ಸುಸ್ತಿದಾರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೆಬಿ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ. ಎಷ್ಟೇ ಪ್ರಯತ್ನ ಮಾಡಿದರೂ ಹಣ ವಸೂಲಿ ಮಾಡಲಾಗದ ಅಥವಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗದ 515 ಸುಸ್ತಿದಾರರ ಪಟ್ಟಿಯನ್ನು ಸೆಬಿ ಬಿಡುಗಡೆ ಮಾಡಿದೆ. ಇನ್ನು ಈ ಪಟ್ಟಿಯಲ್ಲಿರುವ ಸುಸ್ತಿದಾರರ ಆಸ್ತಿ ಬಗ್ಗೆ ನಿಜವಾದ ಮಾಹಿತಿ ನೀಡಿದವರಿಗೆ 20ಲಕ್ಷ ರೂ. ಬಹುಮಾನವನ್ನು ನೀಡುವುದಾಗಿ ಸೆಬಿ ಘೋಷಿಸಿದೆ.

ನವದೆಹಲಿ (ಮಾ.10): ಸುಸ್ತಿದಾರರ (ಸಾಲ ತೀರಿಸದವರು) ಬಗ್ಗೆ ಸಮರ್ಪಕ ಮಾಹಿತಿ ನೀಡುವ ಸಾರ್ವಜನಿಕರಿಗೆ ಭಾರತೀಯ ಮಾರುಕಟ್ಟೆಗಳ ನಿಯಂತ್ರಕ ಸೆಬಿ 20ಲಕ್ಷ ರೂ. ಬಹುಮಾನ ನೀಡುವುದಾಗಿ ಗುರುವಾರ ಘೋಷಿಸಿದೆ. ಸೆಕ್ಯುರಿಟೀಸ್ ಆಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಈ ಹೊಸ ಯೋಜನೆ ಅನ್ವಯ ಸುಸ್ತಿದಾರರ ಸಾಲದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮಾಹಿತಿದಾರರಿಗೆ 20ಲಕ್ಷ ರೂ. ತನಕ ಬಹುಮಾನ ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಸೆಬಿ 515 ಸುಸ್ತಿದಾರರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ಸುಸ್ತಿದಾರರ ಬಗ್ಗೆ ಸಾರ್ವಜನಿಕರು ತಮಗೆ ತಿಳಿದಿದ್ದರೆ ಸೆಬಿಗೆ ಮಾಹಿತಿ ನೀಡಬಹುದು. ಬಹುಮಾನದ ಮೊತ್ತವನ್ನು ಹೂಡಿಕೆದಾರರ ರಕ್ಷಣೆ ಮತ್ತು ಶಿಕ್ಷಣ ನಿಧಿಯಿಂದ ಪಾವತಿಸಲಾಗುವುದು ಎಂದು ಸೆಬಿ ತಿಳಿಸಿದೆ. ಇನ್ನು ಮಾಹಿತಿದಾರರಿಗೆ ಸೆಬಿ ಎರಡು ಹಂತಗಳಲ್ಲಿ ಬಹುಮಾನದ ಹಣವನ್ನು ಹಂಚಲಿದೆ. ಮಾಹಿತಿ ಹಂಚಿಕೊಂಡಾಗ ಮಾಹಿತಿದಾರರಿಗೆ ಮಧ್ಯಂತರ ಬಹುಮಾನದ ಮೊತ್ತವನ್ನು ನೀಡಲಾಗುವುದು. ಈ ಮೊತ್ತವು ಯಾವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬುದರ ಆಧಾರದಲ್ಲಿ ಸುಸ್ತಿದಾರರ ಆಸ್ತಿ ಮೌಲ್ಯದ ಶೇ.2.5 ಅಥವಾ 5ಲಕ್ಷ ರೂ. ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟಾಗಿರಲಿದೆ. ಇನ್ನು ಅಂತಿಮ ಬಹುಮಾನದ ಮೊತ್ತ ಸುಸ್ತಿದಾರರ ಆಸ್ತಿಯ ಶೇ.10 ಅಥವಾ 20ಲಕ್ಷ ರೂ. ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟಿರಲಿದೆ. 

ಒಬ್ಬ ಸುಸ್ತಿದಾರನ (Defaulter) ಆಸ್ತಿಗಳ ಬಗ್ಗೆ ನಂಬಿಕಾರ್ಹ ಮಾಹಿತಿ ನೀಡುವ ವ್ಯಕ್ತಿಗೆ ಹಣವನ್ನು ಹೇಗೆ ನೀಡಲಾಗುವುದು ಎಂಬುದು ಸೇರಿದಂತೆ ಹೊಸ ಬಹುಮಾನ ವ್ಯವಸ್ಥೆಗೆ ಸಂಬಂಧಿಸಿ ಸೆಬಿ (SEBI) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾಹಿತಿ ನೀಡಿದವರ ಗುರುತು, ಅವರು ನೀಡಿದ ಆಸ್ತಿಯ ಮಾಹಿತಿ ಹಾಗೂ ಅವರಿಗೆ ಸಿಕ್ಕ ಬಹುಮಾನಕ್ಕೆ ಸಂಬಂಧಿಸಿ ಗೌಪ್ಯತೆ ಕಾಪಾಡಲಾಗುವುದು ಎಂದು ಸೆಬಿ ತಿಳಿಸಿದೆ. ಈ ಹೊಸ ಮಾರ್ಗಸೂಚಿಗಳು ಮಾ.8ರಿಂದ ಜಾರಿಗೆ ಬಂದಿವೆ. ಈ ಮಾರ್ಗಸೂಚಿಯಲ್ಲಿ (Guidelines) ಸುಸ್ತಿದಾರರ ಮಾಹಿತಿ ನೀಡಿದ ಬಳಿಕ ಮೊತ್ತವನ್ನು ಹೇಗೆ ಜಮೆ ಮಾಡಲಾಗುತ್ತದೆ ಎಂಬ ಮಾಹಿತಿ ಕೂಡ ನೀಡಲಾಗಿದೆ.

ಹತ್ತೇ ದಿನದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13 ಸ್ಥಾನ ಜಿಗಿದ ಗೌತಮ್‌ ಅದಾನಿ

ಮುಟ್ಟುಗೋಲು ಹಾಕಿಕೊಳ್ಳಲು ಕಷ್ಟವಾದ ವರ್ಗದಡಿಯಲ್ಲಿರುವ ಸುಸ್ತಿದಾರನ ಆಸ್ತಿಗೆ ಸಂಬಂಧಿಸಿ ನಿಜವಾದ ಮಾಹಿತಿ ನೀಡಿದ ವ್ಯಕ್ತಿಯನ್ನು ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುತ್ತದೆ. ಮಾಹಿತಿದಾರರ ಬಹುಮಾನ ಸಮಿತಿಯನ್ನು ಸೆಬಿ (SEBI) ರಚಿಸಲಿದೆ. ಈ ಸಮಿತಿಯು ಮುಟ್ಟಗೋಲು ಹಾಗೂ ಮರುಪಾವತಿ ಇಲಾಖೆಯ ಮುಖ್ಯ ವ್ಯವಸ್ಥಾಪಕರು, ಸಂಬಂಧಪಟ್ಟ ಮುಟ್ಟುಗೋಲು ಅಧಿಕಾರಿ, ಮುಖ್ಯ ವ್ಯವಸ್ಥಾಪಕರು ನಾಮನಿರ್ದೇಶನ ಮಾಡಿದ ಇನ್ನೊಬ್ಬ ಮುಟ್ಟುಗೋಲು ಅಧಿಕಾರಿ ಹಾಗೂ ಡೆಪ್ಯುಟಿ ಜನರಲ್ ಮ್ಯಾನೇಜರ್ ಅಥವಾ ಅದಕ್ಕಿಂತ ಉನ್ನತ ಹುದ್ದೆಯ ಅಧಿಕಾರಿಯನ್ನು ಒಳಗೊಂಡಿದೆ. ಈ ಸಮಿತಿಯು ಬಹುಮಾನ ಪಡೆಯಲು ಮಾಹಿತಿದಾರನ ಅರ್ಹತೆ ಬಗ್ಗೆ ಹಾಗೂ ಎಷ್ಟು ಮೊತ್ತದ ಬಹುಮಾನ (Reward) ನೀಡಬೇಕು ಎಂಬ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಶಿಫಾರಸ್ಸು (Recommendation) ಮಾಡಲಿದೆ. 

'1 ಬಿಲಿಯನ್‌ ಡಾಲರ್‌ ಸಾಲವೆಲ್ಲಾ ನಮಗೆ ಕಡ್ಲೇಬೀಜ ಇದ್ದಂತೆ..' ವೇದಾಂತ ಮುಖ್ಯಸ್ಥ ಅನಿಲ್‌ ಅಗರ್ವಾಲ್‌ ಹೇಳಿಕೆ!

ಸೆಬಿಯ (SEBI) 2021-22ನೇ ಸಾಲಿನ ವಾರ್ಷಿಕ ವರದಿ ಪ್ರಕಾರ 2022ರ ಮಾರ್ಚ್ ಅಂತ್ಯದ ತನಕ 'ವಶಪಡಿಸಿಕೊಳ್ಳಲು ಅಥವಾ ಮುಟ್ಟುಗೋಲು ಹಾಕಿಕೊಳ್ಳಲು ಕಷ್ಟವಾದ' (DTR) ವರ್ಗದಲ್ಲಿ 67,228 ಕೋಟಿ ರೂ. ಬಾಕಿಯಿದೆ. ಎಲ್ಲ ವಿಧಾನಗಳನ್ನು ಬಳಸಿದರೂ ಹಣ ವಸೂಲಿ ಮಾಡಲು ಸಾಧ್ಯವಾಗದ ಸುಸ್ತಿದಾರರನ್ನು (Defaulter) ಮುಟ್ಟುಗೋಲು ಹಾಕಿಕೊಳ್ಳಲು ಕಷ್ಟವಾದ' (DTR) ವರ್ಗದಲ್ಲಿ ಸೇರಿಸಲಾಗುತ್ತದೆ. ಇಂಥ ಸುಸ್ತಿದಾರರಿಂದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೆಬಿ (SEBI) ಅನೇಕ ಪ್ರಯತ್ನಗಳನ್ನು ಈ ಹಿಂದೆ ಮಾಡಿರುತ್ತದೆ. ಆದರೆ, ಯಾವುದು ಕೂಡ ಫಲಪ್ರದವಾಗಿರೋದಿಲ್ಲ.