ನವದೆಹಲಿ:(ಆ.18): ವಿಶ್ವಸಂಸ್ಥೆ ಜಿಡಿಪಿ ಅಳೆಯಲು ಹೊಸ ಮಾನದಂಡ ಸೂಚಿಸಿದೆ. ಅದರಂತೆ ಕೇಂದ್ರ ಸರ್ಕಾರ ಹೊಸ ಮಾನದಂಡಗಳೊಂದಿಗೆ ದೇಶದ ಪರಿಷ್ಕೃತ ಜಿಡಿಪಿ ದರ ಪಟ್ಟಿಯನ್ನು ಬಿಡುಗಡೆ ಮಡಲಾಗಿದೆ. 

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಯ ಸರ್ಕಾರದ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಉತ್ತಮವಾಗಿತ್ತು ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯುಪಿ ಅವಧಿಯಲ್ಲಿ ಭಾರತ ಶೇ. 10.08 ಆರ್ಥಿಕ ಪ್ರಗತಿ ಸಾಧಿಸಿತ್ತು ಎಂದು ವರದಿ ತಿಳಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದು ಎರಡನೇ ಅತ್ಯುತ್ತಮ ಪ್ರಗತಿ ಸಾಧನೆ ಎಂದೂ ವರದಿ ತಿಳಿಸಿದೆ.

ಇನ್ನು ಸರಾಸರಿ ಲೆಕ್ಕಾಚಾರದಲ್ಲೂ ಈಗಿನ ಎನ್​ಡಿಎ ಸರ್ಕಾರಕ್ಕಿಂತ ಯುಪಿಎ ಸಾಧನೆ ಉತ್ತಮವೆಂಬ ವಿಚಾರ ಬೆಳಕಿಗೆ ಬಂದಿದೆ. ಮೋದಿ ನೇತೃತ್ವದಲ್ಲಿ 4 ವರ್ಷದ ಆಡಳಿತದಲ್ಲಿ ಸರಾಸರಿ ಶೇ. 7.3ರಷ್ಟು ಆರ್ಥಿಕ ಅಭಿವೃದ್ಧಿಯಾದರೆ, ಯುಪಿಎ ಸರಕಾರದ ಎರಡು ಅವಧಿಯಲ್ಲಿ ಶೇ. 8.1 ಸರಾಸರಿ ಅಭಿವೃದ್ಧಿಯಾಗಿದೆ.

1988-89ರಲ್ಲಿ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ ಭಾರತ 10.20% ಜಿಡಿಪಿ ಬೆಳವಣಿಗೆ ಸಾಧಿಸಿದ್ದೇ ಇದೂವರೆಗಿನ ಗರಿಷ್ಠ ಮಟ್ಟವಾಗಿದೆ. ಅದಾದ ಬಳಿಕ ಯುಪಿಎ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ. 10.08ರಷ್ಟು ದರದಲ್ಲಿ ಬೆಳವಣಿಗೆ ಸಾಧಿಸಿತ್ತು.

ಈ ಮುಂಚಿನ ಜಿಡಿಪಿ ಲೆಕ್ಕಾಚಾರದಲ್ಲಿ ಹಲವು ಲೋಪದೋಷಗಳಿದ್ದವು. ಬಹುತೇಕ ಅಸಂಘಟಿತ ವಲಯಗಳ ಒಟ್ಟು ಉತ್ಪನ್ನಗಳು ಈ ಲೆಕ್ಕಾಚಾರದಲ್ಲಿ ಕೈಬಿಟ್ಟುಹೋಗುತ್ತಿದ್ದವು. ಕೃಷಿ ಮತ್ತು ಕಾರ್ಪೊರೇಟ್ ವಲಯದ ಅನೇಕ ವ್ಯವಹಾರಗಳನ್ನು ಹಿಂದಿನ ಪದ್ಧತಿಯಲ್ಲಿ ನಿಖರವಾಗಿ ಅಂದಾಜಿಸಲು ಸಾಧ್ಯವಾಗುತ್ತಿರಲಿಲ್ಲ.

ಈ ಕಾರಣಕ್ಕೆ ಜಿಡಿಪಿ ಲೆಕ್ಕಾಚಾರಕ್ಕೆ ವಿಶ್ವ ಸಂಸ್ಥೆ 2008ರಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳನ್ನ ರಚಿಸಿತ್ತು. ಪ್ರತೀ ಐದು ವರ್ಷಗಳಿಗೊಮ್ಮೆ ಮೂಲ ವರ್ಷ(ಬೇಸ್ ಇಯರ್)ವನ್ನು ಬದಲಿಸಬೇಕೆಂಬುದು ಈ ಸೂತ್ರಗಳಲ್ಲೊಂದಾಗಿದೆ.