ಆರ್ ಬಿಐ ದ್ವಿಮಾಸಿಕ ಎಂಪಿಸಿ ಸಭೆ ನಿನ್ನೆ ಪ್ರಾರಂಭವಾಗಿದ್ದು, ನಾಳೆ ರೆಪೋ ದರದ ಕುರಿತ ನಿರ್ಣಯ ಪ್ರಕಟವಾಗಲಿದೆ. ಆದರೆ, ಆರ್ ಬಿಐ ರೆಪೋ ದರದಲ್ಲಿ ಬದಲಾವಣೆ ಮಾಡುವ ಮುನ್ನವೇ ಕೆಲವು ಪ್ರಮುಖ ಬ್ಯಾಂಕ್ ಗಳು ಸ್ಥಿರ ಠೇವಣಿಗಳ (ಎಫ್ ಡಿ) ಮೇಲಿನ ಬಡ್ಡಿದರ ಇಳಿಕೆ ಮಾಡಿವೆ.
Business Desk: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕಳೆದ ಒಂದು ಸಾಲಿನಲ್ಲಿ ರೆಪೋ ದರದಲ್ಲಿ ಭಾರೀ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಸ್ಥಿರ ಠೇವಣಿಗಳು (ಎಫ್ ಡಿ) ಹಾಗೂ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ್ದವು. ಇದರಿಂದ ಬ್ಯಾಂಕ್ ಎಫ್ ಡಿಗಳಲ್ಲಿ ಹೂಡಿಕೆ ಮಾಡೋರ ಪ್ರಮಾಣ ಕೂಡ ಹೆಚ್ಚಿತ್ತು. ಇತರ ಉಳಿತಾಯ ಅಥವಾ ಹೂಡಿಕೆ ಯೋಜನೆಗಳಷ್ಟೇ ಕೆಲವು ಬ್ಯಾಂಕ್ ಗಳ ಎಫ್ ಡಿ ರಿಟರ್ನ್ ಸಿಗುವ ಕಾರಣ ಹೂಡಿಕೆಗೆ ಬ್ಯಾಂಕ್ ಎಫ್ ಡಿಗಳತ್ತ ಮುಖ ಮಾಡಿದ್ದರು. ಆದರೆ, ಈ ಹಿಂದಿನ ಆರ್ ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೋ ದರ ಏರಿಕೆ ಮಾಡಿಲ್ಲ. ಇನ್ನು ನಿನ್ನೆಯಿಂದ ಆರಂಭವಾಗಿರುವ ಎಂಪಿಸಿ ಸಭೆಯಲ್ಲಿ ಕೂಡ ರೆಪೋ ದರ ಏರಿಕೆ ಮಾಡುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಕೆಲವು ಬ್ಯಾಂಕ್ ಗಳು ಈಗಾಗಲೇ ಎಫ್ ಡಿ ಮೇಲಿನ ಬಡ್ಡಿದರ ಕಡಿತ ಮಾಡಿವೆ. ಆ ಮೂಲಕ ಹೂಡಿಕೆದಾರರಿಗೆ ಟ್ರೆಂಡ್ ಬದಲಾಗುತ್ತಿರುವ ಸೂಚನೆ ನೀಡಿವೆ. ಹಾಗಾದ್ರೆ ಯಾವೆಲ್ಲ ಪ್ರಮುಖ ಬ್ಯಾಂಕ್ ಗಳು ಎಫ್ ಡಿ ಮೇಲಿನ ಬಡ್ಡಿದರ ಕಡಿತ ಮಾಡಿವೆ? ಇಲ್ಲಿದೆ ಮಾಹಿತಿ.
ಆಕ್ಸಿಸ್ ಬ್ಯಾಂಕ್: ಸಿಂಗಲ್ ಟೆನ್ಯುರ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಆಕ್ಸಿಸ್ ಬ್ಯಾಂಕ್ ಇತ್ತೀಚೆಗೆ 20 ಬೇಸಿಸ್ ಪಾಯಿಂಟ್ಸ್ ಇಳಿಕೆ ಮಾಡಿದೆ. ಈ ಬದಲಾವಣೆಯಿಂದ ಪ್ರಸ್ತುತ ಏಳು ದಿನಗಳಿಂದ ಹಿಡಿದು 10 ವರ್ಷಗಳ ಅವಧಿಯ ಎಫ್ ಡಿಗಳ ಮೇಲಿನ ಬಡ್ಡಿದರ ಶೇ.3.5ರಿಂದ ಶೇ.7.10 ತನಕ ಇದೆ. ಇನ್ನು ಐದು ವರ್ಷಗಳಿಗಿಂತ ಕಡಿಮೆ ಅವಧಿಯ 13 ತಿಂಗಳ ತನಕದ ಎಫ್ ಡಿ ಮೇಲಿನ ಬಡ್ಡಿದರ ಶೇ.7.10ರಿಂದ ಶೇ.6.80ಕ್ಕೆ ಇಳಿಕೆಯಾಗಿದೆ. 13 ತಿಂಗಳಿಂದ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್ ಡಿ ಮೇಲಿನ ಬಡ್ಡಿದರವನ್ನು ಶೇ.7.15ರಿಂದ ಶೇ. 7.10ಕ್ಕೆ ಇಳಿಕೆ ಮಾಡಲಾಗಿದೆ. ಈ ಬಡ್ಡಿದರ ಪರಿಷ್ಕರಣೆ 2023ರ ಮೇ 23ರಿಂದಲೇ ಜಾರಿಗೆ ಬಂದಿದೆ.
ಈ ಬ್ಯಾಂಕ್ ಎಟಿಎಂನಲ್ಲಿ ನಗದು ವಿತ್ ಡ್ರಾ ಮಾಡಲು ಡೆಬಿಟ್ ಕಾರ್ಡ್ ಬೇಕಿಲ್ಲ, ಮೊಬೈಲ್ ನಲ್ಲಿ ಯುಪಿಐ ಇದ್ರೆ ಸಾಕು!
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ): 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸಿಂಗಲ್ ಟೆನ್ಯೂರ್ ಎಫ್ ಡಿ ಮೇಲಿನ ಬಡ್ಡಿದರವನ್ನು ಪಿಎನ್ ಬಿ ಇಳಿಕೆ ಮಾಡಿದ್ದು, ಜೂನ್ 1ರಿಂದಲೇ ಜಾರಿಗೆ ಬಂದಿದೆ. ಇನ್ನು ಒಂದು ವರ್ಷ ಅವಧಿಯ ಎಫ್ ಡಿ ಮೇಲಿನ ಬಡ್ಡಿದರದಲ್ಲಿ ಶೇ.0.05 ಇಳಿಕೆಯಾಗಿದ್ದು, ಶೇ.6.75ರಷ್ಟಿದೆ. 666 ದಿನಗಳ ಎಫ್ ಡಿ ಮೇಲಿನ ಬಡ್ಡಿದರ ಶೇ.7.25ರಿಂದ ಶೇ.7.05ಗೆ ಇಳಿಕೆಯಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 2022ರ ನವೆಂಬರ್ ಸಮಯದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಫ್ ಡಿ ಮೇಲೆ ಅತ್ಯಧಿಕ ಬಡ್ಡಿ ನೀಡುವ ಬ್ಯಾಂಕ್ ಆಗಿತ್ತು. ಸಾಮಾನ್ಯ ಗ್ರಾಹಕರಿಗೆ ಶೇ.7.30, ಹಿರಿಯ ನಾಗರಿಕರಿಗೆ ಶೇ.7.80 ಹಾಗೂ ಸೂಪರ್ ಸೀನಿಯರ್ಸ್ ಸಿಟಿಜನ್ಸ್ ಗೆ ಶೇ.8.05 ಬಡ್ಡಿ ನೀಡುತ್ತಿತ್ತು. ಆದರೆ, ಇತ್ತೀಚೆಗೆ ಈ ಬ್ಯಾಂಕ್ ಬಡ್ಡಿದರ ಕಡಿತ ಮಾಡಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವೆಬ್ ಸೈಟ್ ನಲ್ಲಿರುವ ಮಾಹಿತಿ ಅನ್ವಯ ಸಾಮಾನ್ಯ ಗ್ರಾಹಕರಿಗೆ ಶೇ.7, ಹಿರಿಯ ನಾಗರಿಕರಿಗೆ ಶೇ.7.50 ಹಾಗೂ ಸೂಪರ್ ಸೀನಿಯರ್ ಸಿಟಿಜನ್ಸ್ ಗೆ ಶೇ. 7.75 ಬಡ್ಡಿ ನೀಡಲಾಗುತ್ತಿದೆ.
ನೀವು ಬ್ಯಾಂಕ್ ನಲ್ಲಿ ಒಮ್ಮೆಗೆ ಎಷ್ಟು ನಾಣ್ಯಗಳನ್ನು ಠೇವಣಿ ಇಡಬಹುದು? ಆರ್ ಬಿಐ ಮಾರ್ಗಸೂಚಿಯಲ್ಲಿ ಏನಿದೆ?
ಒಂದು ವೇಳೆ ನಿಮಗೆ ಈ ಮೇಲೆ ತಿಳಿಸಿದ ಮೂರು ಬ್ಯಾಂಕ್ ಗಳಲ್ಲಿ ಮೇಲೆ ತಿಳಿಸಲಾದ ನಿರ್ದಿಷ್ಟ ಅವಧಿಗೆ ಹೂಡಿಕೆ ಮಾಡುವ ಯೋಚನೆಯಿದ್ದರೆ ಈಗ ಹಿಂದಿಗಿಂತ ಕಡಿಮೆ ಬಡ್ಡಿದರ ಸಿಗಲಿದೆ. ಆದರೆ, ನೀವು ಮೇಲೆ ತಿಳಿಸಲಾಗಿರುವ ಅವಧಿಯನ್ನು ಹೊರತುಪಡಿಸಿ ಬೇರೆ ಅವಧಿಯ ಎಫ್ ಡಿಗಳಲ್ಲಿ ಹೂಡಿಕೆ ಮಾಡೋದಾದರೆ ಈ ಹಿಂದಿನ ಬಡ್ಡಿದರದ ಆಧಾರದಲ್ಲೇ ನಿಮ್ಮ ಬಡ್ಡಿ ಗಳಿಕೆಯನ್ನು ಲೆಕ್ಕ ಹಾಕಲಾಗುತ್ತದೆ.
