ಅಕ್ರಮ ಹಣ ವರ್ಗಾವಣೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ 5.49 ಕೋಟಿ ದಂಡ!
ಸರ್ಕಾರದ ಹೇಳಿಕೆಯ ಪ್ರಕಾರ, ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್-ಇಂಡಿಯಾ ಕಾನೂನು ಜಾರಿ ಸಂಸ್ಥೆಗಳಿಂದ ಮಾಹಿತಿ ಪಡೆದ ನಂತರ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗಳ ವ್ಯವಹಾರಗಳನ್ನು ಪರಿಶೀಲಿಸಲು ಆರಂಭಿಸಿತ್ತು.
ನವದೆಹಲಿ (ಮಾ.1): ಈಗಾಗಲೇ ಅರ್‌ಬಿಐನ ನಿರ್ಬಂಧದ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಭಾರತದ ಫೈನಾನ್ಶಿಯಲ್ ಇಂಟಲಿಜೆನ್ಸ್ ಯುನಿಟ್ ಭಾರೀ ಮೊತ್ತದ ದಂಡ ವಿಧಿಸಿದೆ. ಅಕ್ರಮ ಹಣ ವರ್ಗಾವಣೆಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಾನೂನು ಜಾರಿ ಸಂಸ್ಥೆಗಳು ನೀಡಿರುವ ಮಾಹಿತಿಗಳಿಂದ ಸಾಬೀತಾಗಿರುವ ಕಾರಣ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಬರೋಬ್ಬರಿ 5.49 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ. ಮಾರ್ಚ್ 1 ರಂದು ನೀಡಿದ ಹೇಳಿಕೆಯಲ್ಲಿ, ಹಣಕಾಸು ಸಚಿವಾಲಯವು ತನ್ನ ಹಣಕಾಸು ಗುಪ್ತಚರ ಘಟಕವು ಕಾನೂನು ಜಾರಿ ಸಂಸ್ಥೆಗಳಿಂದ ಮಾಹಿತಿ ಪಡೆದ ನಂತರ ಈಗಾಗಲೇ ಸಂಕಷ್ಟದಲ್ಲಿರಯವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ವ್ಯವಹಾರಗಳನ್ನು ಪರಿಶೀಲನೆ ಮಾಡಲು ಆರಂಭ ಮಾಡಿತ್ತು. ಈ ಬ್ಯಾಂಕ್‌ನ ಕೆಲವು ಘಟಕಗಳು ಮತ್ತು ಅವರ ವ್ಯಾಪಾರ ಜಾಲವು ಆನ್‌ಲೈನ್ ಗ್ಯಾಂಬ್ಲಿಂಗ್ ಸಂಘಟಿಸುವುದು ಮತ್ತು ಸುಗಮಗೊಳಿಸುವುದು ಸೇರಿದಂತೆ ಹಲವು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದೆ.
"ಇದಲ್ಲದೆ, ಈ ಅಕ್ರಮ ಕಾರ್ಯಾಚರಣೆಗಳಿಂದ ಬಂದ ಹಣವನ್ನು, ಅಂದರೆ ಅಪರಾಧದ ಆದಾಯವನ್ನು ಈ ಘಟಕಗಳು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನೊಂದಿಗೆ ನಿರ್ವಹಿಸುವ ಬ್ಯಾಂಕ್ ಖಾತೆಗಳ ಮೂಲಕ ರವಾನಿಸಲಾಗಿದೆ" ಎಂದು ಹೇಳಿಕೆ ತಿಳಿಸಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಲಿಖಿತ ಮತ್ತು ಮೌಖಿಕ ಸಲ್ಲಿಕೆಗಳನ್ನು ಪರಿಗಣಿಸಿದ ನಂತರ, FIU-IND ನಿರ್ದೇಶಕರು, ದಾಖಲೆಯಲ್ಲಿ ಲಭ್ಯವಿರುವ ಬೃಹತ್ ಮಾಹಿತಿಗಳ ಆಧಾರದ ಮೇಲೆ, ಪೇಟಿಎಂ ವಿರುದ್ಧದ ಆರೋಪಗಳು ರುಜುವಾತಾಗಿದೆ' ಎಂದು ತಿಳಿಸಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗಿನ ಒಪ್ಪಂದ ಕಡಿದುಕೊಂಡ ಪೇಟಿಎಂ; ಬಿಎಸ್ ಇ ಫೈಲ್ಲಿಂಗ್ ನಲ್ಲಿ ಮಾಹಿತಿ ಬಹಿರಂಗ
ಪೇಟಿಎಂ ಪಾವತಿಗಳ ಬ್ಯಾಂಕ್‌ಗೆ ದಂಡವನ್ನು ವಿಧಿಸುವ ಆದೇಶವು ಫೆಬ್ರವರಿ 15 ರಂದು ಬಂದಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ತನ್ನ ಕಾರ್ಯಾಚರಣೆ ಮುಕ್ತಾಯಗೊಳಿಸುವ ದಿನಾಂಕವನ್ನು ಫೆಬ್ರವರಿ 29ರ ಬದಲು ಮಾರ್ಚ್ 15ಕ್ಕೆ ಮುಂದೂಡಿಕೆ ಮಾಡುವ ಮುನ್ನ ಅಂದರೆ, ಫೆಬ್ರವರಿ 15 ರಂದೇ FIU-IND ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಭಾರೀ ಮೊತ್ತದ ದಂಡ ವಿಧಿಸಿದೆ.
ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಜಾಬ್ ಕಳೆದುಕೊಳ್ಳುವ ಭೀತಿ, ಪೇಟಿಎಂ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!