ಹಿಂಡೆನ್‌ಬರ್ಗ್ ರಿಪೋರ್ಟ್‌ನಿಂದ ಆದ ನಷ್ಟ ಸರಿದೂಗಿಸಲು ಅದಾನಿ ಗ್ರೂಪ್ ಸಖತ್ ಪ್ಲ್ಯಾನ್!
ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಪೋರ್ಟ್‌ನಿಂದಾಗಿ ಭಾರತದ ಅದಾನಿ ಗ್ರೂಪ್ ನಿರೀಕ್ಷೆ ಮಾಡಲಾಗದಷ್ಟು ನಷ್ಟ ಕಂಡಿದೆ. ಈಗ ಈ ನಷ್ಟಗಳನ್ನು ಸರಿದೂಗಿಸಿಕೊಳ್ಳಲು ಅದಾನಿ ಗ್ರೂಪ್ ಸಖತ್ ಪ್ಲ್ಯಾನ್ ಮಾಡಿದೆ.
ನವದೆಹಲಿ (ಮಾ.7): ಅಮೆರಿಕದ ಮೂಲದ ಶಾರ್ಟ್ ಸೆಲ್ಲರ್ ಹಾಗೂ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಮಾಡಿದ ವರದಿಯಿಂದ ಅದಾನಿ ಗ್ರೂಪ್‌ನ ಷೇರುಗಳು ಮಾರುಕಟ್ಟೆಯಲ್ಲಿ ದಯನೀಯ ಸ್ಥಿತಿಗೆ ಬಂದು ತಲುಪಿವೆ. ಹೂಡಿಕೆದಾರರ ಹಾಗೂ ಜನರ ವಿಶ್ವಾಸವನ್ನು ಮತ್ತೊಮ್ಮೆ ಗಳಿಸುವ ದೃಷ್ಟಿಯಿಂದ ಅದಾನಿ ಗ್ರೂಪ್, ದುಬೈ, ಲಂಡನ್ ಸೇರಿದಂತೆ ಅಮೆರಿಕದ ಕೆಲವು ಪ್ರಮುಖ ನಗರಗಳಲ್ಲಿ ಮಂಗಳವಾರದಿಂದ ರೋಡ್‌ಶೋ ಆರಂಭಿಸಿದೆ. ಮಾರ್ಚ್ 7 ರಿಂದ 15ರವರೆಗೆ ಜಗತ್ತಿನ ಪ್ರಮುಖ ನಗರಗಳಲ್ಲಿ ಅದಾನಿ ಗ್ರೂಪ್‌ನಿಂದ ರೋಡ್ ಶೋ ನಡೆಯಲಿದೆ. ಈ ರೋಡ್ ಶೋನಲ್ಲಿ ಕಂಪನಿಯ ಮುಖ್ಯ ಆರ್ಥಿಕ ಅಧಿಕಾರಿ ಜುಗ್ಶೆಂದರ್ ಸಿಂಗ್ ಭಾಗವಹಿಸಲಿದ್ದಾರೆ. ಫೆಬ್ರವರಿ ಕೊನೆಯಲ್ಲಿ ಸಿಂಗಾಪುರ ಹಾಗೂ ಹಾಂಕಾಂಗ್‌ನಲ್ಲಿ ಅದಾನಿ ಗ್ರೂಪ್‌ನಿಂದ ರೋಡ್ ಶೋ ನಡೆದಿದೆ. ಈ ತಿಂಗಳ ಆರಂಭದ ಕೆಲವು ದಿನಗಳಲ್ಲೂ ದಕ್ಷಿಣ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಕಂಪನಿಯ ರೋಡ್‌ಶೋ ನಡೆದಿದೆ ಎಂದು ವರದಿಯಾಗಿದೆ. ಅಮೆರಿಕದ ಶಾರ್ಟ್ ಸೆಲ್ಲರ್ ವರದಿಯಿಂದ ಕಂಪನಿಯ ವ್ಯವಹಾರಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಕೃತಕವಾಗಿ ಷೇರುಗಳ ಮೌಲ್ಯ ಏರಿಕೆ, ಅವ್ಯವಹಾರ ಹಾಗೂ ಆರ್ಥಿಕ ಲೋಪದೋಷಗಳನ್ನು ಮಾಡಿದ ಆರೋಪಗಳನ್ನು ಹಿಂಡೆನ್‌ಬರ್ಗ್, ಅದಾನಿ ಗ್ರೂಪ್ ಮೇಲೆ ಹೊರಿಸಿತ್ತು. ಆರಂಭದಲ್ಲಿ ಈ ಬಗ್ಗೆ ಕಂಪನಿ ಹೆಚ್ಚಿನ ಗಮನ ನೀಡಿರಲಿಲ್ಲ. ಆದರೆ, ಕಂಪನಿಯ ಷೇರುಗಳು ದಿನದಿಂದ ದಿನಕ್ಕೆ ಇಳಿಕೆಯಾದಾಗ ಹಾಗೂ ಸುಪ್ರೀಂ ಕೋರ್ಟ್ ಕೂಡ ತನಿಖೆಗೆ ಅದೇಶ ನೀಡಿದಾಗ, ಅದಾನಿ ಗ್ರೂಪ್ ಹೂಡಿಕೆದಾರರ ವಿಶ್ವಾಸ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ.
ಹಿಂಡೆನ್‌ಬರ್ಗ್ ವರದಿಯ ಬಳಿಕ ಅದಾನಿ ಗ್ರೂಪ್‌ನ ಮೇಲೆ ಹೂಡಿಕೆ ಮಾಡಿದ್ದ ಕೋಟ್ಯಂತರ ರೂಪಾಯಿ ಹಣ ಕರಗಿ ಹೋಗಿತ್ತು. ಹಾಗಿದ್ದರೂ ಇತ್ತೀಚೆಗೆ ದೊಡ್ಡ ಹೂಡಿಕೆ ಫರ್ಮ್‌ನಿಂದ ಅದಾನಿ ಗ್ರೂಪ್‌ನ ಮೇಲೆ ದಾಖಲೆಯ ಪ್ರಮಾಣದ ಹೂಡಿಕೆಯಾದ ಬಳಿಕ ಈ ರೋಡ್‌ಶೋ ನಡೆದಿದೆ. ಅಮೆರಿಕ ಮೂಲದ ಬಾಟಿಕ್ ಇನ್ವೆಸ್ಟ್‌ಮೆಂಟ್ ಫರ್ಮ್ ಜಿಕ್ಯುಜಿ ಪಾರ್ಟ್‌ನರ್ಸ್ ಅಂದಾಜು 15,446 ಕೋಟಿ ರೂಪಾಯಿ ಮೌಲ್ಯದ ಅದಾನಿ ಗ್ರೂಪ್‌ನ ನಾಲ್ಕು ಕಂಪನಿಗಳ ಷೇರುಗಳನ್ನು ಖರೀದಿ ಮಾಡಿದೆ. ಇದರಲ್ಲಿ ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ, ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಹಾಗೂ ಅದಾನಿ ಟ್ರಾನ್ಸ್‌ಮಿಷನ್ ಕಂಪನಿಗಳು ಸೇರಿವೆ. ಈ ಹೂಡಿಕೆಯ ಬಳಿಕ ಅದಾನಿ ಗ್ರೂಪ್‌ನ 10 ಷೇರುಗಳ ಪೈಕಿ 8 ಷೇರುಗಳ ಬೆಲೆಯಲ್ಲಿ ಮಂಗಳವಾರ ಏರಿಕೆಯಾಗಿದೆ. ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್ ಮಾತ್ರ ಏರುಗತಿ ಹಿಡಿದಿಲ್ಲ.
GQG ಪಾಲುದಾರರ ಅಧ್ಯಕ್ಷ ರಾಜೀವ್ ಜೈನ್ ಸಂದರ್ಶನವೊಂದರಲ್ಲಿ ಖರೀದಿಯ ಹಿಂದಿನ ಯೋಜನೆಯನ್ನು ವಿವರಿಸಿದ್ದಾರೆ. ಅವರು ದಿ ಎಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಭಾರತಕ್ಕೆ ಇದೀಗ ತನ್ನ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸುವವರ ಅಗತ್ಯವಿದೆ ಮತ್ತು ಅದಾನಿ ಗ್ರೂಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ. ಈ ಹಿಂದೆ ಅದಾನಿ ಗ್ರೂಪ್‌ನೊಂದಿಗೆ ಕೆಲಸ ಮಾಡಿದ ಜನರೊಂದಿಗೆ ಅವರ ತಂಡವು ಸಾಕಷ್ಟು ಪರಿಶ್ರಮ ವಹಿಸಿ ಕೆಲಸ ಮಾಡಿದೆ ಅವರ ವರದಿಯ ಬಳಿಕವೇ ಅದಾನಿ ಗ್ರೂಪ್‌ನ ಮೇಲೆ ಹೂಡಿಕೆ ಮಾಡುವ ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.
ಅದಾನಿ ವಿರುದ್ಧದ ಹಿಂಡನ್‌ಬರ್ಗ್ ವರದಿಗೆ ಆಸೀಸ್ ಮಾಜಿ ಪ್ರಧಾನಿ ಕಿಡಿಕಿಡಿ
ಈಗಾಗಲೇ ಲಿಸ್ಟೆಡ್ ಆಗಿರುವ ನಾಲ್ಕು ಕಂಪನಿಗಳಲ್ಲಿ ಶೇ. 2.5 ನಿಂದ 4.1 ರಷ್ಟು ಪಾಲನ್ನು ಮಾರಾಟ ಮಾಡಿದರೆ, ಅದಾನಿ ಗ್ರೂಪ್‌ನ ಸಾಲಗಳ ಮರುಪಾವತಿಯ ಕಳವಣ ದೂರವಾಗುತ್ತದೆ. ಈ ಕಂಪನಿಗಳ ಮೇಲೆ ಬಹುಮತದ ನಿಯಂತ್ರಣವನ್ನು ಉಳಿಸಿಕೊಂಡು ಮತ್ತೊಂದು 8 ಬಿಲಿಯನ್ ಡಾಲರ್‌ಅನ್ನು ಸಮರ್ಥವಾಗಿ ಸಂಗ್ರಹಣೆ ಮಾಡಬಹುದು ಎಂದು ಕೋಟಕ್ ಇನ್ಸ್‌ಟಿಟ್ಯೂಶನಲ್ ಇಕ್ವೀಟೀಸ್ ತಿಳಿಸಿದೆ.
ಮರಳಿ ಹಳಿಗೆ ಅದಾನಿ ಗ್ರೂಪ್: 2 ಗಂಟೆಗಳಲ್ಲಿ 5 ಬಿಲಿಯನ್ ಡಾಲರ್ ಜಿಗಿದ ಗೌತಮ್ ಅದಾನಿ ಆಸ್ತಿ
ಇದರ ನಡುವೆ ಸಂಸ್ಥೆಯು ಫೆಬ್ರವರಿ 27 ರಂದು ಸಿಂಗಾಪುರದಲ್ಲಿ ಮತ್ತು ಫೆಬ್ರವರಿ 28 ಮತ್ತು ಮಾರ್ಚ್ 1 ರಂದು ಹಾಂಗ್ ಕಾಂಗ್‌ನಲ್ಲಿ ರೋಡ್‌ಶೋಗಳನ್ನು ಆಯೋಜಿಸಿತ್ತು. ಹೂಡಿಕೆದಾರರ ಕಳವಳವನ್ನು ಶಮನಗೊಳಿಸಲು ಅದಾನಿ ಈ ತಿಂಗಳ ಆರಂಭದಲ್ಲಿ ಬಾಂಡ್‌ಹೋಲ್ಡರ್‌ಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ ಎಂದು ವರದಿಯಾಗಿದೆ. ಬಾರ್ಕ್ಲೇಸ್, ಬಿಎನ್‌ಪಿ ಪರಿಬಾಸ್, ಡಿಬಿಎಸ್ ಬ್ಯಾಂಕ್, ಡಾಯ್ಚ ಬ್ಯಾಂಕ್, ಎಮಿರೇಟ್ಸ್ ಎನ್‌ಬಿಡಿ ಕ್ಯಾಪಿಟಲ್, ಐಎನ್‌ಜಿ, ಐಎಂಐ-ಇಂಟೇಸಾ ಸ್ಯಾನ್ ಪಾವಲೋ, ಎಂಯುಎಫ್‌ಜಿ, ಮುಝೋ, ಎಸ್‌ಎಂಬಿಸಿ ನಿಕ್ಕೋ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಕಂಪನಿಯ ಏಷ್ಯಾ ರೋಡ್‌ಶೋ ಅನ್ನು ಆಯೋಜಿಸಿವೆ.