ನವದೆಹಲಿ(ಫೆ.02): 2020​-21ನೇ ಸಾಲಿನಲ್ಲಿ ರಕ್ಷಣಾ ಬಜೆಟ್‌ಗೆ ಕೇಂದ್ರ ಸರ್ಕಾರ 3.37 ಲಕ್ಷ ಕೋಟಿ ರು.ಗಳನ್ನು ಮೀಸಲಿಟ್ಟಿದೆ. ಕಳೆದ ವರ್ಷ ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ಗೆ 3.18 ಲಕ್ಷ ಕೋಟಿ ರು.ಗಳನ್ನು ನೀಡಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ರಕ್ಷಣಾ ಬಜೆಟ್‌ನ ಗಾತ್ರ ಶೇ.5.8 ರಷ್ಟು ಏರಿಕೆ ಆಗಿದೆ.

ರಕ್ಷಣಾ ಬಜೆಟ್‌ಗೆ ಒದಗಿಸಿದ 3.37 ಲಕ್ಷ ಕೋಟಿ ರು. ಪೈಕಿ ಹೊಸ ಶಸ್ತ್ರಾಸ್ತ್ರಗಳು, ವಿಮಾನ, ಯುದ್ಧ ಹಡಗುಗಳು ಹಾಗೂ ಇನ್ನಿತರ ರಕ್ಷಣಾ ಸಾಮಗ್ರಿಗಳ ಖರೀದಿಗೆ 1.18 ಲಕ್ಷ ಕೋಟಿ ರು. ಬಳಕೆ ಆಗಲಿದೆ. ಸಿಬ್ಬಂದಿಯ ವೇತನಗಳು ಮತ್ತು ಸೇನಾ ನೆಲೆಗಳ ನಿರ್ವಹಣೆ ಸೇರಿದಂತೆ ಆದಾಯ ವೆಚ್ಚಕ್ಕೆ 2.09 ಲಕ್ಷ ಕೋಟಿ ರು. ಮೀಸಲಿಡಲಾಗಿದೆ.

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ಯೋಧರು ಹಾಗೂ ರಕ್ಷಣಾ ಸಿಬ್ಬಂದಿಯ ಪಿಂಚಣಿಗಾಗಿ 1.33 ಲಕ್ಷ ಕೋಟಿ ರು.ಗಳನ್ನು ಪ್ರತ್ಯೇಕವಾಗಿ ಒದಗಿಸಲಾಗಿದೆ.

ಸೇನೆಯ ಆಧುನಿಕರಣಕ್ಕಾಗಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮೂರು ಸೇನಾ ಪಡೆಗಳ ಮುಖ್ಯಸ್ಥರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದವು. ಚೀನಾ ತನ್ನ ಸೇನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ದೇಶದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂದು ನೋಡುವುದಾದರೆ ಈಗ ನೀಡಿರುವ ಅನುದಾನ ಸಮಾಧಾನ ತಂದಿದೆ ತಜ್ಞರು ಅಭಿಪ್ರಾಯಟ್ಟಿದ್ದಾರೆ.