ನವದೆಹಲಿ(ಸೆ.01): ಕೊರೋನಾ ವೈರಸ್‌ ತಡೆಯಲು ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದಾಗಿ ನಿರೀಕ್ಷೆಯಂತೆ ದೇಶದ ಆರ್ಥಿಕತೆಯ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಿದ್ದು, 40ಕ್ಕೂ ಹೆಚ್ಚು ವರ್ಷಗಳಲ್ಲೇ ಮೊದಲ ಬಾರಿ ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.23.9ರಷ್ಟುಮಹಾಕುಸಿತ ಕಂಡಿದೆ. ಇದು 2020​​​​-21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್‌-ಜೂನ್‌ ತಿಂಗಳ ಅವಧಿಯಲ್ಲಿ ಉಂಟಾದ ಕುಸಿತವಾಗಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ದೇಶದ ಜಿಡಿಪಿ ಶೇ.5.2ರಷ್ಟುಬೆಳವಣಿಗೆ ಕಂಡಿತ್ತು. ಇದೇ ವರ್ಷದ ಜನವರಿ- ಮಾಚ್‌ರ್‍ ಅವಧಿಯಲ್ಲಿ ಶೇ.3.1ರಷ್ಟಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯ ಗಾತ್ರ ಶೇ.23.9ರಷ್ಟುಇಳಿಕೆಯಾಗಿದೆ. 2019-20ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯ ಗಾತ್ರ 35.25 ಲಕ್ಷ ಕೋಟಿ ರು. ಇತ್ತು. 2020-21ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಅದು 26.90 ಲಕ್ಷ ಕೋಟಿ ರು.ಗೆ ಕುಸಿತವಾಗಿದೆ. ಹೀಗಾಗಿ ಈ ತ್ರೈಮಾಸಿಕ ಅವಧಿಯಲ್ಲಿ ಶೇ.23.9ರಷ್ಟುಇಳಿಕೆ ಕಂಡಿದೆ.

ದೇಶದಲ್ಲಿ ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆ ಕಂಡ ಏಕೈಕ ಕ್ಷೇತ್ರವೆಂದರೆ ಕೃಷಿ ಕ್ಷೇತ್ರವಾಗಿದ್ದು, ಅದು ಶೇ.3.4ರಷ್ಟುಬೆಳವಣಿಗೆ ಕಂಡಿದೆ. ಕಳೆದ ವರ್ಷದ ಈ ಅವಧಿಯಲ್ಲಿ ಕೃಷಿ ಕ್ಷೇತ್ರ ಶೇ.3ರಷ್ಟುಬೆಳವಣಿಗೆ ಸಾಧಿಸಿತ್ತು. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅದು ಶೇ.0.4ರಷ್ಟುಹೆಚ್ಚು ಬೆಳವಣಿಗೆ ಕಂಡಿದೆ.

ಲಾಕ್‌ಡೌನ್‌ನಿಂದಾಗಿ ಭಾರತದ ಆರ್ಥಿಕಾಭಿವೃದ್ಧಿ ದರ ಭಾರಿ ಕುಸಿತ ಕಾಣಲಿದೆ ಎಂದು ಈ ಹಿಂದೆಯೇ ಹಲವಾರು ಅಂತಾರಾಷ್ಟ್ರೀಯ ರೇಟಿಂಗ್‌ ಏಜೆನ್ಸಿಗಳು ಭವಿಷ್ಯ ನುಡಿದಿದ್ದವು. ಅದರಂತೆ, ಕೇಂದ್ರ ಸರ್ಕಾರದ ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಸೋಮವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳಲ್ಲಿ ಆ ಕುಸಿತದ ಕುರಿತು ಎಲ್ಲಾ ವಿವರಗಳನ್ನು ನೀಡಲಾಗಿದೆ.

ಅಚ್ಚರಿಯ ಸಂಗತಿಯೆಂದರೆ, ಕೊರೋನಾ ವೈರಸ್‌ನ ಜನಕ ರಾಷ್ಟ್ರವಾದ ಚೀನಾದ ಆರ್ಥಿಕತೆಗೆ ಈ ಅವಧಿಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಚೀನಾದ ಜಿಡಿಪಿ ಈ ಅವಧಿಯಲ್ಲಿ ಶೇ.3.2ರಷ್ಟುಬೆಳವಣಿಗೆ ದಾಖಲಿಸಿದೆ. ಇದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಶೇ.6.8ರಷ್ಟುಕುಸಿತ ಕಂಡಿತ್ತು. ಆದರೆ, ಭಾರತದಲ್ಲಿ ಕೊರೋನಾ ಲಾಕ್‌ಡೌನ್‌ ಜಾರಿಯಲ್ಲಿದ್ದ ಅವಧಿಯಲ್ಲಿ ಚೀನಾದ ಆರ್ಥಿಕತೆ ಸಾಕಷ್ಟುಚೇತರಿಸಿಕೊಂಡಿದೆ.

ಈ ವರ್ಷ ಜಿಡಿಪಿ ಒಟ್ಟಾರೆ ಶೇ.3-4ರಷ್ಟುಕುಸಿತ?

ಈಗ ಬಿಡುಗಡೆಯಾಗಿರುವುದು ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಅವಧಿ. ಈ ಅವಧಿಯಲ್ಲಿ ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿತ್ತು. ಹೀಗಾಗಿ ಆರ್ಥಿಕ ಚಟುವಟಿಕೆಗಳು ನಿಂತುಹೋಗಿದ್ದವು. ಆದರೆ, ಈ ತ್ರೈಮಾಸಿಕ ಮುಗಿದ ನಂತರ, ಅಂದರೆ ಜುಲೈನಿಂದ ಆರ್ಥಿಕ ಚಟುವಟಿಕೆಗಳು ಆರಂಭಗೊಂಡಿವೆ. ಹೀಗಾಗಿ 2020-21ನೇ ಸಾಲಿನ ಇಡೀ ವರ್ಷದ ಜಿಡಿಪಿ ಬೆಳವಣಿಗೆಯ ದರ ಶೇ.29-30ರಷ್ಟುಕುಸಿಯುವುದಿಲ್ಲ. ಬದಲಿಗೆ ಶೇ.3-4ರಷ್ಟುಕುಸಿತ ಕಾಣುವ ಸಾಧ್ಯತೆಯಿದೆ. ಭಾರತದ ಜಿಡಿಪಿ ಈ ವರ್ಷ ಶೇ.3.2ರಷ್ಟುಕುಸಿಯಲಿದೆ ಎಂದು ವಿಶ್ವಬ್ಯಾಂಕ್‌, ಶೇ.4.5ರಷ್ಟುಕುಸಿಯಲಿದೆ ಎಂದು ಐಎಂಎಫ್‌, ಶೇ.4ರಷ್ಟುಕುಸಿಯಲಿದೆ ಎಂದು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌, ಶೇ.5.2ರಷ್ಟುಕುಸಿಯಲಿದೆ ಎಂದು ನೊಮುರಾ ಹಾಗೂ ಶೇ.9.5ರಷ್ಟು ಕುಸಿಯಲಿದೆ ಎಂದು ಇಕ್ರಾ ಭವಿಷ್ಯ ನುಡಿದಿವೆ.

ಯಾವ ಕ್ಷೇತ್ರದಲ್ಲಿ ಎಷ್ಟು ಕುಸಿತ?

ಕ್ಷೇತ್ರ ಕುಸಿತ ಕಳೆದ ವರ್ಷದ ಈ ಅವಧಿಯಲ್ಲಿನ ಬೆಳವಣಿಗೆ

ಉತ್ಪಾದನಾ ಕ್ಷೇತ್ರ ಶೇ.39.3 ಶೇ.3

ನಿರ್ಮಾಣ ಕ್ಷೇತ್ರ ಶೇ.50.3 ಶೇ.5.2

ಗಣಿಗಾರಿಕೆ ಶೇ.23.3 ಶೇ.4.7

ವಿದ್ಯುತ್‌, ಅನಿಲ, ನೀರು ಸರಬರಾಜು ಶೇ.7 ಶೇ.8.8

ವ್ಯಾಪಾರ, ಹೋಟೆಲ್‌, ಸಾರಿಗೆ, ಸಂಪರ್ಕ ಶೇ.47 ಶೇ.3.5

ಹಣಕಾಸು, ರಿಯಲ್‌ ಎಸ್ಟೇಟ್‌, ವೃತ್ತಿಪರ ಸೇವೆ ಶೇ.5.3 ಶೇ.6

ಸಾರ್ವಜನಿಕ ಆಡಳಿತ, ರಕ್ಷಣೆ ಶೇ.10.3 ಶೇ.7.7