ನವದೆಹಲಿ(ಡಿ.01): ಮಹತ್ವದ ಬೆಳವಣಿಗೆಯೊಂದರಲ್ಲಿ ವಿಮಾನ ಇಂಧನದ (ಎಟಿಎಫ್‌) ಬೆಲೆಗಳನ್ನು ತೈಲ ಕಂಪನಿಗಳು ಶೇ.11ರಷ್ಟು ಇಳಿಕೆ ಮಾಡುವ ಒಮ್ಮತದ ನಿರ್ಧಾರಕ್ಕೆ ಬಂದಿವೆ. 

ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳಿಗೆ ನೆರವಾಗಲು ಎಟಿಎಫ್‌ ಬೆಲೆಯಲ್ಲಿ ಶೇ.11ರಷ್ಟು ಇಳಿಕೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿವೆ. ಜೆಟ್‌ ಇಂಧನದ ಬೆಲೆ ಬ್ರೆಂಟ್‌ ಕ್ರೂಡ್‌ ಆಯಿಲ್ ಬೆಲೆಗೆ ಅನುಗುಣವಾಗಿದ್ದು, ಎಟಿಎಫ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂದು ವಿಮಾನಯಾನ ಸಚಿವಾಲಯ ಒತ್ತಾಯಿಸುತ್ತಲೇ ಇದೆ.

ದೇಶೀಯ ವಿಮಾನಗಳು ಬಳಸುವ ಜೆಟ್‌ ಇಂಧನದ ಬೆಲೆ ಜಗತ್ತಿನಲ್ಲೇ ಅಧಿಕವಾಗಿದ್ದು, ಇದೇ ಕಾರಣಕ್ಕೆ ಭಾರತೀಯ ವೈಮಾನಿಕ ಸಂಸ್ಥೆಗಳ ವಿಮಾನಗಳಿಗೆ ವಿದೇಶಗಳಲ್ಲೂ ಇನ್‌ಪುಟ್ ಟ್ಯಾಕ್ಸ್‌ ಕ್ರೆಡಿಟ್‌ ಸೌಲಭ್ಯ ನೀಡಬೇಕು ಎಂದು ವಿಮಾನಯಾನ ಸಚಿವಾಲಯ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿತ್ತು.

ಅದರಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 1,000 ಲೀಟರ್ ಜೆಟ್ ಇಂಧನ ಬೆಲೆ 68,050 ರೂ. ಹಾಗೂ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 1,000 ಲೀಟರ್ ಜೆಟ್ ಇಂಧನ ಬೆಲೆ 67,979 ರೂ.ಗಳಾಗಿವೆ. ಕಳೆದ ತಿಂಗಳು ಈ ಎರಡೂ ಮಹಾನಗರಗಳಲ್ಲಿ 1,000 ಲೀಟರ್ ಜೆಟ್ ಇಂಧನ ಬೆಲೆ ಕ್ರಮವಾಗಿ 76,380 ರೂ ಹಾಗೂ 76,013.2 ರೂ ಆಗಿತ್ತು.