ಸೋಪು, ಎಣ್ಣೆ,ಆಹಾರ ಪದಾರ್ಥಗಳು ಸೇರಿದಂತೆ ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ FMCG ಕಂಪನಿಗಳು ಮುಂದಾಗಿದೆ. ಸೆಪ್ಟೆಂಬರ್‌ನಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಎಲ್ಲವೂ ದುಬಾರಿಯಾಗಲಿದೆ.
ನವದೆಹಲಿ (ಆ.10) ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಸೆಪ್ಟೆಂಬರ್ ತಿಂಗಳಿನಿಂದ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈ ಕುರಿತು FMCG ಕಂಪನಿಗಳು ಮಹತ್ವದ ಸಭೆ ನಡೆಸಿದೆ. ಮಧ್ಯಪ್ರಾಚ್ಯ ಯುದ್ಧ, ತೆರಿಗೆ ಹೆಚ್ಚಳ ಸೇರಿದಂತೆ ಹಲವು ಜಾಗತಿಕ ಸಂಕಷ್ಟಗಳಿಂದ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಅನಿವಾರ್ಯವಾಗಿ ದಿನಸಿ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಅನಿವಾರ್ಯ ಎಂದು FMCG ಹೇಳಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬೆಲೆ ಏರಿಕೆ
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಿನಸಿಗಳ ಬೆಲೆ ಏರಿಕೆ ಬಹುತೇಕ ಖಚಿತವಾಗಿದೆ. ಜೂನ್ ತ್ರೈಮಾಸಿಕದಲ್ಲಿ ಶೇಕಡಾ 2 ರಿಂದ 5ರಷ್ಟು ಏರಿಕೆ ಮಾಡಿದ್ದ FMCG ಕಂಪನಿಗಳು ಇದೀಗ ಮತ್ತೆ ಬೆಲೆ ಏರಿಕೆ ಮಾಡುತ್ತಿದೆ. ಬೆಲೆ ಏರಿಕೆ ಬಿಸಿಯಿಂದ ಮತ್ತೆ ಆರ್ಥಿಕ ಸಂಕಷ್ಟಗಳು ಎದುರಾಗಲಿದೆ. ಹೀಗಾಗಿ ಹಲವು ಕಂಪನಿಗಳು ಬೆಲೆ ಏರಿಕೆ ಬದಲು ಶ್ರಿಂಕ್‌ಫ್ಲೇಷನ್ ಮಾಡಲು ಮುಂದಾಗಿದೆ. ಅಂದರೆ ದರ ಹೆಚ್ಚಿಸದೆ ವಸ್ತುಗಳ ಪ್ರಮಾಣ ಕಡಿಮೆ ಮಾಡುವುದು. ಉದಾಹರಣೆಗೆ 50 ಗ್ರಾಂ ವಸ್ತುವಿಗೆ 20 ರೂಪಾಯಿ ಇದ್ದರೆ ಬೆಲೆ ಏರಿಕೆ ಮಾಡದೆ 20 ರೂಪಾಯಿಗೆ 40 ಗ್ರಾಂ ನೀಡುವುದು.
ಸಕ್ಕರೆ, ಪಾಮ್ ಆಯಿಲ್ ಬೆಲೆ ಏರಿಕೆ
ಸಕ್ಕರೆ, ಪಾಮ್ ಆಯಿಲ್ ಬೆಲೆ ಏರಿಕೆಯಾಗಿದೆ. ಹೀಗಾಗಿ ಬ್ರಿಟಾನಿಯಾ, ಡಾಬರ್ ಸೇರಿದಂತೆ ಪ್ರಮುಖ ಕಂಪನಿಗಳು ಬಿಸ್ಕೆಟ್ ಸೇರಿದಂತೆ ತಮ್ಮ ಉತ್ಪನ್ನಗಳ ಬೆಲೆ ಏರಿಕೆ ಅಥವಾ ಪ್ರಮಾಣ ಕಡಿತಕ್ಕೆ ಮುಂದಾಗಿದೆ. ಇದೀಗ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಬೆಲೆ ಏರಿಕೆ ಅಥವಾ ಶ್ರಿಂಕ್‌ಫ್ಲೇಷನ್ ಮಾಡಲಬೇಕಾಗಿದೆ ಎಂದು ಬ್ರಿಟಾನಿಯಾ ವ್ಯವಸ್ಥಾಪಕ ನಿರ್ದೇಶಕ ರಕ್ಷಿತ್ ಹರ್ಗಾವೆ ಹೇಳಿದ್ದಾರೆ. ಆಯುರ್ವೇದ ಹಾಗೂ ಗೃಹ ಬಳಕೆ ವಸ್ತುಗಳ ಮೂಲಕ ಭಾರತದ ಮಾರುಕಟ್ಟೆ ಆವರಿಸಿಕೊಂಡಿರುವ ಡಾಬರ್ ಇಂಡಿಯಾ ದರ ಹೆಚ್ಚಳ ಮಾಡಲು ಮುಂದಾಗಿದೆ.
ಗೋದ್ರೆಜ್ ಕನ್ಸೂಮರ್ ಪ್ರಾಡಕ್ಟ್ ಜೂನ್ ತ್ರೈಮಾಸಿಕದಲ್ಲಿ ಶೇಕಡಾ 5ರಷ್ಟು ಬೆಲೆ ಏರಿಕೆ ಮಾಡಿತ್ತು. ಕಚ್ಚಾ ತೈಲಗಳ ಬೆಲೆ ಏರಿಕೆಯಾಗಿ ಉತ್ಪಾದನೆ ವೆಚ್ಚ ಭಾರಿ ಹೆಚ್ಚಳವಾಗಿದೆ. ಸೋಪು, ಡಿಟರ್ಜೆಂಟ್ ಹಾಗೂ ಪ್ಯಾಕೇಂಜ್ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಗೋದ್ರೆಜ್ ಹೇಳಿದೆ. ಬೆಲೆ ಏರಿಕೆಯಾದರೂ ಭಾರತದಲ್ಲಿ FMCG ಉತ್ಪನ್ನಗಳ ಬೇಡಿಕೆ ಹೆಚ್ಚಿದೆ. ಹೀಗಾಗಿ ಮಾರಾಟ ಕುಸಿತ ಸಾಧ್ಯತೆಗಳು ಕಡಿಮೆ ಎಂದು ಕಂಪನಿಗಳು ಹೇಳಿವೆ. ಇಷ್ಟೇ ಅಲ್ಲ ಭಾರತ ಆರ್ಥಿಕತೆಯಲ್ಲಿ ಮುನ್ನುಗ್ಗುತ್ತಿರವುದರಿಂದ ಆರ್ಥಿಕ ಹಿಂಜರಿತ ಸಮಸ್ಯೆಗಳು ಸದ್ಯಕ್ಕೆ ಅಪ್ಪಳಿಸುವ ಸಾಧ್ಯತೆಗಳಿಲ್ಲ ಎಂದು ಹಲವು ಕಂಪನಿಗಳು ಅಭಿಪ್ರಾಯಪಟ್ಟಿದೆ.


