ಮಹಿಳಾ ಸಮ್ಮಾನ್ ಉಳಿತಾಯ ಖಾತೆ ತೆರೆದ ಒಂದೇ ಕುಟುಂಬದ 5 ತಲೆಮಾರಿನ ಮಹಿಳೆಯರು;ಅಪೂರ್ವ ಕ್ಷಣಕ್ಕೆ ಅಂಚೆ ಇಲಾಖೆ ಸಾಕ್ಷಿ
ಮಂಗಳೂರಿನಲ್ಲಿ ಒಂದೇ ಕುಟುಂಬದ ಐದು ತಲೆಮಾರಿನ ಮಹಿಳೆಯರು ಮಹಿಳಾ ಸಮ್ಮಾನ್ ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ. ಈ ಮೂಲಕ ಇಡೀ ದೇಶದಲ್ಲಿ ಈ ಯೋಜನೆಯಡಿ ಖಾತೆಗಳನ್ನು ತೆರೆದ ಐದು ತಲೆಮಾರಿನ ಏಕೈಕ ಕುಟುಂಬ ಎಂಬ ದಾಖಲೆ ಸೃಷ್ಟಿಸಿದ್ದಾರೆ.
ಮಂಗಳೂರು (ಆ.8): ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (ಎಂಎಸ್ ಎಸ್ ಸಿ) ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಗಳಿಸುತ್ತಿದೆ. ಹೀಗಿರುವಾಗ ಮಂಗಳೂರಿನಲ್ಲಿ ಈ ಯೋಜನೆ ಐತಿಹಾಸಿಕ ಕ್ಷಣಗಳಿಗೆ ಮುನ್ನುಡಿಯಾಯಿತು. ಒಂದೇ ಕುಟುಂಬದ ಐದು ತಲೆಮಾರಿನ ಮಹಿಳೆಯರು ಎಂಎಸ್ ಎಸ್ ಸಿ ಖಾತೆಗಳನ್ನು ತೆರೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮಂಗಳೂರು ಮೂಲದ ಈ ಕುಟುಂಬದ ಮುತ್ತಜ್ಜಿಗೆ 103 ವರ್ಷವಾದ್ರೆ ಅವರ ಮರಿ ಮೊಮ್ಮಗಳಿಗೆ ಮೂರು ವರ್ಷ. ಕುಟುಂಬದ ಈ ಹಿರಿಯ ಹಾಗೂ ಕಿರಿಯ ಸದಸ್ಯೆಯರ ಜೊತೆಗೆ ಇನ್ನೂ ಮೂವರು ಮಹಿಳೆಯರು ಭಾರತೀಯ ಅಂಚೆ ಇಲಾಖೆಯ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (ಎಂಎಸ್ ಎಸ್ ಸಿ) ಖಾತೆಗಳನ್ನು ತೆರೆದಿದ್ದಾರೆ. ಮಂಗಳೂರು ಸಮೀಪದ ಕಿನ್ನಿಗೋಳಿ ಉಪ ಅಂಚೆ ಕಚೇರಿಯಲ್ಲಿ ಆಗಸ್ಟ್ 3ರಂದು ಖಾತೆಗಳನ್ನು ತೆರೆಯುವ ಮೂಲಕ ಇಡೀ ದೇಶದಲ್ಲಿ ಈ ಯೋಜನೆಯಡಿ ಖಾತೆಗಳನ್ನು ತೆರೆದ ಐದು ತಲೆಮಾರಿನ ಏಕೈಕ ಕುಟುಂಬ ಎಂಬ ದಾಖಲೆ ಸೃಷ್ಟಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಘೋಷಿಸಿದ್ದರು.
ಮಂಗಳೂರಿನ ಕುಪ್ಪೆಪದವು ನಿವಾಸಿ ಸೀತಾ ಪೂಜಾರ್ತಿ (103),ಅವರ ಮಗಳು ಕೈಕಂಬ ನಿವಾಸಿ ಸುಂದರಿ ಪೂಜಾರ್ತಿ (72), ಮೊಮ್ಮಗಳು ಉಲ್ಲಾಯಿ ಬೆಟ್ಟು ಯಮುನಾ ಪೂಜಾರ್ತಿ (50), ಮರಿ ಮೊಮ್ಮಗಳು ಪವಿತ್ರಾ ವಿ ಅಮಿನ್ (33) ಹಾಗೂ ಮರಿ ಮೊಮ್ಮಗಳ ಮಗಳು ದಿತ್ಯಾ ವಿ ಅಮಿನ್ (3) ಎಂಎಸ್ ಎಸ್ ಸಿ ಅಡಿಯಲ್ಲಿ ಉಳಿತಾಯ ಖಾತೆಗಳನ್ನು ತೆರೆದಿದ್ದಾರೆ. ಇನ್ನು ಈ ಸಾಧನೆಯ ಸಂಪೂರ್ಣ ಶ್ರೇಯಸ್ಸು ಮಂಗಳೂರು ಅಂಚೆ ವಿಭಾಗದ ವ್ಯಾಪ್ತಿಯ ಕಿನ್ನಿಗೋಳಿ ಉಪ ಅಂಚೆ ಕಚೇರಿಯ ಸಿಬ್ಬಂದಿ ವರ್ಗಕ್ಕೆ ಸಲ್ಲುತ್ತದೆ. ಇಲ್ಲಿನ ಸಿಬ್ಬಂದಿ ಹಿರಿಯ ಮಹಿಳೆಯ ಮನೆಗೆ ಭೇಟಿ ನೀಡಿರೋದು ಮಾತ್ರವಲ್ಲ, ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ಅವರೆಲ್ಲರನ್ನೂ ಒಟ್ಟಿಗೆ ಅಂಚೆ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ ಕೂಡ.
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪತ್ರ ಖಾತೆ ತೆರೆದ ಸಚಿವೆ ಸ್ಮೃತಿ ಇರಾನಿ; ಈ ಖಾತೆ ತೆರೆಯಲು ಹೀಗೆ ಮಾಡಿ
'ಈ ವಿಶೇಷ ಸಾಧನೆಗೆ ಕಾರಣವಾದ ಕುಟುಂಬಕ್ಕೆ ಗೌರವ ಸಲ್ಲಿಕೆಯ ಸ್ವರೂಪದಲ್ಲಿ ಮಹಿಳೆಯರಿಗೆ ಸೀರೆಗಳನ್ನು ಉಡುಗೊರೆಯಾಗಿ ನೀಡಿರುವ ಜೊತೆಗೆ ಸಮೀಪದ ಹೋಟೆಲ್ ಗೆ ಕರೆದೊಯ್ದು ಸತ್ಕರಿಸಲಾಯಿತು' ಎಂದು ಕಿನ್ನಿಗೋಳಿ ಅಂಚೆ ಕಚೇರಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮುಖ್ಯಸ್ಥರಾದ ರಘುನಾಥ್ ಕಾಮತ್ ತಿಳಿಸಿದ್ದಾರೆ. ಅಂಚೆ ಇಲಾಖೆಯಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಘುನಾಥ್ ಕಾಮತ್, ಎಂಎಸ್ ಎಸ್ ಸಿ ಯೋಜನೆ ಬಗ್ಗೆ ಮನೆ ಬಾಗಿಲಿಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಇದೇ ರೀತಿ ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲೇ ಅವರು ಪವಿತ್ರಾ ಅವರನ್ನು ಅವರ ಮನೆಯಲ್ಲಿ ಭೇಟಿಯಾಗುತ್ತಾರೆ ಹಾಗೂ ಅವರಿಗೆ ಈ ಯೋಜನೆಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುತ್ತಾರೆ.
'ಕುಟುಂಬದಲ್ಲಿನ ಇತರ ಮಹಿಳೆಯರ ಬಗ್ಗೆ ನಾನು ಮಾಹಿತಿ ಕೇಳಿದೆ. ಆಗ ಆಕೆ ನನಗೆ ಎಲ್ಲ ಮಾಹಿತಿಗಳನ್ನು ನೀಡಿದರು. ಆಗ ನಾವು ಅವರೆಲ್ಲರೂ ಖಾತೆಗಳನ್ನು ತೆರೆಯುವಂತೆ ವ್ಯವಸ್ಥೆ ಮಾಡುವ ಬಗ್ಗೆ ನಿರ್ಧರಿಸಿದೆವು' ಎಂದು ರಘನಾಥ್ ಕಾಮತ್ ತಿಳಿಸಿದ್ದಾರೆ.
ಕೆಲಸವಿಲ್ಲದ ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ಶೇಂಗಾ ಚಿಕ್ಕಿ
'ಈ ಯೋಜನೆಯಲ್ಲಿನ ಅಧಿಕ ಬಡ್ಡಿದರ ಹಾಗೂ ಉಳಿತಾಯಕ್ಕೆ ಸಂಬಂಧಿಸಿ ಇದು ಬಿಗಿಯಾದ ನಿಯಮಗಳನ್ನು ಹೊಂದಿರದ ಕಾರಣ ನನ್ನ ಕುಟುಂಬದ ಎಲ್ಲ ಮಹಿಳೆಯರು ಈ ಯೋಜನೆಯಿಂದ ಪ್ರಯೋಜನ ಪಡೆಯಬೇಕೆಂದು ನಾನು ಬಯಸಿದ್ದೆ. ಅಂಚೆ ಕಚೇರಿ ಸಿಬ್ಬಂದಿ 40 ಕಿ.ಮೀ. ದೂರದಲ್ಲಿ ನೆಲೆಸಿರುವ ನನ್ನ ಮುತ್ತಜ್ಜಿಯನ್ನು ಅಂಚೆ ಕಚೇರಿಗೆ ಕರೆ ತರಲು ನೆರವು ನೀಡಿದರು' ಎಂದು ಗೃಹಿಣಿಯಾಗಿರುವ ಪವಿತ್ರಾ ತಿಳಿಸಿದ್ದಾರೆ. ಪವಿತ್ರಾ ಅವರ ಮುತ್ತಜ್ಜಿ ಸೀತಾ ಕೃಷಿಕರಾಗಿದ್ದು, ಈಗ ತಮ್ಮ ಮಗ ಹಾಗೂ ಅವರ ಕುಟುಂಬದ ಜೊತೆಗೆ ವಾಸಿಸುತ್ತಿದ್ದಾರೆ.
'ಎಂಎಸ್ಎಸ್ ಸಿ ಮೂಲಕ ಭಾರತೀಯ ಅಂಚೆ ಇಲಾಖೆ ಒಂದೇ ಬಾರಿಗೆ ಐದು ತಲೆಮಾರಿನವರನ್ನು ತಲುಪಿದೆ. ಇದರ ಎಲ್ಲ ಶ್ರೇಯಸ್ಸು ರಘನಾಥ್ ಕಾಮತ್ ಅವರಿಗೆ ಸಲ್ಲುತ್ತದೆ. ಅವರು ಉಳಿತಾಯ ಖಾತೆಗಳನ್ನು ತೆರೆಯುವಂತೆ ಮಹಿಳೆಯರನ್ನು ಒಪ್ಪಿಸಿದ್ದರು' ಎನ್ನುತ್ತಾರೆ ಮಂಗಳೂರು ವಿಭಾಗ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕರಾದ ಸುಧಾಕರ್ ಮಲ್ಯ.