ಬೈಜುಸ್ ಸಂಸ್ಥಾಪಕ ರವೀಂದ್ರನ್ ತಲೆಮೇಲೆ ತೂಗುಗತ್ತಿ ; ಕಾನೂನು ಕ್ರಮಕ್ಕೆ ಮುಂದಾದ 4 ಹೂಡಿಕೆದಾರರು
ಬೈಜುಸ್ ಸಂಸ್ಥಾಪಕ ರವೀಂದ್ರನ್ ಅವರ ಹುದ್ದೆಗೆ ಸಂಚಕಾರ ಎದುರಾಗಿದೆ.ಬೈಜುಸ್ ವಿರುದ್ಧ ನಾಲ್ವರು ಹೂಡಿಕೆದಾರರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅಲ್ಲದೆ, ರವೀಂದ್ರನ್ ಹಾಗೂ ಅವರ ಕುಟುಂಬವನ್ನು ಬೈಜುಸ್ ಮಂಡಳಿಯಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರು (ಫೆ.23): ಒಂದು ಕಾಲದಲ್ಲಿ ದೇಶದ ಜನಪ್ರಿಯ ಎಜುಟೆಕ್ ಕಂಪನಿಯಾಗಿದ್ದ ಬೈಜುಸ್, ಈಗ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದು, ಒಂದರ ಹಿಂದೆ ಒಂದರಂತೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಬೈಜುಸ್ ಸಂಸ್ಥೆಯ ನಾಲ್ವರು ಹೂಡಿಕೆದಾರರು ಕಾನೂನು ಕ್ರಮಕ್ಕೆ ಮುಂದಾಗಿದ್ದು, ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯೂನಲ್ ನಲ್ಲಿ (ಎನ್ ಸಿಎಲ್ ಟಿ) ಈ ಎಜುಟೆಕ್ ಕಂಪನಿ ವಿರುದ್ಧ ದಬ್ಬಾಳಿಕೆ ಹಾಗೂ ಅವ್ಯವಸ್ಥೆಯ ದೂರು ದಾಖಲಿಸಿದ್ದಾರೆ. ಅವರ ಈ ಕಾನೂನು ಕ್ರಮದ ಗುರಿ ಬೈಜುಸ್ ಸ್ಥಾಪಕ ರವೀಂದ್ರನ್ ಅವರನ್ನು ಸಂಸ್ಥೆಯನ್ನು ಮುನ್ನಡೆಸಲು ಸಮರ್ಥರಲ್ಲ ಎಂಬುದನ್ನು ಸಾಬೀತುಪಡಿಸೋದು. ಗುರುವಾರ ಸಂಜೆ ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರದ (ಎನ್ ಸಿಎಲ್ ಟಿ) ಮುಂದೆ ಹೂಡಿಕೆದಾರರು ಸಲ್ಲಿಸಿದ ಅರ್ಜಿಯಲ್ಲಿ ರವೀಂದ್ರನ್ ಹಾಗೂ ಅವರ ಕುಟುಂಬವನ್ನು ಬೈಜುಸ್ ಮಂಡಳಿಯಿಂದ ತೆಗೆಯುವಂತೆ ಒತ್ತಾಯಿಸಲಾಗಿದೆ. ಬೈಜುಸ್ 'ಅವ್ಯವಸ್ಥೆ ಹಾಗೂ ವೈಫಲ್ಯ' ಕೇಂದ್ರೀಕರಿಸಿ ಷೇರುದಾರರ ವಿಶೇಷ ಸಾಮಾನ್ಯ ಸಭೆಯಲ್ಲಿ ರವೀಂದ್ರನ್ ಹಾಗೂ ಅವರ ಕುಟುಂಬವನ್ನು ಮಂಡಳಿಯಿಂದ ವಜಾಗೊಳಿಸುವಂತೆ ಒತ್ತಾಯಿಸಿದ ಜೊತೆಗೆ ವ್ಯವಹಾರದ ಫಾರೆನ್ಸಿಕ್ ಅಡಿಟ್ ನಡೆಸುವಂತೆ ಕೂಡ ಆಗ್ರಹಿಸಲಾಗಿದೆ.
ದಾಖಲೆ ಪ್ರಕಾರ ಹೂಡಿಕೆದಾರರು ಹೊಸ ಸಿಇಒ ಹಾಗೂ ಮಂಡಳಿಯನ್ನು ಆಯ್ಕೆ ಮಾಡಲು ಬಯಸಿದ್ದರು. ಹಾಗೆಯೇ ಪ್ರಸ್ತುತವಿರುವ ಆಡಳಿತ ಮಂಡಳಿ ಉದ್ಯಮ ಮುನ್ನಡೆಸಲು ಅಸಮರ್ಥವಾಗಿದೆ ಎಂದು ಘೋಷಿಸುವಂತೆ ಒತ್ತಾಯಿಸಲಾಗಿದೆ. ಹಾಗೆಯೇ ಎನ್ ಸಿಎಲ್ ಟಿಗೆ ಸಲ್ಲಿಕೆ ಮಾಡಿರುವ ಮನವಿಯಲ್ಲಿ ಫಾರೆನ್ಸಿಕ್ ಅಡಿಟ್ ಗೆ ಒತ್ತಾಯಿಸಲಾಗಿದೆ. ಹೂಡಿಕೆದಾರರಿಗೆ ಆಡಳಿತ ಮಂಡಳಿ ಮಾಹಿತಿಗಳನ್ನು ಒದಗಿಸುವಂತೆ ಆದೇಶ ಹೊರಡಿಸುವಂತೆ ಕೂಡ ಕೋರಲಾಗಿದೆ.
'ನಾನು ನಿಮಗಾಗಿ ಹೋರಾಡುತ್ತೇನೆ, ನೀವೂ ನನ್ನ ಜೊತೆಗೆ ಹೋರಾಡಿ';ಉದ್ಯೋಗಿಗಳಿಗೆ ಬೈಜುಸ್ ಸಿಇಒ ಭಾವನಾತ್ಮಕ ಪತ್ರ
ಈ ದೂರು ಅರ್ಜಿಗೆ ಪ್ರೊಸಸ್, ಜಿಎ, ಸೋಫಿನ ಹಾಗೂ ಪೀಕ್ XV ಎಂಬ ನಾಲ್ಕು ಹೂಡಿಕೆದಾರರು ಸಹಿ ಹಾಕಿದ್ದಾರೆ. ಇನ್ನು ಈ ಅರ್ಜಿಗೆ ಬೆಂಬಲ ನೀಡಿರುವ ಇತರರ ಷೇರುದಾರರಲ್ಲಿ ಟೈಗರ್ ಹಾಗೂ ಔಲ್ ವೆಂಚರ್ಸ್ ಸೇರಿದೆ.
ಈ ಕಾನೂನು ಅರ್ಜಿಯಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಸಂಸ್ಥಾಪಕರ ಹಣಕಾಸಿನ ತಪ್ಪು ನಿರ್ವಹಣೆ ಸೇರಿದಂತೆ ಅನೇಕ ವಿಚಾರಗಳು ಆಕಾಶ್, ಬೈಜುಸ್ ಅಲ್ಫಾ ಮೇಲಿನ ಹಿಡಿತ ಕಳೆದುಕೊಳ್ಳುವಂತೆ ಆಡಿದೆ. ಈ ಎರಡೂ ಸಂಸ್ಥೆಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಇನ್ನು ಕಾರ್ಪೋರೇಟ್ ಆಡಳಿತಕ್ಕೆ ಸಂಬಂಧಿಸಿ ಈಗಿರುವ ಸಮಸ್ಯೆಗಳು ಅಂದ್ರೆ ಸ್ವತಂತ್ರ ನಿರ್ದೇಶಕರು ಹಾಗೂ ಸಿಫ್ಒ ನೇಮಕ ಮಾಡಿಕೊಳ್ಳುವಲ್ಲಿ ವೈಫಲ್ಯ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ.
43 ವಯಸ್ಸಿನ ಬೈಜುಸ್ ಸ್ಥಾಪಕರ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್ ಔಟ್ ಸರ್ಕ್ಯೂಲರ್ (ಎಲ್ ಒಸಿ) ಉನ್ನತೀಕರಿಸಿದೆ. ಈ ಬೆಳವಣಿಗೆಗಳು ರವೀಂದ್ರನ್ ಹಾಗೂ ಅವರ ಕುಟುಂಬವನ್ನು ಕಂಪನಿ ಆಡಳಿತ ಮಂಡಳಿಯಿಂದ ವಜಾಗೊಳಿಸಲು ಕರೆಯಲಾಗಿದ್ದ ಷೇರುದಾರರ ತುರ್ತು ಸಭೆಗೆ ತಡೆಯಾಜ್ಞೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ ಒಂದು ದಿನದ ಬಳಿಕ ನಡೆದಿವೆ.
ಆರ್ಥಿಕ ಸಂಕಷ್ಟದಲ್ಲಿರುವ ಎಜುಟೆಕ್ ಕಂಪನಿ ಬೈಜುಸ್ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದೆ. 22 ಬಿಲಿಯನ್ ಡಾಲರ್ ಕಂಪನಿಯ ಮೌಲ್ಯ ಇದೀಗ 3 ಸಾವಿರ ಡಾಲರ್‌ಗೆ ಕುಸಿದಿದೆ. ಆನ್ ಲೈನ್ ಶಿಕ್ಷಣ, ಕೋಚಿಂಗ್ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಬೈಜುಸ್ ಹೊಸ ಕ್ರಾಂತಿ ಸೃಷ್ಟಿಸಿತ್ತು. ಆದರೆ, ಕಳೆದ ಕೆಲವು ತಿಂಗಳಿಂದ ಉದ್ಯೋಗಿಗಳಿಗೆ ಸಮರ್ಪಕವಾಗಿ ವೇತನ ಪಾವತಿಸಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಬೈಜುಸ್ ಎದುರಿಸಿತ್ತು. ಇಂಥ ಪರಿಸ್ಥಿತಿಯಲ್ಲಿ ಬೈಜುಸ್ ಸಿಇಒ ರವೀಂದ್ರನ್ ತಮ್ಮ ಸ್ವಂತ ಮನೆ ಹಾಗೂ ಕುಟುಂಬದವರ ಮನೆಯನ್ನು ಅಡವಿಟ್ಟು ಉದ್ಯೋಗಿಗಳಿಗೆ ವೇತನ ಪಾವತಿಸಲು ಮುಂದಾಗಿದ್ದರು.
ಹಣಕಾಸಿನ ಕೊರತೆ, ಲಿಯೋನೆಲ್ ಮೆಸ್ಸಿ ಜೊತೆಗಿನ ಒಪ್ಪಂದ ಕಡಿದುಕೊಂಡ ಬೈಜೂಸ್!
ಕೆಲವು ದಿನಗಳ ಹಿಂದೆ ಬೈಜುಸ್ ಉದ್ಯೋಗಿಗಳಿಗೆ ಸಂಸ್ಥಾಕ ರವೀಂದ್ರನ್ ಮೇಲ್ ಕಳುಹಿಸಿದ್ದರು. ಇದರಲ್ಲಿ ಕೆಲವು ಹೂಡಿಕೆದಾರರು ನಾವು ಎದುರಿಸಿದ ಸಂಕಷ್ಟವನ್ನು ಸಂಸ್ಥೆ ವಿರುದ್ಧ ಪಿತೂರಿ ನಡೆಸಲು ಸಿಕ್ಕ ಅವಕಾಶ ಎಂದು ಭಾವಿಸಿದರು. ಹಾಗೆಯೇ ನಮ್ಮ ಸಂಸ್ಥಾಪಕರು ಬೈಜುಸ್ ಸಿಇಒ ಹುದ್ದೆಯಿಂದ ಕೆಳಗಿಳಿಯುವಂತೆ ಆಗ್ರಹಿಸಿದರು. ಇಂಥ ಸವಾಲಿನ ಸಮಯದಲ್ಲಿ ನಮಗೆ ಬೆಂಬಲ ನೀಡಬೇಕಾದ ಕೆಲವು ಹೂಡಿಕೆದಾರರ ಈ ರೀತಿಯ ವರ್ತನೆಯಿಂದ ನಮಗೆ ಬೇಸರವಾಗಿದೆ ಎಂದು ಬರೆದಿದ್ದರು.