ಯುಪಿಐ ಸೇವೆ ಪ್ರಾರಂಭಿಸಿದ ಫ್ಲಿಪ್ ಕಾರ್ಟ್; ಈ ಆ್ಯಪ್ ಡೌನ್ಲೋಡ್ ಮಾಡೋದು ಹೇಗೆ?
ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಫ್ಲಿಪ್ ಕಾರ್ಟ್ ಈಗ ಡಿಜಿಟಲ್ ಪಾವತಿ ಕ್ಷೇತ್ರ ಪ್ರವೇಶಿಸಿದೆ. ಎಕ್ಸಿಸ್ ಬ್ಯಾಂಕ್ ಜೊತೆಗೆ ಸೇರಿ ಫ್ಲಿಪ್ ಕಾರ್ಟ್ ಯುಪಿಐ ಪ್ರಾರಂಭಿಸಿದೆ.
ನವದೆಹಲಿ (ಮಾ.4): ಜನಪ್ರಿಯ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಫ್ಲಿಪ್ ಕಾರ್ಟ್ ಈಗ ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದೆ. ಎಕ್ಸಿಸ್ ಬ್ಯಾಂಕ್ ಜೊತೆಗೆ ಸೇರಿ ಫ್ಲಿಪ್ ಕಾರ್ಟ್ ಈ ಹೊಸ ಸೇವೆ ಪ್ರಾರಂಭಿಸಿದೆ. ಫ್ಲಿಪ್ ಕಾರ್ಟ್ ಯುಪಿಐ ಬಳಸಿಕೊಂಡು ಬಳಕೆದಾರರು ಈಗ ಫ್ಲಿಪ್ ಕಾರ್ಟ್ ಅಪ್ಲಿಕೇಷನ್ ನಲ್ಲೇ ಆನ್ ಲೈನ್ ಪಾವತಿಗಳನ್ನು ಮಾಡಬಹುದು. ಹಾಗೆಯೇ ಯುಪಿಐ ಐಡಿ, ಫೋನ್ ಸಂಖ್ಯೆಗಳು ಅಥವಾ ಕ್ಯುಆರ್ ಕೋಡ್ ಬಳಸಿಕೊಂಡು ವ್ಯಾಪಾರಿಗಳು, ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಗೆ ಹಣ ಕಳುಹಿಸಬಹುದು. ಹಾಗೆಯೇ ವಿದ್ಯುತ್, ನೀರು ಸೇರಿದಂತೆ ವಿವಿಧ ಬಿಲ್ ಗಳನ್ನು ಪಾವತಿಸಲು ಕೂಡ ಈ ಅಪ್ಲಿಕೇಷನ್ ನಲ್ಲಿ ಅವಕಾಶವಿದೆ. ಇತ್ತೀಚೆಗೆ ಪೇಟಿಎಂ ಪೇಮೆಂಟ್ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಹೊಸ ಫಿನ್ ಟೆಕ್ ಸಂಸ್ಥೆಗಳು ಜನ್ಮ ತಾಳುತ್ತಿವೆ. ಫ್ಲಿಪ್ ಕಾರ್ಟ್ ಯುಪಿಐ ಈ ಕ್ಷೇತ್ರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ ಪೇ ಸೇರಿದಂತೆ ಇತರ ಯುಪಿಐ ಅಪ್ಲಿಕೇಷನ್ ಗಳಿಗೆ ಪ್ರಬಲ ಸ್ಪರ್ಧೆ ನೀಡುವ ಸಾಧ್ಯತೆಯಿದೆ.
ಫ್ಲಿಪ್ ಕಾರ್ಟ್ 50 ಕೋಟಿಗೂ ಅಧಿಕ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಹಾಗೆಯೇ 14 ಲಕ್ಷ ಮಾರಾಟಗಾರರನ್ನು ಕೂಡ ಒಳಗೊಂಡಿದೆ. ಹೀಗಿರುವಾಗ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಹಾಗೂ ಅಮೆಜಾನ್ ಪೇ ಮುಂತಾದ ಅನ್ಯ ಯುಪಿಐ ಪಾವತಿ ಆಪ್ ಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಫ್ಲಿಪ್ ಕಾರ್ಟ್ ಯುಪಿಐ ನೆರವು ನೀಡಲಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗಿನ ಒಪ್ಪಂದ ಕಡಿದುಕೊಂಡ ಪೇಟಿಎಂ; ಬಿಎಸ್ ಇ ಫೈಲ್ಲಿಂಗ್ ನಲ್ಲಿ ಮಾಹಿತಿ ಬಹಿರಂಗ
ಫ್ಲಿಪ್ ಕಾರ್ಟ್ ಯುಪಿಐ ಬಳಸೋದು ಹೇಗೆ?
*ಫ್ಲಿಪ್ ಕಾರ್ಟ್ ಆಪ್ ಹೊಸ ಆವೃತ್ತಿಯನ್ನು ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ನಿಂದ ಡೌನ್ಲೋಡ್ ಮಾಡಿ ಸ್ಥಾಪಿಸಿಕೊಳ್ಳಿ.
*ಆಪ್ ನಲ್ಲಿರುವ 'Flipkart UPI'ಹುಡುಕಿ ಅದರ ಮೇಲೆ ಟ್ಯಾಪ್ ಮಾಡಿ.
*'Add bank account'ಆಯ್ಕೆ ಮಾಡಿ.
*ಫ್ಲಿಪ್ ಕಾರ್ಟ್ ಯುಪಿಐ ಜೊತೆಗೆ ನೀವು ಲಿಂಕ್ ಮಾಡಲು ಬಯಸುವ ಬ್ಯಾಂಕ್ ಆಯ್ಕೆ ಮಾಡಿ.
*ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿ.
*ಒಮ್ಮೆ ಪರಿಶೀಲನೆ ಪೂರ್ಣಗೊಂಡ ಬಳಿಕ ಬಳಕೆದಾರರು ಫ್ಲಿಪ್ ಕಾರ್ಟ್ ಯುಪಿಐ ಅನ್ನು ಬಳಸಿಕೊಂಡು ಪಾವತಿಗಳನ್ನು ಮಾಡಬಹುದು.
ಪ್ರಾರಂಭದಲ್ಲಿ ಈ ಯುಪಿಐ ಸೇವೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ.
ಫ್ಲಿಪ್ ಕಾರ್ಟ್ ಯುಪಿಐ ಪ್ರಾರಂಭಿಸುವ ಮೂಲಕ ಡಿಜಿಟಲ್ ಪಾವತಿ ವಲಯದಲ್ಲಿ ತನ್ನ ಇರುವಿಕೆಯನ್ನು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ವಿಸ್ತರಿಸಿಕೊಳ್ಳುತ್ತಿದೆ. ಈ ಮೂಲಕ ಇ-ಕಾಮರ್ಸ್ ಕ್ಷೇತ್ರದಲ್ಲಿ ತನಗೆ ಪ್ರತಿಸ್ಪರ್ಧಿಯಾಗಿರುವ ಅಮೆಜಾನ್ ಗೆ ಸ್ಪರ್ಧೆ ನೀಡುತ್ತಿದೆ. ಸೂಪರ್ ಕಾಯಿನ್ಸ್, ಕ್ಯಾಶ್ ಬ್ಯಾಕ್, ಮೈಲ್ ಸ್ಟೋನ್ ಬಪ್ರಯೋಜನಗಳು ಹಾಗೂ ಬ್ರ್ಯಾಂಡ್ ವೋಚರ್ ಸೇರಿದಂತೆ ವಿವಿಧ ಸೌಲಭ್ಯಗಳು ಕೂಡ ಇದರಲ್ಲಿ ಲಭ್ಯವಿವೆ.
ಅಕ್ರಮ ಹಣ ವರ್ಗಾವಣೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ 5.49 ಕೋಟಿ ದಂಡ!
ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಸಂಕಷ್ಟಗಳ ಸುರಿಮಳೆ
ಈಗಾಗಲೇ ಅರ್‌ಬಿಐನ ನಿರ್ಬಂಧದ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಭಾರತದ ಫೈನಾನ್ಶಿಯಲ್ ಇಂಟಲಿಜೆನ್ಸ್ ಯುನಿಟ್ ಭಾರೀ ಮೊತ್ತದ ದಂಡ ವಿಧಿಸಿದೆ. ಅಕ್ರಮ ಹಣ ವರ್ಗಾವಣೆಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಾನೂನು ಜಾರಿ ಸಂಸ್ಥೆಗಳು ನೀಡಿರುವ ಮಾಹಿತಿಗಳಿಂದ ಸಾಬೀತಾಗಿರುವ ಕಾರಣ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಬರೋಬ್ಬರಿ 5.49 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ. ಈ ಬ್ಯಾಂಕ್‌ನ ಕೆಲವು ಘಟಕಗಳು ಮತ್ತು ಅವರ ವ್ಯಾಪಾರ ಜಾಲವು ಆನ್‌ಲೈನ್ ಗ್ಯಾಂಬ್ಲಿಂಗ್ ಸಂಘಟಿಸುವುದು ಮತ್ತು ಸುಗಮಗೊಳಿಸುವುದು ಸೇರಿದಂತೆ ಹಲವು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಹೇಳಲಾಗಿದೆ. ಇನ್ನು ಆರ್ ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನ ಪರವಾನಗಿ ರದ್ದು ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.