* ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು * ಪಿ.ವಿ. ಸಿಂಧು, ಮೋದಿಗೆ ಪಬ್ಬಾಸ್‌ ಐಸ್‌ಕ್ರೀಂ ಆಫರ್‌

ಮಂಗಳೂರು(ಆ.03): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐಸ್‌ಕ್ರೀಂ ಟ್ರೀಟ್‌ ನೀಡುವುದಾಗಿ ಮಂಗಳೂರಿನ ಪಬ್ಬಾಸ್‌ ಐಡಿಯಲ್‌ ಐಸ್‌ಕ್ರೀಂ ಕೆಫೆ ಮೋದಿ ಅವರಿಗೆ ಟ್ವೀಟ್‌ ಮಾಡಿದೆ.

ಪದಕ ಗೆದ್ದು ಬಂದರೆ ನಿಮ್ಮ ಜತೆ ಐಸ್‌ಕ್ರೀಂ ಸವಿಯುವುದಾಗಿ ಒಲಿಂಪಿಕ್ಸ್‌ಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧುಗೆ ಹೇಳಿ ಹುರಿದುಂಬಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಪಿ.ವಿ. ಸಿಂಧು ಕಂಚಿನ ಪದಕ ಗೆದ್ದ ಬಳಿಕ ನರೇಂದ್ರ ಮೋದಿ ಟ್ವೀಟ್‌ ಮಾಡಿ ಮತ್ತೆ ಐಸ್‌ಕ್ರೀಂ ವಿಚಾರವನ್ನು ನೆನಪಿಸಿಕೊಂಡಿದ್ದಾರೆ. ಅದಕ್ಕೆ ಮಂಗಳೂರಿನ ಪ್ರಸಿದ್ಧ ಐಸ್‌ಕ್ರೀಮ್‌ ಪಬ್ಬಾಸ್‌ ಐಡಿಯಲ್‌ ಕೆಫೆ ಪ್ರತಿಕ್ರಿಯಿಸಿದ್ದು ಗಮನ ಸೆಳೆದಿದೆ.

‘‘ಆತ್ಮೀಯ ಪ್ರಧಾನಿ ಮೋದಿ ಅವರೇ, ನೀವು ಪಿ.ವಿ. ಸಿಂಧು ಅವರಿಗೆ ಭರವಸೆ ನೀಡಿದ್ದೀರಿ. ಈಗ ಅವರು ಪದಕ ಗೆದ್ದು ಬಂದಿದ್ದಾರೆ. ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್‌ ಆಟಗಾರ್ತಿಯೊಂದಿಗೆ ನಿಮಗೂ ಅತ್ಯುತ್ತಮ ಐಸ್‌ಕ್ರೀಂ ನೀಡಿ ಸಂಭ್ರಮಿಸಲು ಉತ್ಸುಕರಾಗಿದ್ದೇವೆ’’ ಎಂದು ಪಬ್ಬಾಸ್‌ ಕೆÜಫೆ ಟ್ವೀಟ್‌ ಮಾಡಿದೆ.

Scroll to load tweet…

ಇದಕ್ಕೆ ಮಾಜಿ ಸಚಿವ ಅಶ್ವತ್ಥ ನಾರಾಯಣ ಕೂಡ ಧ್ವನಿಗೂಡಿಸಿದ್ದು, ಕೋಟ್ಯಂತರ ಭಾರತೀಯರ ಹೃದಯ ಗೆದ್ದ ಚಾಂಪಿಯನ್‌ಗಳೊಂದಿಗೆ ಐಸ್‌ಕ್ರೀಂ ಸವಿಯಲು ಪಬ್ಬಾಸ್‌ ಅತ್ಯುತ್ತಮ ಜಾಗ. ಭಾರತದ ವಿಜಯವನ್ನು ಸಂಭ್ರಮಿಸೋಣ’’ ಎಂದು ಟ್ವೀಟಿಸಿದ್ದಾರೆ.

Scroll to load tweet…

ಮಂಗಳೂರಿನ ಪಬ್ಬಾಸ್‌ ಐಡಿಯಲ್‌ ಕೆಫೆ ದಶಕಗಳಿಂದ ತಹರೇವಾರಿ, ಗುಣಮಟ್ಟದ ಐಸ್‌ಕ್ರೀಂಗಳಿಗೆ ಹೆಸರುವಾಸಿ. ಚಿತ್ರರಂಗದ ಬಹಳಷ್ಟುತಾರೆಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮಂಗಳೂರಿಗೆ ಬಂದು ಪಬ್ಬಾಸ್‌ ಐಸ್‌ಕ್ರೀಂ ಸವಿದಿದ್ದಾರೆ. ತನ್ನ ಅನನ್ಯ ರುಚಿಯೊಂದಿಗೆ ಪಬ್ಬಾಸ್‌ ಗ್ರಾಹಕರನ್ನು ಸೆಳೆಯುತ್ತಿದೆ. ಮಂಗಳೂರಿಗೆ ಭೇಟಿ ನೀಡಿದವರೆಲ್ಲ ಒಮ್ಮೆ ಪಬ್ಬಾಸ್‌ ಐಡಿಯಲ್‌ ಕೆಫೆಗೆ ಭೇಟಿ ನೀಡಿ ಐಸ್‌ಕ್ರೀಮ್‌ ಸವಿಯುವುದು ವಾಡಿಕೆಯಾಗಿದೆ. ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ನೆಚ್ಚಿನ ತಾಣವಾಗಿದೆ.