿಗೆ' ಮೊದಲ ಆದ್ಯತೆ ಎಂದು ಹೇಳಿದರು.
ವಿವಿಧ ಹುದ್ದೆಗಳಿಗೆ ಅರ್ಜಿ ಕರೆದ UPSC
ಇಲ್ಲಿನ ಪುಡ್ ಪಾರ್ಕ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಅಧಿಕಾರಿಗಳಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಸುಮಾರು 105 ಎಕರೆ ಪ್ರದೇಶದಲ್ಲಿ ಪುಡ್ ಪಾರ್ಕ್ ಕೈಗಾರಿಕಾ ವಿಸ್ತರಣೆ ಹೊಂದಿದೆ 1000 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. ದೇಶ- ವಿದೇಶಗಳಿಂದ ಅನೇಕ ಕಂಪನಿಗಳು ಬರಲಿವೆ. ಮುಂದಿನ ದಿನಗಳಲ್ಲಿ ಇದರಿಂದ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಲಾಭವಾಗಲಿದೆ ಎಂದರು.
ಪುಡ್ ಪಾರ್ಕ್ ನಲ್ಲಿ ಸ್ಥಳೀಯರಿಗೆ ನೀಡಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ನಿರಾಣಿ ಅವರು, ಡಾ.ಸರೋಜಿನಿ ಮಹಿಷಿ ಅವರ ವರದಿಯ ಪ್ರಕಾರ ಸ್ಥಳೀಯರಿಗೆ ಶೇ. 80 ರಷ್ಟು ಉದ್ಯೋಗಗಳನ್ನು ನೀಡಬೇಕು. ಒಂದು ವೇಳೆ ಯಾವುದಾದರೂ ಲೋಪದೋಷಗಳು ಉಂಟಾಗಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ಸ್ಥಳೀಯರಿಗೆ ಹೆಚ್ಚಿನ ನೀಡಬೇಕು ಎಂಬ ನಿಲುವಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ವಿಶೇಷ ಜಿಲ್ಲಾಧಿಕಾರಿ ಡಾ.ಶಿವರಾಂ ಭಂಡಾರಿ, ಕೆ ಐ.ಡಿ.ಬಿ.ಯ ಸಿಇಒ ಎನ್ ಶಿವಶಂಕರ್, ಮುಖ್ಯ ಅಭಿವೃದ್ಧಿ ಅಧಿಕಾರಿ ಬಿ.ಕೆ.ಪವಿತ್ರ, ಹಿರಿಯ ಅಧಿಕಾರಿ ತಪ್ಸಮಾ ಜಹೇರಾ ಇದ್ದರು.