ಬಿಲ್ ಗೇಟ್ಸ್ ಅನ್ನೇ ಮೀರಿಸಿದ ಉದ್ಯಮಿ ಗೌತಮ್ ಅದಾನಿ ಆಸ್ತಿ ಎಷ್ಟು ಗೊತ್ತಾ..?
- ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದ ಗೌತಮ್ ಅದಾನಿ
- ಬಿಲ್ ಗೇಟ್ಸ್ ಅನ್ನೂ ಮೀರಿಸಿದ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ
- ದೇಶದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲೂ ಅದಾನಿಯೇ ನಂಬರ್ 1
ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಗೌತಮ್ ಅದಾನಿ ಈಗ ವಿಶ್ವದಲ್ಲೇ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿರುವ ಸುದ್ದಿ ನಿಮಗೆ ಗೊತ್ತಿರಬಹುದು. ಆದರೆ, ಪ್ರಖ್ಯಾತ ಉದ್ಯಮಿ ಅದಾನಿಯ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ..? ಗೌತಮ್ ಅದಾನಿಯ ಆಸ್ತಿ ಎಷ್ಟಾಗಿದೆಯೆಂದರೆ ಅವರು ಬಿಲ್ ಗೇಟ್ಸ್ ಆಸ್ತಿಯನ್ನೂ ಮೀರಿಸಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅದಾನಿ ಕುಟುಂಬದ ಆಸ್ತಿ ಎಷ್ಟು ಗೊತ್ತಾ..? ಬರೋಬ್ಬರಿ 115.6 ಬಿಲಿಯನ್ ಡಾಲರ್. ಇನ್ನು, ಐದನೇ ಸ್ಥಾನಕ್ಕಿಳಿದಿರುವ ಬಿಲ್ ಗೇಟ್ಸ್ ಆಸ್ತಿ 104.2 ಬಿಲಿಯನ್ ಡಾಲರ್ ಎಂದು ತಿಳಿದುಬಂದಿದೆ.
ಬರೋಬ್ಬರಿ 20 ಬಿಲಿಯನ್ ಡಾಲರ್ ಆಸ್ತಿ ದಾನ ಮಾಡಿದ ಬಿಲ್ ಗೇಟ್ಸ್
ಬಿಲ್ ಗೇಟ್ಸ್ ತನ್ನ 20 ಬಿಲಿಯನ್ ಡಾಲರ್‌ನಷ್ಟು ಆಸ್ತಿಯನ್ನು ದಾನ ಮಾಡುವುದಾಗಿ ಕಳೆದ ವಾರ ಘೋಷಿಸಿದ್ದಾರೆ. ಈ ಬೆಳವಣಿಗೆಯ ನಂತರ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದ ಅದಾನಿ ಒಂದು ಸ್ಥಾನ ಮೇಲಕ್ಕೇರಿದ್ದಾರೆ. ಬಿಲ್ ಗೇಟ್ಸ್ ಅವರ ಸಹ ಮಾಲೀಕತ್ವದ ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಶನ್‌ಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಈ ಹಣವನ್ನು ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅದಾನಿ ಗ್ರೂಪ್‌ನ ಮುಖ್ಯಸ್ಥರಾಗಿರುವ ಗೌತಮ್ ಅದಾನಿ ಈಗಾಗಲೇ ದೇಶದಲ್ಲಷ್ಟೇ ಅಲ್ಲದೆ, ಏಷ್ಯಾಖಂಡದಲ್ಲೇ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಅದಾನಿ ವಿಶ್ವದ ಐದನೇ ಶ್ರೀಮಂತರೆನಿಸಿಕೊಂಡಿದ್ದರು. ಗಣಿ, ಹಸಿರು ಇಂಧನ ಮುಂತಾದ ಕ್ಷೇತ್ರಗಳ ಮೂಲಕ ಹೆಸರುವಾಸಿಯಾದ ಅದಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಳ್ಳಲು ಕೇವಲ ಮೂವರನ್ನು ಸೋಲಿಸಬೇಕಾಗಿದೆ. ಆ ಕೋಟಿ ಕುಳಗಳು ಯಾರಂತೀರಾ..? ಮುಂದೆ ಓದಿ..
ಬಿಲ್ ಗೇಟ್ಸ್ ಹಿಂದಿಕ್ಕಿದ ಗೌತಮ್ ಅದಾನಿ, ಈಗ ವಿಶ್ವದ ನಾಲ್ಕನೇ ಸಿರಿವಂತ ವ್ಯಕ್ತಿ
ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ 143.9 ಬಿಲಿಯನ್ ಡಾಲರ್ ಆಸ್ತಿಹೊಂದುವ ಮೂಲಕ ಮೂರನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರೆ, 154.9 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿರುವ ಬರ್ನಾಡ್ ಅರ್ನಾಲ್ಟ್ ನಂಬರ್ 3 ಶ್ರೀಮಂತ ಎನಿಸಿಕೊಂಡಿದ್ದಾರೆ. ಇನ್ನು, ಟೆಸ್ಲಾ ಸಿಇಒ ಎಲಾನ್ ಮಸ್ಕ್ 234.4 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದು, ವಿಶ್ವದ ಅತಿ ಸಿರಿವಂತ ವ್ಯಕ್ತಿಯಾಗಿಯೇ ಉಳಿದಿದ್ದಾರೆ.
ದಾನ ಮಾಡುವುದರಲ್ಲೂ ಅದಾನಿ ಎತ್ತಿದ ಕೈ
ದೇಶದಲ್ಲಿ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಗೌತಮ್ ಅದಾನಿ ದಾನ ಮಾಡುವುದರಲ್ಲೂ ಎತ್ತಿದ ಕೈ. ಜೂನ್ ತಿಂಗಳಲ್ಲಿ ತಮ್ಮ 60ನೇ ಹುಟ್ಟುಹಬ್ಬದ ಆಚರಣೆಯ ಭಾಗವಾಗಿ 60 ಸಾವಿರ ಕೋಟಿ ರೂ. ಆಸ್ತಿಯನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದರು.
ಆರೋಗ್ಯ ಕ್ಷೇತ್ರ, ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸೇರಿ ಹಲವು ಕ್ಷೇತ್ರಗಳಿಗೆ ಈ ದೇಣಿಗೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದೂ ಹೇಳಲಾಗಿದೆ. ಭಾರತೀಯ ಕಾರ್ಪೊರೇಟ್ ಇತಿಹಾಸದಲ್ಲೇ ಇದು ಅತ್ಯಂತ ಹೆಚ್ಚು ದೇಣಿಗೆ ಎಂದು ಹೇಳಲಾಗಿದೆ. ಹಾಗೆ, ಈ ದೇಣಿಗೆಯ ಮೂಲಕ ಮಾರ್ಕ್ ಜುಕರ್‌ಬರ್ಗ್ ಹಾಗೂ ವಾರೆನ್ ಬಫೆಟ್ ರಂತಹ ಜಾಗತಿಕ ಬಿಲಿಯನೇರ್‌ಗಳ ಸಾಲಿನಲ್ಲಿ ಗೌತಮ್ ಅದಾನಿ ಹೆಸರು ಪಡೆದುಕೊಂಡಿದ್ದಾರೆ.
ಇನ್ನೊಂದೆಡೆ, ಅದಾನಿಯ ಆಸ್ತಿ 2021 ಕ್ಕಿಂತ ದ್ವಿಗುಣಗೊಂಡಿದೆ ಎಂದೂ ಫೋರ್ಬ್ಸ್ ವರದಿ ಮಾಡಿದೆ. 2008 ರಲ್ಲಿ ಮೊದಲ ಬಾರಿಗೆ ವಿಶ್ವ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅದಾನಿ ಕಾಣಿಸಿಕೊಂಡಿದ್ದರು. ಆ ವೇಳೆ ಅವರ ಆಸ್ತಿಯ ಮೌಲ್ಯ 9.3 ಬಿಲಿಯನ್ ಡಾಲರ್ ಆಗಿತ್ತು.
ಜಿಯೋ, ಏರ್‌ಟೆಲ್‌ನ ಟೆನ್ಷನ್ ಖತಂ, ಇದುವೇ ನೋಡಿ ಅದಾನಿಯ ಅಸಲಿ 5G ಪ್ಲಾನ್!
ಈ ಹಿಂದೆ ಹಲವು ವರ್ಷಗಳ ಕಾಲ ರಿಲಯನ್ಸ್ ಇಂಡಸ್ಟ್ರೀಸ್‌ನ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ದೇಶದಲ್ಲೇ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. ಆದರೆ, ಗೌತಮ್ ಅದಾನಿ ಅವರನ್ನು ಹಿಂದಿಕ್ಕುವ ಮೂಲಕ ದೇಶದಲ್ಲಿ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.