* ಕರಾವಳಿಯ ಪ್ರಸಿದ್ಧ ಐಡಿಯಲ್ ಐಸ್ ಕ್ರೀಂ ಸಂಸ್ಥಾಪಕ ಪ್ರಭಾಕರ ಕಾಮತ್(79) ನಿಧನ* ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು* ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕಾಮತ್ ನಿಧನ

ಮಂಗಳೂರು(ನ.06): ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ (Dakshina Kannada) ಪ್ರಸಿದ್ಧ ಐಸ್‌ ಕ್ರೀಂ ಐಡಿಯಲ್ಸ್‌ನ ಸಂಸ್ಥಾಪಕ (Founder Of Ideal Ice Cream) ಪ್ರಭಾಕರ ಕಾಮತ್(79)ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಗಾಯಗೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಪ್ರಭಾಕರ ಕಾಮತ್ (Prabhakar Kamath) ಕೊನೆಯುಸಿರೆಳೆದಿದ್ದಾರೆ. 

ಹೌದು ಅ.28ರಂದು ಮಂಗಳೂರಿನ ಬಿಜೈ ಕಾಪಿಕಾಡ್‌ನ‌ 1ನೇ ಅಡ್ಡರಸ್ತೆಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕೆಎಸ್‌ಆರ್‌ಟಿಸಿ (KSRTC) ಕಡೆಯಿಂದ ಬಿಜೈ ಕಾಪಿಕಾಡ್‌ ಕಡೆಗೆ ಅತಿ ವೇಗದಿಂದ ಬಂದ ಸ್ಕೂಟರ್‌ ಡಿಕ್ಕಿ ಹೊಡೆದಿತ್ತು. ಕಾಮತ್‌ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೀಗ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಪ್ರಭಾಕರ್ ಕಾಮತ್ ತಮ್ಮ ಪತ್ನಿ, ಪುತ್ರ ಐಡಿಯಲ್ ಐಸ್ ಕ್ರೀಂ ಮುಖ್ಯಸ್ಥ ಮುಕುಂದ ಕಾಮತ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪಿ.ವಿ. ಸಿಂಧು, ಮೋದಿಗೆ ಪಬ್ಬಾಸ್‌ ಐಸ್‌ಕ್ರೀಂ ಆಫರ್‌!

ಪ್ರಭಾಕರ್ ಕಾಮತ್‌ರವರು 1975ರಲ್ಲಿ ಐಡಿಯಲ್ ಐಸ್ ಕ್ರೀಂ ಪಾರ್ಲರ್ (Ideal Ice Cream Parlour) ಆರಂಭಿಸಿದ್ದರು. ಕೆಲವೇ ವರ್ಷಗಳಲ್ಲಿ ಐಡಿಯಲ್ ಐಸ್ ಕ್ರೀಂ ಕರಾವಳಿಯಲ್ಲಿ ಮನೆಮಾತಾಯಿತು. ನೋಡ ನೋಡುತ್ತಿದ್ದಂತೆಯೇ ಐಡಿಯಲ್ ಹಾಗೂ ಪಬ್ಬಾಸ್ ಪಾರ್ಲರ್ ಗಳು ಸಖತ್ ಫೇಮಸ್ ಆದವು. ಅಲ್ಲದೇ ಮಂಗಳೂರಿಗೆ ಐಸ್ ಕ್ರೀಂ ಕ್ಯಾಪಿಟಲ್ ಅನ್ನೋ ಹೆಸರಿಗೆ ಐಡಿಯಲ್ ಕಾರಣವಾಗಿತ್ತು ಎಂಬುವುದು ಉಲ್ಲೇಖನೀಯ. 

ಸ್ವತಃ ಐಸ್ ಕ್ರೀಮ್ ತಯಾರಿ ಕಲಿತಿದ್ದ ಪ್ರಭಾಕರ್ ಕಾಮತ್ (Prabhakar Kamath) ಅವರು 14 ಫ್ಲೇವರ್ ಗಳೊಂದಿಗೆ ಮೊದಲ ಬಾರಿಗೆ ಐಡಿಯಲ್ ಐಸ್ ಕ್ರೀಮ್ ಪಾರ್ಲರ್ ತೆರೆದಿದ್ದರು. ವರ್ಷಗಳು ಉರುಳಿದಂತೆ ಇಲ್ಲಿ ವಿವಿಧ ಬಗೆಯ, ವಿಭಿನ್ನ ಶೈಲಿಯ ವಿನೂತನ ರೀತಿಯ ಐಸ್‌ಕ್ರೀಂಗಳನ್ನು ಪರಿಗಚಯಿಸಿದ್ದರು. ಈ ಮೂಲಕ ಜನರಿಗೆ ಐಡಿಯಲ್ ಮತ್ತಷ್ಟು ಹತ್ತಿರವಾಗಿತ್ತು. 'ಗಡ್‌ಬಡ್‌' ಎನ್ನುವುದು ಐಡಿಯಲ್‌ ಐಸ್‌ಕ್ರೀಂನ ಸಿಗ್ನೇಚರ್‌ ಪ್ರೊಡಕ್ಟ್‌. ಆದರೆ ಇಂದು ಬಹುತೇಕ ಎಲ್ಲಾ ಐಸ್‌ಕ್ರೀಂ ಪಾರ್ಲರ್‌ಗಳಲ್ಲೂ ಇದನ್ನು ಅನುಕರಿಸಲಾಗುತ್ತಿದೆಯಾದರೂ ಐಡಿಯಲ್‌ನಷ್ಟು ಜನಪ್ರಿಯತೆ ಪಡೆದುಕೊಂಡಿಲ್ಲ, ರುಚಿಯನ್ನೂ ಸರಿಗಟ್ಟಿಲ್ಲ ಎಂಬುವುದು ಇಲ್ಲಿಗೆ ಭೇಟಿ ನೀಡುವವರ ಅನುಭವವಾಗಿದೆ. ಪ್ರಭಾಕರ ಕಾಮತ್ ಅವರನ್ನು ಪ್ರೀತಿಯಿಂದ ಪಬ್ಬಾ ಮಾಮ್ ಎಂದೂ ಕರೆಯುತ್ತಿದ್ದು ಅದೇ ಹೆಸರಿನಲ್ಲಿ ಮಂಗಳೂರಿನಲ್ಲಿ ಐಸ್ ಕ್ರೀಂ ಪಾರ್ಲರ್ ಕೂಡಾ ಇದೆ.

ಇಂದು ಮಂಗಳೂರಿನಲ್ಲಿ (Mangaluru) ಐಡಿಯಲ್‌ ಐಸ್‌ಕ್ರೀಂನ ಐದು ಪಾರ್ಲರ್‌ಗಳಿವೆ. ಇವುಗಳಲ್ಲಿ ಮಾರ್ಕೆಟ್‌ ರಸ್ತೆಯಲ್ಲಿರುವ ಐಸ್‌ಕ್ರೀಂ ಪಾರ್ಲರ್‌ ದೇಶದ ಅತೀ ದೊಡ್ಡ ಐಸ್‌ ಕ್ರೀಂ ಪಾರ್ಲರ್‌ಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಕರಾವಳಿ ಹಾಗೂ ದೇಶದ ಅಸಂಖ್ಯಾತ ಐಸ್‌ ಕ್ರೀಂ ಪಾರ್ಲರ್‌ಗಳು, ಅಂಗಡಿಗಳಲ್ಲಿ ಐಡಿಯಲ್‌ ಐಸ್‌ಕ್ರೀಂ ಮಾರಾಟವಾಗುತ್ತಿದೆ.

ಇತ್ತೀಚೆಗಷ್ಟೇ ಪರಿಚಯಿಸಿದ್ರು ಐಸ್‌ಕ್ರೀಂ ಥಾಲಿ

ಇತ್ತೀಚೆಗಷ್ಟೇ ಮಂಗಳೂರಿನ ಐಡಿಯಲ್ ಐಸ್‌ಕ್ರೀಂ ಮಾಲೀಕತ್ವದ ಪಬ್ಬಾಸ್(Pabbas) ಐಡಿಯಲ್ ಕೆಫೆಯಲ್ಲಿ ‘ಐಸ್‌ಕ್ರೀಂ ಥಾಲಿ’ಯನ್ನು ಪರಿಚಯಿಸಿತ್ತು. ಐಸ್‌ಕ್ರೀಂ ಥಾಲಿಯಲ್ಲಿ ಒಟ್ಟು 11 ಬಗೆಗಳಿವೆ. ಬಾಳೆ ಎಲೆಯ ಮಾದರಿಯ ಪ್ಲೇಟಿನಲ್ಲಿ ಐಸ್‌ಕ್ರೀಂ ಥಾಲಿ ಗ್ರಾಹಕರಿಗೆ ಪೂರೈಸಲಾಗುತ್ತದೆ. ಪ್ರತಿ ಐಸ್‌ಕ್ರೀಂ ಕೂಡ ಸೌತ್, ನಾರ್ತ್ ಊಟದ ಥಾಲಿಯ ಒಂದೊಂದು ಮೆನುವನ್ನು ಸಾಂಕೇತಿಕವಾಗಿ ಹೋಲಿಕೆ ಮಾಡಲಾಗಿದೆ. ಇದರಲ್ಲಿ ಸಕ್ಕರೆ(ಉಪ್ಪು ಹೋಲಿಕೆ), ಸ್ಟ್ರಾಬೆರಿ ಹಣ್ಣು(ಉಪ್ಪಿನಕಾಯಿ), ಒಣ ಹಣ್ಣಿನ ಜೆಲ್ಲೊ(ಕೋಸಂಬರಿ) ನಾಲ್ಕು ಫ್ಲೇವರ್‌ಗಳ ಐಸ್‌ಕ್ರೀಂ(ಬಟರ್ ಸ್ಕಾಚ್, ಸ್ಟ್ರಾಬೆರಿ ಸ್ಪೆಷಲ್, ಅರೇಬಿಯನ್ ಡಿಲೈಟ್, ಬ್ಲಾಕ್ ಕರಂಟ್ ಕ್ರಮವಾಗಿ ಬಗೆ ಬಗೆಯ ಪದಾರ್ಥ, ವೆನಿಲ್ಲಾ ಐಸ್‌ಕ್ರೀಂ ಸ್ಲಾಬ್, ಗಾಜರ್ ಹಲ್ವಾ(ಅನ್ನ, ಸಾರು), ಫಿಜ್ಜಾ(ಸ್ವೀಟ್) ಮತ್ತು ಮರ್ಜಿ ಪಾನ್(ಪಾನ್ ಬೀಡಾ) ಈ ಐಟಂಗಳನ್ನು ಒಳಗೊಂಡಿದೆ.

ಐಸ್‌ಕ್ರೀಂ ಪ್ರಿಯರಿಗೆ ಗುಡ್‌ನ್ಯೂಸ್..!

ಒಂದು ಐಸ್‌ಕ್ರೀಂ ಥಾಲಿಗೆ ಆರ್ಡರ್ ನೀಡಿದರೆ ಇಷ್ಟೆಲ್ಲ ಐಟಂಗಳು ಒಂದೇ ಬಾರಿಗೆ ಸಿಗುತ್ತದೆ. ಒಂದು ಪ್ಲೇಟ್ ಐಸ್‌ಕ್ರೀಂ ಥಾಲಿ ದರ 279 ರುಪಾಯಿ. ಐಸ್‌ಕ್ರೀಂ ಥಾಲಿ ತರಿಸಿಕೊಂಡು ಒಬ್ಬರಿಂದ ತೊಡಗಿ ನಾಲ್ಕೈದು ಮಂದಿಯೂ ಶೇರ್ ಮಾಡಿಕೊಂಡು ಸವಿಯಬಹುದು. ಸದ್ಯ ಐಸ್‌ಕ್ರೀಂ ಥಾಲಿ ಮಂಗಳೂರು ಭಾರತ್ ಮಾಲ್‌ನಲ್ಲಿರುವ ಪಬ್ಬಾಸ್ ಐಡಿಯಲ್ ಕೆಫೆಯಲ್ಲಿ ಮಾತ್ರ ಸಿಗುತ್ತಿದೆ.

Scroll to load tweet…

ಪಬ್ಬಾಸ್ ತನ್ನ ಹೊಸ ಐಡಿಯಾಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಹಾಗೂ ಪ್ರಧಾನಿ ಮೋದಿ ಅವರಿಗೆ ಐಸ್‌ಕ್ರೀಂ ಟ್ರೀಟ್ ಕೊಡುವುದಾಗಿ ಪಬ್ಬಾಸ್ ಟ್ವೀಟ್ ಮಾಡಿತ್ತು.

ಮಂಗಳೂರಿನ ಪಬ್ಬಾಸ್‌ ಐಡಿಯಲ್‌ ಕೆಫೆ ದಶಕಗಳಿಂದ ಗುಣಮಟ್ಟದ ಐಸ್‌ಕ್ರೀಂಗಳಿಗೆ ಹೆಸರುವಾಸಿ. ಬಹಳಷ್ಟು ಬಗೆಯ ವಿಭಿನ್ನ ರುಚಿಯ ಸ್ವಾದಿಷ್ಟಕರ ಐಸ್‌ಕ್ರೀಂಗೆ ಮಾರು ಹೋಗದವರಿಲ್ಲ. ಚಿತ್ರರಂಗದ ಬಹಳಷ್ಟುತಾರೆಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮಂಗಳೂರಿಗೆ ಬಂದು ಪಬ್ಬಾಸ್‌ ಐಸ್‌ಕ್ರೀಂ ಸವಿದಿದ್ದಾರೆ.