Asianet Suvarna News Asianet Suvarna News

ಈ 6 ಹಣಕಾಸು ಸಂಬಂಧಿ ಕೆಲಸಗಳಿಗೆ ಜೂನ್ ತಿಂಗಳಲ್ಲಿ ಅಂತಿಮ ಗಡುವು, ಆದಷ್ಟು ಬೇಗ ಮಾಡಿ ಮುಗಿಸಿ

ಆಧಾರ್-ಪ್ಯಾನ್ ಲಿಂಕ್ ,ಇಪಿಎಸ್ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಸೇರಿದಂತೆ 6 ಹಣಕಾಸು ಸಂಬಂಧಿ ಕೆಲಸಗಳನ್ನು ಪೂರ್ಣಗೊಳಿಸಲು ಜೂನ್ ತಿಂಗಳಲ್ಲಿಅಂತಿಮ ಗಡುವು ನೀಡಲಾಗಿದೆ. ಹೀಗಾಗಿ ಈ ಕೆಲಸಗಳನ್ನು ಆದಷ್ಟು ಬೇಗ ಮಾಡಿ ಮುಗಿಸಿ. ಇಲ್ಲವಾದ್ರೆ ದಂಡ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

From Aadhaar PAN link to SBI Amrit Kalash FD Ensure completion of 6 vital money related tasks to avoid loss anu
Author
First Published May 27, 2023, 5:01 PM IST

Business Desk: ಜೂನ್ ತಿಂಗಳ ಪ್ರಾರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಸಾಮಾನ್ಯವಾಗಿ ಪ್ರತಿ ಹೊಸ ತಿಂಗಳು ಪ್ರಾರಂಭವಾಗುವಾಗ ಒಂದಿಷ್ಟು ನಿಯಮಗಳಲ್ಲಿ ಬದಲಾವಣೆಯಾಗೋದು ಸಹಜ. ಹಾಗೆಯೇ ಒಂದಿಷ್ಟು ಕೆಲಸಗಳಿಗೆ ಆಯಾ ತಿಂಗಳ ಗಡುವು ಕೂಡ ಇರುತ್ತದೆ. ಹಾಗೆಯೇ ಈ ಬಾರಿ ಜೂನ್ ತಿಂಗಳಲ್ಲಿ ಅನೇಕ ಪ್ರಮುಖ ಕೆಲಸಗಳಿಗೆ  ಅಂತಿಮ ಗಡುವು ನೀಡಲಾಗಿದೆ. ಈ ಅಂತಿಮ ಗಡುವಿನೊಳಗೆ ಆಯಾ ಕೆಲಸಗಳನ್ನು ಮಾಡಿ ಮುಗಿಸದಿದ್ದರೆ ಜೇಬಿನ ಮೇಲಿನ ಹೊರೆ ಹೆಚ್ಚಲಿದೆ. ಹಾಗೆಯೇ ಒಂದಿಷ್ಟು ತೊಂದರೆಗಳನ್ನು ಕೂಡ ಎದುರಿಸಬೇಕಾಗಬಹುದು. ಪ್ಯಾನ್ -ಆಧಾರ್ ಲಿಂಕ್ ಮಾಡೋದು, ಇಪಿಎಸ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ, ಆಧಾರ್ ಕಾರ್ಡ್ ಮಾಹಿತಿ ನವೀಕರಣಕ್ಕೆ ಅಂತಿಮ ಗಡುವು, ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಗಡುವು ಸೇರಿದಂತೆ ಕೆಲವು ಕೆಲಸಗಳಿಗೆ ಜೂನ್ ತಿಂಗಳಲ್ಲಿ ಅಂತಿಮ ಗಡುವು ನಿಗದಿಪಡಿಸಲಾಗಿದೆ. ಹೀಗಾಗಿ ಈ ಕೆಲಸಗಳನ್ನು ಇನ್ನೂ ಮಾಡಿ ಮುಗಿಸದವರು ಆದಷ್ಟು ಬೇಗ ಅವುಗಳನ್ನು ಪೂರ್ಣಗೊಳಿಸೋದು ಅಗತ್ಯ. ಹಾಗಾದ್ರೆ ಯಾವೆಲ್ಲ ಕೆಲಸಗಳನ್ನು ಮಾಡಿ ಮುಗಿಸಲು ಜೂನ್ ತಿಂಗಳಲ್ಲಿ ಅಂತಿಮ ಗಡುವು ವಿಧಿಸಲಾಗಿದೆ? ಇಲ್ಲಿದೆ ಮಾಹಿತಿ.

1.ಆಧಾರ್-ಪ್ಯಾನ್ ಲಿಂಕ್ ಮಾಡಲು ಅಂತಿಮ ಗಡುವು
ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು 2023ರ ಜೂನ್ 30 ಅಂತಿಮ ಗಡುವಾಗಿದೆ.  ಈ ಹಿಂದೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಮಾರ್ಚ್‌ 31ರ ಗಡುವು ನೀಡಲಾಗಿತ್ತು. ಆದರೆ, ಸಾಕಷ್ಟು ಜನರು ಪ್ಯಾನ್‌ ಕಾರ್ಡ್‌ ಜೊತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಲ್ಲ. ಹೀಗಾಗಿ ಹಣಕಾಸು ಸಚಿವಾಲಯ ಅಂತಿಮ ಗಡುವನ್ನು ಜೂ.30ರ ತನಕ ವಿಸ್ತರಿಸಿದೆ. ಆಧಾರ್‌ನೊಂದಿಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು ಜುಲೈ 1 ರಿಂದ ನಿಷ್ಕ್ರಿಯಗೊಳ್ಳುತ್ತವೆ. ಆಧಾರ್-ಪ್ಯಾನ್ ಲಿಂಕ್ ಮಾಡಲು 1,000ರೂ. ದಂಡ ಪಾವತಿಸೋದು ಅಗತ್ಯ. ದಂಡವಿಲ್ಲದೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಸಿಬಿಡಿಟಿ 2022ರ ಮಾರ್ಚ್ 31ರ ತನಕ ಸಮಯಾವಕಾಶ ನೀಡಿತ್ತು. ಆ ಬಳಿಕ ಅಂದ್ರೆ 2022ರ ಏಪ್ರಿಲ್  1ರ ಬಳಿಕ  ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್  ಮಾಡಲು 500ರೂ.  ಹಾಗೂ  2022ರ  ಜುಲೈ 1ರ ಬಳಿಕ 1000ರೂ. ದಂಡವನ್ನು ಸಿಬಿಡಿಟಿ ನಿಗದಿಪಡಿಸಿತ್ತು. 

ಪ್ಯಾನ್‌ - ಆಧಾರ್‌ ಲಿಂಕ್‌ಗೆ ಶುಲ್ಕ ರದ್ದುಪಡಿಸಲು ಆಗ್ರಹ

2.ಇಪಿಎಸ್ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ
ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್ ) ಅಡಿಯಲ್ಲಿ ನಿಗದಿಗಿಂತ ಹೆಚ್ಚಿನ ಮೊತ್ತದ ಪಿಂಚಣಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು ಇಪಿಎಫ್ ಒ ಜೂನ್ 26ರ ತನಕ ವಿಸ್ತರಿಸಿತ್ತು. ಈ ಮೊದಲು ಮೇ 3ರ ತನಕ ಮಾತ್ರ ಅವಕಾಶ ನೀಡಲಾಗಿತ್ತು. ಉದ್ಯೋಗಿಗಳ ಪಿಂಚಣಿ ಯೋಜನೆಗೆ 2014ರಲ್ಲಿ ತಿದ್ದುಪಡಿ ತರಲಾಗಿದ್ದು, ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದ್ದು 2022ರ ನವೆಂಬರ್ 4ರಂದು ತೀರ್ಪು ಪ್ರಕಟಿಸಿತ್ತು.ಈ ಹಿನ್ನೆಲೆಯಲ್ಲಿ ಅಧಿಕ ಪಿಂಚಣಿ ಕೋರಿ ಅರ್ಜಿ ಸಲ್ಲಿಸಲು ಇಪಿಎಫ್ ಒ ಅವಕಾಶ ನೀಡಿತ್ತು. ಅರ್ಜಿ ಸಲ್ಲಿಕೆ ಗಡುವು ವಿಸ್ತರಿಸುವಂತೆ ಇಪಿಎಫ್ ಒಗೆ ಉದ್ಯೋಗಿಗಳು, ಉದ್ಯೋಗದಾತ ಸಂಸ್ಥೆಗಳು ಹಾಗೂ ಸಂಘಟನೆಗಳು ಅನೇಕ ಮನವಿಗಳನ್ನು ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಜೂನ್ 26ರ ತನಕ ಕಾಲಾವಕಾಶ ನೀಡಲಾಗಿದೆ. 

3.ಆಧಾರ್ ಕಾರ್ಡ್ ಅಪ್ಡೇಟ್
ಯಾವುದೇ ಶುಲ್ಕ ಪಾವತಿಸದೆ ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ನವೀಕರಿಸಲು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಆನ್ ಲೈನ್ ನಲ್ಲಿ ಅವಕಾಶ ಕಲ್ಪಿಸಿದೆ. ಈ ಸೌಲಭ್ಯ 2023ರ  ಮಾರ್ಚ್ 15ರಿಂದ ಲಭ್ಯವಿದ್ದು,  2023ರ ಜೂನ್ 14ರ ತನಕ ಇರಲಿದೆ. myAadhaar ಪೋರ್ಟಲ್ ಮೂಲಕ ಮಾಹಿತಿಗಳನ್ನು ನವೀಕರಿಸಲು ಅವಕಾಶ ನೀಡಲಾಗಿದೆ. ಈ ಮಾಹಿತಿಗಳನ್ನು ನವೀಕರಿಸಲು ಆಧಾರ್ ಕೇಂದ್ರಗಳಲ್ಲಿ 50ರೂ. ಶುಲ್ಕ ವಿಧಿಸಲಾಗುತ್ತದೆ. ಆದರೆ, ಆಧಾರ್ ಪೋರ್ಟಲ್ ನಲ್ಲಿ ಇದನ್ನು ನವೀಕರಿಸಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಹೀಗಾಗಿ ನಿಮಗೆ ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ನವೀಕರಿಸಬೇಕಿದ್ರೆ ಆಧಾರ್ ಪೋರ್ಟಲ್ ನಲ್ಲಿ ಜೂ.14ರೊಳಗೆ ಮಾಡಿ ಮುಗಿಸಿ.

4.ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಗಡುವು
ಬ್ಯಾಂಕ್ ಲಾಕರ್ ಒಪ್ಪಂದಗಳನ್ನು ನವೀಕರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 2023ರ ಡಿಸೆಂಬರ್ 31ರ ತನಕ ಗಡುವು ನೀಡಿದೆ. ಆದರೆ, ಶೇ.50ರಷ್ಟು ಕೆಲಸಗಳನ್ನು ಜೂ.30ರೊಳಗೆ ಹಾಗೂ ಶೇ.75ರಷ್ಟು ಕೆಲಸಗಳನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸೋದು ಅಗತ್ಯ.

5.ಇಂಡಿಯನ್ ಬ್ಯಾಂಕ್ ವಿಶೇಷ ಎಫ್ ಡಿ
ಇಂಡಿಯನ್ ಬ್ಯಾಂಕ್ ವಿಶಿಷ್ಟ ಸ್ಥಿರ ಠೇವಣಿ (ಎಫ್ ಡಿ) ಯೋಜನೆಯಾದ 'IND SUPER 400 DAYS'ನಲ್ಲಿ ಹೂಡಿಕೆ ಮಾಡಲು ಜೂ.30ರ ತನಕ ಮಾತ್ರ ಅವಕಾಶ ನೀಡಲಾಗಿದೆ. ಈ ಎಫ್ ಡಿ ಯೋಜನೆಗೆ ಸಾಮಾನ್ಯ ಜನರಿಗೆ ಶೇ.7.25ರಷ್ಟು, ಹಿರಿಯ ನಾಗರಿಕರಿಗೆ ಶೇ.7.75ರಷ್ಟು ಹಾಗೂ ಸೂಪರ್ ಹಿರಿಯ ನಾಗರಿಕರಿಗೆ ಶೇ.8ರಷ್ಟು ಬಡ್ಡಿ ನೀಡಲಾಗುತ್ತಿದೆ.

SBI ಅಮೃತ್ ಕಲಶ್ ವಿಶೇಷ ಎಫ್ ಡಿ ಯೋಜನೆ ಮತ್ತೆ ಪ್ರಾರಂಭ; ಈ ಬಾರಿ ಬಡ್ಡಿ ಎಷ್ಟು?

6.ಎಸ್ ಬಿಐ ಅಮೃತ್ ಕಲಶ್
ಎಸ್ ಬಿಐ ಅಮೃತ್ ಕಲಶ್ ವಿಶೇಷ ಎಫ್ ಡಿ ಯೋಜನೆ ಜೂನ್ 30ಕ್ಕೆ ಕೊನೆಯಾಗಲಿದೆ. ಈ ಎಫ್ ಡಿ ಅವಧಿ 400 ದಿನಗಳು. ಇನ್ನು ಸಾಮಾನ್ಯ ಜನರು ಹಾಗೂ ಹಿರಿಯ ನಾಗರಿಕರಿಗೆ ಈ ಎಫ್ ಡಿ ಯೋಜನೆಯಲ್ಲಿ ಕ್ರಮವಾಗಿ ಶೇ.7.10 ಹಾಗೂ ಶೇ.7.60 ಬಡ್ಡಿ ನೀಡಲಾಗುತ್ತಿದೆ. 


 

Follow Us:
Download App:
  • android
  • ios