ಎಟರ್ನಲ್ (ಹಿಂದಿನ ಜೊಮಾಟೋ) ಸಂಸ್ಥಾಪಕ ದೀಪಿಂದರ್ ಗೋಯೆಲ್ ಅವರು ಗ್ರೂಪ್‌ನ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಲಿಂಕಿಟ್‌ನ ಮುಖ್ಯಸ್ಥ ಅಲ್ಬಿಂದರ್ ದಿಂಡ್ಸಾ ಹೊಸ ಸಿಇಒ ಆಗಲಿದ್ದು, ಗೋಯೆಲ್ ಅವರು ಹೆಚ್ಚಿನ ಅಪಾಯದ ಹೊಸ ಆಲೋಚನೆಗಳನ್ನು ಅನ್ವೇಷಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.
ಮುಂಬೈ (ಜ.21): ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಎಟರ್ನಲ್ (ಈ ಹಿಂದೆ ಜೊಮಾಟೋ ಆಗಿತ್ತು) ಸಂಸ್ಥಾಪಕ ಹಾಗೂ ಗ್ರೂಪ್‌ನ ಸಿಇಒ ಸ್ಥಾನಕ್ಕೆ ದೀಪಿಂದರ್ ಗೋಯೆಲ್ ರಾಜೀನಾಮೆ ನೀಡಿದ್ದಾರೆ. ಸಿಇಒ ಸ್ಥಾನದಿಂದ ಕೆಳಗಿಳಿಯುವುದಾಗಿ ದೀಪಿಂದರ್ ಗೋಯೆಲ್ ಘೋಷಣೆ ಮಾಡಿದ್ದು, ಈ ಬಗ್ಗೆ ಷೇರುದಾರರಿಗೂ ಮಾಹಿತಿ ನೀಡಿದ್ದಾರೆ. ಬ್ಲಿಂಕಿಟ್‌ನ ಮುಖ್ಯಸ್ಥರಾಗಿರುವ ಅಲ್ಬಿಂದರ್ ದಿಂಡ್ಸಾ ಗ್ರೂಪ್‌ನ ಹೊಸ ಸಿಇಒ ಆಗಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಇದು ಷೇರುದಾರರ ಒಪ್ಪಿಗೆಯ ಬಳಿಕ ನಡೆಯಲಿದೆ ಎಂದಿದ್ದಾರೆ. ಇನ್ನು ದಿಪೀಂದರ್ ಗೋಯೆಲ್ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಷೇರುದಾರರಿಗೆ ಬರೆದ ಪತ್ರದಲ್ಲಿ, ಗೋಯಲ್ ಅವರು ಹೆಚ್ಚಿನ ಅಪಾಯ ಮತ್ತು ಪ್ರಯೋಗಗಳನ್ನು ಒಳಗೊಂಡ ಹೊಸ ಆಲೋಚನೆಗಳನ್ನು ಅನ್ವೇಷಿಸುವ ಬಯಕೆಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನು ಸಾರ್ವಜನಿಕ ಕಂಪನಿಯ ಹೊರಗೆ ಉತ್ತಮವಾಗಿ ಅನುಸರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. "ಇತ್ತೀಚೆಗೆ, ಗಮನಾರ್ಹವಾಗಿ ಹೆಚ್ಚಿನ ಅಪಾಯದ ಪರಿಶೋಧನೆ ಮತ್ತು ಪ್ರಯೋಗಗಳನ್ನು ಒಳಗೊಂಡಿರುವ ಹೊಸ ಆಲೋಚನೆಗಳ ಗುಂಪಿಗೆ ನಾನು ಆಕರ್ಷಿತನಾಗಿದ್ದೇನೆ" ಎಂದು ಗೋಯಲ್ ಹೇಳಿದರು, ಈ ಆಲೋಚನೆಗಳು "ಎಟರ್ನಲ್‌ನ ಅಪಾಯದ ಪ್ರೊಫೈಲ್‌ಗೆ ಹೊಂದಿಕೆಯಾಗುವುದಿಲ್ಲ" ಎಂದು ಹೇಳಿದ್ದಾರೆ.
ಹೊಸ ಉದ್ಯಮಗಳನ್ನು ಮುಂದುವರಿಸುವುದರ ಜೊತೆಗೆ ಎಟರ್ನಲ್ ಅನ್ನು ಮುಂದುವರಿಸಲು ವೈಯಕ್ತಿಕ ಬ್ಯಾಂಡ್‌ವಿಡ್ತ್ ಹೊಂದಿದ್ದರೂ, ಭಾರತದಲ್ಲಿ ಸಾರ್ವಜನಿಕ ಕಂಪನಿಯ ಸಿಇಒ ಆಗಿರುವ ನಿರೀಕ್ಷೆಗಳು ಮತ್ತು ಕಾನೂನು ಜವಾಬ್ದಾರಿಗಳಿಗೆ ಗಮನದ ಅಗತ್ಯವಿದೆ ಎಂದು ಗೋಯಲ್ ಹೇಳಿದರು. "ಈ ಪರಿವರ್ತನೆಯು ಎಟರ್ನಲ್ ಕುರಿತಾಗಿ ಹೆಚ್ಚಿನ ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ, ಆದರೆ ಎಟರ್ನಲ್‌ನ ಕಾರ್ಯತಂತ್ರದ ವ್ಯಾಪ್ತಿಗೆ ಹೊಂದಿಕೆಯಾಗದ ವಿಚಾರಗಳನ್ನು ಅನ್ವೇಷಿಸಲು ನನಗೆ ಅವಕಾಶ ನೀಡುತ್ತದೆ" ಎಂದು ಅವರು ಹೇಳಿದರು.
ಅಲ್ಬಿಂದರ್ ದಿಂಡ್ಸಾ ಹೊಸ ಸಿಇಒ
ಪ್ರಸ್ತುತ ಬ್ಲಿಂಕಿಟ್ ಅನ್ನು ಮುನ್ನಡೆಸುತ್ತಿರುವ ಅಲ್ಬಿಂದರ್ ದಿಂಡ್ಸಾ, ಪ್ರತಿದಿನದ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಗುಂಪಿನ ಕಾರ್ಯಾಚರಣೆಯ ಆದ್ಯತೆಗಳು ಮತ್ತು ವ್ಯವಹಾರ ನಿರ್ಧಾರಗಳ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಗೋಯೆಲ್, ದಿಂಡ್ಸಾ ಅವರನ್ನು ಕಂಪನಿಯ ಆರಂಭ ಮಾಡಿದ ದಿನದಿಂದಲೂ ಹೋರಾಟ ಮಾಡಿದ ವ್ಯಕ್ತಿ ಎಂದು ಹೇಳಿದ್ದಲ್ಲದ, ಬ್ಲಿಂಕಿಟ್‌ನ ನಷ್ಟದಿಂದ ಲಾಭದವರೆಗೆ ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದಿದ್ದಾರೆ. ಬ್ಲಿಂಕಿಟ್ ಸ್ವಾಧೀನದಿಂದ ಅದನ್ನು ಲಾಭದಾಯಕವಾಗಿ ಮುನ್ನಡೆಸುವವರೆಗೆ ದಿಂಡ್ಸಾ ಅವರ ಪಾತ್ರ ಬಹಳ ದೊಡ್ಡದಿದೆ ಎಂದು ಗೋಯೆಲ್ ಹೇಳಿದ್ದಾರೆ.
