ನವದೆಹಲಿ(ಫೆ.02): ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಮ್ಯೂಸಿಯೋಲಜಿ ಹಾಗೂ ಪುರಾತತ್ವ ಶಾಸ್ತ್ರ ಅಧ್ಯಯನಕ್ಕೆ, ಐಐಟಿ ಹಾಗೂ ಐಐಎಂ ಮಾದರಿಯಲ್ಲಿ ಸಂಸ್ಕೃತಿ ಇಲಾಖೆಯಡಿ ಇಂಡಿಯನ್‌ ಇನ್ಸಿಟಿಟ್ಯೂಟ್‌ ಆಫ್‌ ಹೆರಿಟೇಜ್‌ ಆ್ಯಂಡ್‌ ಕನ್ಸರ್‌ವೇಶನ್‌ ಸಂಸ್ಥೆ ಸ್ಥಾಪನೆ ಮಾಡುವುದಾಗಿ ನಿರ್ಮಲಾ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ. ಇದಕ್ಕೆ ಡೀಮ್ಡ್‌ ಯೂನಿವರ್ಸಿಟಿ ಸ್ಥಾನಮಾನ ನೀಡಲಾಗುವುದು ಎಂದಿದ್ದಾರೆ.

ಜತೆಗೆ ಬುಡಕಟ್ಟು ಪ್ರವಾಸೋದ್ಯಮದ ಅಭಿವೃದ್ಧಿಗೆ ರಾಂಚಿಯಲ್ಲಿ ಬುಡಕಟ್ಟು ಮ್ಯೂಸಿಯಂ ಸ್ಥಾಪನೆ ಮಾಡುವ ಪ್ರಸ್ತಾಪ ಇದೆ. ವೇಳೆ ಪುರಾತತ್ವ ಸ್ಥಳಗಳಾದ ಹರ್ಯಾಣದ ರಾಗೀಘಡಿ, ಉತ್ತರ ಪ್ರದೇಶದ ಹಸ್ತನಾಪುರ, ಅಸ್ಸಾಂನ ಶಿವ ಸಾಗರ, ಗುಜರಾತ್‌ನ ಧೋಲವಿರ ಹಾಗೂ ತಮಿಳುನಾಡಿನ ಅದಿಚನ್ನಲೂರ್‌ ಅನ್ನು ಪಾರಂಪರಿಕ ತಾಣಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುಜರಾರ್‌ನ ಅಹ್ಮದಾಬಾದ್‌ನಲ್ಲಿರುವ ಹರಪ್ಪಾ ನಾಗರೀಕತೆ ಕಾಲದ ಕಡಲು ನಿವೇಶನವನ್ನು ಹಡಗು ಸಚಿವಾಲಯದಡಿ ಕಡಲು ಮ್ಯೂಸಿಎಂ ಆಗಿ ಪರಿವರ್ತಿಸಲಾಗುವುದು. ದೇಶಾದ್ಯಂತ ನಾಲ್ಕು ಮ್ಯೂಸಿಎಂಗಳನ್ನು ಅಭಿವೃದ್ಧಿ ಪಡಿಸಿ ವಿಶ್ವ ದರ್ಜೆಗೇರಿಸಲಾಗುವುದು ಎಂದು ಹೇಳಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವಾಲಯಕ್ಕೆ ಅನುದಾನ ಹೆಚ್ಚಿಸಲಾಗಿದ್ದು, ಎರಡೂ ಇಲಾಖೆಗೆ ಕ್ರಮವಾಗಿ 3,150 ಕೋಟಿ ರು. ಹಾಗೂ 2,500 ಕೋಟಿ ರು. ಮೀಸಲಿಡಲಾಗಿದೆ.