ನೀವು ಬ್ಯಾಂಕ್ ನಲ್ಲಿ ಒಮ್ಮೆಗೆ ಎಷ್ಟು ನಾಣ್ಯಗಳನ್ನು ಠೇವಣಿ ಇಡಬಹುದು? ಆರ್ ಬಿಐ ಮಾರ್ಗಸೂಚಿಯಲ್ಲಿ ಏನಿದೆ?
ಇಂದು ನಾಣ್ಯಗಳು ಹೆಚ್ಚು ಚಲಾವಣೆಯಲ್ಲಿಲ್ಲ. ಹೀಗಿರುವಾಗ ನಮ್ಮ ಬಳಿಯಿರುವ ನಾಣ್ಯಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಬಹುದು. ಆದರೆ, ಒಮ್ಮೆಗೆ ಬ್ಯಾಂಕ್ ನಲ್ಲಿ ಎಷ್ಟು ನಾಣ್ಯಗಳನ್ನು ಠೇವಣಿ ಇಡಬಹುದು? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಈ ಬಗ್ಗೆ ಆರ್ ಬಿಐ ಮಾರ್ಗಸೂಚಿ ಏನಿದೆ? ಇಲ್ಲಿದೆ ಮಾಹಿತಿ.
Business Desk: ಇಂದಿನ ಡಿಜಿಟಲ್ ಯುಗದಲ್ಲಿ ನಗದುರಹಿತ ವಹಿವಾಟುಗಳು ಸಾಮಾನ್ಯವಾಗಿ ಬಿಟ್ಟಿವೆ. ಹೀಗಾಗಿ ನಿತ್ಯದ ವ್ಯವಹಾರಗಳಲ್ಲಿ ನಾಣ್ಯಗಳ ಬಳಕೆ ಗಮನಾರ್ಹವಾಗಿ ತಗ್ಗಿದೆ. ಯುಪಿಐ ಸೇರಿದಂತೆ ಡಿಜಿಟಲ್ ಪಾವತಿ ವ್ಯವಸ್ಥೆಗಳಿಂದಾಗಿ ಜನರು ಚಿಕ್ಕ ಮೊತ್ತದ ಪಾವತಿಗೆ ಕೂಡ ಇ-ವರ್ಗಾವಣೆ ಮಾಡುತ್ತಾರೆ. ಆದರೂ ಕೆಲವು ಕಡೆ ಈಗಲೂ ನಾಣ್ಯಗಳನ್ನು ನಿತ್ಯದ ವ್ಯವಹಾರದಲ್ಲಿ ನಾವೆಲ್ಲ ಬಳಸಿಯೇ ಬಳಸುತ್ತೇವೆ. ನಗದು ಪಾವತಿ ಮಾಡಿದ ಸಂದರ್ಭದಲ್ಲಿ ಉಳಿಕೆ ಹಣ ಪಡೆಯುವಾಗ ಕೆಲವೊಮ್ಮೆ ನಾಣ್ಯಗಳನ್ನು ಪಡೆಯುತ್ತೇವೆ. ಹಾಗೆಯೇ ಪಾವತಿ ಮಾಡುವಾಗಲೂ ಕೆಲವೊಮ್ಮೆ ನಾಣ್ಯಗಳನ್ನು ಬಳಸುತ್ತೇವೆ. ಹೀಗೆ ತರಕಾರಿ, ದಿನಸಿ ಸಾಮಗ್ರಿಗಳ ಖರೀದಿ ಸೇರಿದಂತೆ ನಿತ್ಯದ ವ್ಯವಹಾರಗಳಲ್ಲಿ ನಾಣ್ಯಗಳನ್ನು ಬಳಸುತ್ತೇವೆ. ಇನ್ನು ನಮ್ಮ ಬಳಿ ದೊಡ್ಡ ಮೊತ್ತದ ನಾಣ್ಯಗಳಿದ್ರೆ ಅವುಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಬಹುದು. ಆದರೆ, ಅದಕ್ಕೂ ಮುನ್ನ ಬ್ಯಾಂಕ್ ಗಳಲ್ಲಿ ನಾಣ್ಯಗಳನ್ನು ಠೇವಣಿಯಿಡಲು ಇರುವ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಹಾಗಾದ್ರೆ ಬ್ಯಾಂಕ್ ಗಳಲ್ಲಿ ನಾಣ್ಯಗಳನ್ನು ಠೇವಣಿಯಿಡಲು ಆರ್ ಬಿಐ ರೂಪಿಸಿರುವ ನಿಯಮಗಳೇನು? ಅವುಗಳು ಏನು ಹೇಳುತ್ತವೆ? ಇಲ್ಲಿದೆ ಮಾಹಿತಿ.
ಕಳೆದ ಹಲವು ವರ್ಷಗಳ ಅವಧಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಒಂದು, ಎರಡು, ಐದು, ಹತ್ತು ಹಾಗೂ 20 ರೂಪಾಯಿಗಳು ವಿವಿಧ ಮುಖಬೆಲೆಯ ನಾಣ್ಯಗಳನ್ನು ಪರಿಚಯಿಸಲಾಗಿದೆ. ಈ ನಾಣ್ಯಗಳನ್ನು ಪ್ರಾರಂಭದಲ್ಲಿ ಸಣ್ಣ ಮೊತ್ತದ ವಹಿವಾಟುಗಳಿಗೆ ಬಳಸಲಾಗುತ್ತಿತ್ತು. ಆದರೆ, ಡಿಜಿಟಲ್ ಪಾವತಿ ವ್ಯವಸ್ಥೆಗಳು ಅಭಿವೃದ್ಧಿಗೊಂಡ ಬೆನ್ನಲ್ಲೇ ಅವುಗಳ ಬಳಕೆ ತಗ್ಗಿದೆ. ಇದು ಚಲಾವಣೆಯಲ್ಲಿರುವ ನಾಣ್ಯಗಳ ಕೊರತೆಗೆ ಕಾರಣವಾಯಿತು. ಇಂದು ಡಿಜಿಟಲ್ ವಹಿವಾಟುಗಳು ನಡೆಯದ ಸ್ಥಳಗಳಲ್ಲಿ ಮಾತ್ರ ನಾಣ್ಯಗಳನ್ನು ಬಳಸಲಾಗುತ್ತಿದೆ.
75ರೂ. ವಿಶೇಷ ನಾಣ್ಯ ಖರೀದಿಸಬೇಕಾ? ಎಲ್ಲಿ ಸಿಗುತ್ತೆ ಗೊತ್ತಿಲ್ವ? ಇಲ್ಲಿದೆ ಮಾಹಿತಿ
ಭಾರತದಲ್ಲಿ ನಾಣ್ಯಗಳ ವಿತರಣೆ ಹಾಗೂ ಅವುಗಳ ನಿಯಂತ್ರಣ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಜವಾಬ್ದಾರಿಯಾಗಿದೆ. ನಾಣ್ಯ ಕಾಯ್ದೆ 2011 ಆರ್ ಬಿಐಗೆ ಪ್ರಮಾಣ, ವಿನ್ಯಾಸ ಹಾಗೂ ನಾಣ್ಯಗಳ ಮುಖಬೆಲೆ ನಿರ್ಧರಿಸಲು ಅಧಿಕಾರ ನೀಡುತ್ತದೆ. ಹಾಗೆಯೇ ಈ ಕಾಯ್ದೆ ನಾಣ್ಯಗಳ ಉತ್ಪಾದನೆ, ವಿತರಣೆ ಹಾಗೂ ದೇಶಾದ್ಯಂತ ಅವುಗಳ ಬಳಕೆಗೆ ಸಂಬಂಧಿಸಿ ಕೂಡ ನಿಯಮಗಳನ್ನು ರೂಪಿಸಿದೆ. ಪ್ರತಿ ವರ್ಷ ಸರ್ಕಾರ ಆರ್ ಬಿಐ ಜೊತೆಗೆ ಸಮಾಲೋಚೆ ನಡೆಸಿ ಎಷ್ಟು ಪ್ರಮಾಣದಲ್ಲಿ ನಾಣ್ಯಗಳನ್ಉ ಉತ್ಪಾದಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಈ ಪ್ರಕ್ರಿಯೆ ಸಂದರ್ಭದಲ್ಲಿ ಆರ್ಥಿಕ ಬೇಡಿಕೆ, ಬಳಕೆ ಸ್ವರೂಪಗಳು ಹಾಗೂ ಸಾಕಷ್ಟು ಪ್ರಮಾಣದಲ್ಲಿ ನಾಣ್ಯಗಳ ಪೂರೈಕೆ ಅಗತ್ಯವನ್ನು ಪರಿಗಣಿಸಲಾಗುತ್ತದೆ. ಇನ್ನು ಚಲಾವಣೆಯಲ್ಲಿರುವ ನಾಣ್ಯಗಳ ವಿನ್ಯಾಸವನ್ನು ನಿರ್ಧರಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡಲಾಗಿದೆ. ಈ ವಿನ್ಯಾಸಗಳು ದೇಶದ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ಮಹತ್ವ ಅಥವಾ ರಾಷ್ಟ್ರೀಯ ಲಾಂಛನಗಳನ್ನು ಬಿಂಬಿಸುವಂತಿರಬೇಕು.
ಇನ್ನು ಬ್ಯಾಂಕ್ ಗಳಲ್ಲಿ ನಾಣ್ಯಗಳ ಠೇವಣಿ ಇಡಲು ಅವು ಅರ್ಹ ಕರೆನ್ಸಿಯಾಗಿರೋದು ಅಗತ್ಯ. ಅಂದರೆ ಆರ್ ಬಿಐ ಸೂಚಿಸಿರುವ ನಿರ್ದಿಷ್ಟ ವಿನ್ಯಾಸ, ತೂಕ ಹಾಗೂ ಇತರ ಗುಣಲಕ್ಷಣಗಳನ್ನು ಹೊಂದಿರಬೇಕು. ನಾಣ್ಯಗಳ ದೃಢೀಕರಣ ಹಾಗೂ ಸಿಂಧುತ್ವವನ್ನು ಪರಿಶೀಲಿಸಲು ಬ್ಯಾಂಕ್ ಗಳು ಜವಾಬ್ದಾರರಾಗಿವೆ. ಇನ್ನು ಹಾನಿಗೊಳಗಾಗಿರುವ ನಾಣ್ಯಗಳನ್ನು ಬ್ಯಾಂಕ್ ಗಳು ಸ್ವೀಕರಿಸೋದಿಲ್ಲ. ಏಕೆಂದರೆ ಈ ನಾಣ್ಯಗಳ ಚಲಾವಣೆಗೆ ಕಾನೂನು ಮಾನ್ಯತೆ ಇರೋದಿಲ್ಲ.
2000 ರೂ. ನೋಟು ಹಿಂಪಡೆಯುವಿಕೆ ಬಳಿಕ ಎಸ್‌ಬಿಐನಲ್ಲಿ ಜಮೆಯಾಯ್ತು 14 ಸಾವಿರ ಕೋಟಿ, 3,000 ಕೋಟಿ ರೂ. ಬದಲಾವಣೆ
2,000ರೂ. ನೋಟುಗಳ ಠೇವಣಿಗೆ ಇರುವಂತೆಯೇ ನಾಣ್ಯಗಳನ್ನು ಬ್ಯಾಂಕ್ ನಲ್ಲಿ ಠೇವಣಿಯಿಡಲು ಯಾವುದೇ ನಿರ್ದಿಷ್ಟ ಮಿತಿಗಳನ್ನು ವಿಧಿಸಿಲ್ಲ. ಒಮ್ಮೆಗೆ ಎಷ್ಟು ಪ್ರಮಾಣದಲ್ಲಿ ನಾಣ್ಯಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಬಹುದು ಎಂಬ ಬಗ್ಗೆ ಆರ್ ಬಿಐ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ. ಹೀಗಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಜನರು ಎಷ್ಟು ಮೊತ್ತದ ನಾಣ್ಯಗಳನ್ನು ಬೇಕಾದರೂ ಠೇವಣಿ ಇಡಬಹುದು.
ಆರ್ ಬಿಐ ಮಾರ್ಗಸೂಚಿಗಳ ಅನ್ವಯ ಭಾರತದಲ್ಲಿ ಎಲ್ಲ ಬ್ಯಾಂಕ್ ಗಳು ತಮ್ಮ ಗ್ರಾಹಕರಿಂದ ನಾಣ್ಯಗಳ ಠೇವಣಿಗಳನ್ನು ಸ್ವೀಕರಿಸುತ್ತವೆ. ಯಾವುದೇ ಬ್ಯಾಂಕ್ ಕೂಡ ಇಂಥ ಠೇವಣಿಗಳನ್ನು ನಿರಾಕರಿಸಲು ಅಧಿಕಾರ ಹೊಂದಿಲ್ಲ. ನೀವು ಕೆಲವೇ ಕೆಲವು ನಾಣ್ಯಗಳನ್ನು ಹೊಂದಿದ್ದರು ಕೂಡ ಸಮೀಪದ ಬ್ಯಾಂಕ್ ಖಾತೆಗೆ ಭೇಟಿ ನೀಡಿ ನಮ್ಮ ಖಾತೆಗೆ ಈ ನಾಣ್ಯಗಳನ್ನು ಜಮೆ ಮಾಡಬಹುದು. ಇದಕ್ಕೆ ಯಾವುದೇ ನಿರ್ಬಂಧವಿಲ್ಲ.
ಇನ್ನು ಯಾವುದೇ ಬ್ಯಾಂಕ್ ಸೂಕ್ತ ಕಾರಣವಿಲ್ಲದೆ ನಾಣ್ಯಗಳನ್ನು ಠೇವಣಿ ಇಡಲು ನಿರಾಕರಿಸಿದರೆ, ಆರ್ ಬಿಐ ಪೋರ್ಟಲ್ ಮೂಲಕ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಇನ್ನು ಆರ್ ಬಿಐ ಗ್ರಾಹಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸುವ ಜೊತೆಗೆ ನಿಯಮಗಳನ್ನು ಪಾಲಿಸದ ಬ್ಯಾಂಕ್ ಗಳ ವಿರುದ್ಧ ಸೂಕ್ತ ಕ್ರಮವಾಗುವಂತೆ ನೋಡಿಕೊಳ್ಳುತ್ತದೆ.