ಆದಾಯ ತೆರಿಗೆ ಫೈಲ್ ಮಾಡುವವರು ಇನ್ಮುಂದೆ ದುಬಾರಿ ಫೀಸ್ ಕೊಡಬೇಕಾಗಿಲ್ಲ. ಇದೀಗ ಮುಕೇಶ್ ಅಂಬಾನಿಯ ಜಿಯೋಫೈನಾನ್ಸ್ ಆ್ಯಪ್ಲಿಕೇಶನ್‌ನಲ್ಲಿ ಕೇವಲ 24 ರೂಪಾಯಿ ಪಾವತಿಸಿ ಟ್ಯಾಕ್ಸ್ ಫೈಲ್ ಮಾಡಬಹುದು. 

ಮುಂಬೈ (ಆ.11) ಭಾರತದಲ್ಲಿ 2.5 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ಆದಾಯಗಳಿಸುವ ಎಲ್ಲರೂ ಆದಾಯ ತೆರಿಗೆ ಸಲ್ಲಿಕೆ ಮಾಡಬೇಕು. 12 ಲಕ್ಷ ರೂಪಾಯಿ ಆದಾಯದ ವರೆಗೆ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಆದರೂ ಟ್ಯಾಕ್ಸ್ ಫೈಲ್ ಮಾಡಲೇಬೇಕು. ಪ್ರತಿ ವರ್ಷ ಆದಾಯ ತೆರಿಗೆ ಸಲ್ಲಿಕೆ ಮಾಡುವಾಗ ಬಹುತೇಕರು ದುಬಾರಿ ಫೀಸ್ ನೀಡಿ ಟ್ಯಾಕ್ಸ್ ಫೈಲ್ ಮಾಡುತ್ತಾರೆ. ಆದರೆ ಇನ್ನುಮುಂದೆ ಈ ಸಮಸ್ಯೆ ಇಲ್ಲ. ಇದೀಗ ಮುಕೇಶ್ ಅಂಬಾನಿಯ ಜಿಯೋಫೈನಾನ್ಸ್ ಆ್ಯಪ್ಲಿಕೇಶನ್ ಇನ್‌ಕಮ್ ಟ್ಯಾಕ್ಸ್ ಫೈಲ್ ಮಾಡುವವರಿಗೆ ಗುಡ್ ನ್ಯೂಸ್ ನೀಡಿದೆ. ಜಿಯೋಫೈನಾನ್ಸ್ ಆ್ಯಪ್‌ನಲ್ಲಿ ಕೇವಲ 24 ರೂಪಾಯಿಗೆ ಟ್ಯಾಕ್ಸ್ ಫೈಲ್ ಮಾಡುವ ಅವಕಾಶ ನೀಡಿದೆ.

ಟ್ಯಾಕ್ಸ್ ಸಬ್ಸಿಡಿ ಸಹಭಾಗಿತ್ವದಲ್ಲಿ ಅಭಿವೃದ್ಧಿ

ಜಿಯೋಫೈನಾನ್ಸ್ ಈ ಸೇವೆಯಿಂದ ಭಾರತದಲ್ಲಿ ತೆರಿಗೆದಾರರಿಗೆ ತೆರಿಗೆ ಫೈಲಿಂಗ್ ಮತ್ತು ಹಣಕಾಸು ಯೋಜನೆ ತುಂಬಾ ಸುಲಭವಾಗಲಿದೆ. ಜಿಯೋ-ಫೈನಾನ್ಸ್ ಅಪ್ಲಿಕೇಶನ್ ತೆರಿಗೆ ಫೈಲಿಂಗ್ ಮತ್ತು ತೆರಿಗೆ ನಿರ್ವಹಣೆಗಾಗಿ ವೈಶಿಷ್ಟ್ಯಗಳನ್ನು ಹೊಂದಿರುವ ಮಾಡ್ಯೂಲ್ ಪ್ರಾರಂಭಿಸಿದೆ. ಕೇವಲ 24 ರೂ.ಗಳ ಬೆಲೆಯಲ್ಲಿ ಪ್ರಾರಂಭವಾಗುವ ಈ ಮಾಡ್ಯೂಲ್‌ಗಳು ಜಿಯೋಫೈನಾನ್ಸ್ ಅಪ್ಲಿಕೇಶನ್‌ನಲ್ಲಿ ಗ್ರಾಹಕರಿಗೆ ಲಭ್ಯವಿದೆ. ಜಿಯೋಫೈನಾನ್ಸ್, ಈ ಹೊಸ ವೈಶಿಷ್ಟ್ಯವನ್ನು 'ಟ್ಯಾಕ್ಸ್ ಸಬ್ಸಿಡಿ' ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಟ್ಯಾಕ್ಸ್ ಸಬ್ಸಿಡಿ, ತನ್ನ ಆನ್ಲೈನ್ ತೆರಿಗೆ ಫೈಲಿಂಗ್ ಮತ್ತು ಸಲಹಾ ಸೇವೆಗೆ ಹೆಸರುವಾಸಿಯಾಗಿದೆ.

ಎರಡು ವೈಶಿಷ್ಠ ಮಾಡ್ಯೂಲ್

ಈ ಮಾಡ್ಯೂಲ್, ಎರಡು ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ - ತೆರಿಗೆ ಯೋಜಕ ಮತ್ತು ತೆರಿಗೆ ಫೈಲಿಂಗ್. ತೆರಿಗೆ ಫೈಲಿಂಗ್ ಸೌಲಭ್ಯವನ್ನು ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಗಳ ನಡುವಿನ ಗೊಂದಲವನ್ನು ನಿವಾರಿಸಲು ವಿನ್ಯಾಸಗೊಳಿಸಲಾಗಿದೆ. ಇದು 80 ಸಿ ಮತ್ತು 80 ಡಿ ನಂತಹ ವಿಭಾಗಗಳ ಅಡಿಯಲ್ಲಿ ತೆರಿಗೆಯನ್ನು ಲೆಕ್ಕಹಾಕುವ ಮೂಲಕ ತೆರಿಗೆ ಉಳಿಸಲು ಗ್ರಾಹಕರಿಗೆ ಸಹಾಯ ಮಾಡುತ್ತದೆ. ಇದು ಬಳಸಲು ತುಂಬಾ ಸರಳ. ಇದು ದುಬಾರಿ ಮಧ್ಯವರ್ತಿಗಳ ಅವಲಂಬನೆಯನ್ನು ತಪ್ಪಿಸುತ್ತದೆ.

ಎರಡನೆಯ ವೈಶಿಷ್ಟ್ಯವೆಂದರೆ ತೆರಿಗೆ ಯೋಜಕ. ಇದು ಭವಿಷ್ಯದ ತೆರಿಗೆ ಹೊಣೆಗಾರಿಕೆಗಳನ್ನು ಅಂದಾಜು ಮಾಡಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾಡ್ಯೂಲ್ ಅಡಿಯಲ್ಲಿ, ಬಳಕೆದಾರರು ಸ್ವಯಂ ಫೈಲಿಂಗ್ ಅಥವಾ ತಜ್ಞರ ನೆರವಿನ ಫೈಲಿಂಗ್ ಮೂಲಕ ತೆರಿಗೆ ಫೈಲಿಂಗ್ ಅನ್ನು ಆಯ್ಕೆ ಮಾಡಬಹುದು. ಅಪ್ಲಿಕೇಶನ್‌ನಲ್ಲಿ ಸ್ವಯಂ-ತೆರಿಗೆ ಫೈಲಿಂಗ್ ಮಾಡ್ಯೂಲ್ 24 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ತೆರಿಗೆ ತಜ್ಞರ ಸಹಾಯದಿಂದ ತೆರಿಗೆ ಫೈಲಿಂಗ್ ಸೌಲಭ್ಯವು 999 ರೂ.ಗಳಿಂದ ಪ್ರಾರಂಭವಾಗುತ್ತದೆ.

ಅಪ್ಲಿಕೇಶನ್ ಮೂಲಕ, ಬಳಕೆದಾರರು ಐಟಿಆರ್ ಸಲ್ಲಿಸಿದ ನಂತರ ರಿಟರ್ನ್‌ಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಬಹುದು. ಮರುಪಾವತಿಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ಯಾವುದೇ ತೆರಿಗೆ ಸಂಬಂಧಿತ ನೋಟಿಸ್‌ನ ಎಚ್ಚರಿಕೆಗಳನ್ನು ವೀಕ್ಷಿಸಬಹುದು. ಮಾಡ್ಯೂಲ್‌ನಲ್ಲಿ ಆದಾಯವನ್ನು ನಮೂದಿಸುವುದರಿಂದ ಹಿಡಿದು ದಾಖಲೆಗಳನ್ನು ಅಪ್ಲೋಡ್ ಮಾಡುವುದು ಮತ್ತು ಸರಿಯಾದ ತೆರಿಗೆ ಆಡಳಿತವನ್ನು ಆಯ್ಕೆ ಮಾಡುವವರೆಗೆ, ಇಡೀ ಪ್ರಕ್ರಿಯೆಯು ಸರಳವಾಗಿದೆ ಮತ್ತು ಪ್ರತಿ ಹಂತದಲ್ಲೂ ಗ್ರಾಹಕರಿಗೆ ಮಾರ್ಗದರ್ಶನ ನೀಡುತ್ತದೆ.

ತೆರಿಗೆ ಸಲ್ಲಿಕೆ ಸುಲಭ

ತೆರಿಗೆಗಳನ್ನು ಸಲ್ಲಿಸುವ ಗಡುವು ವೇಗವಾಗಿ ಸಮೀಪಿಸುತ್ತಿರುವುದರಿಂದ, ತೆರಿಗೆ ಫೈಲಿಂಗ್‌ಗೆ ಸಂಬಂಧಿಸಿದ ಎಲ್ಲಾ ಸಂಕೀರ್ಣತೆಗಳನ್ನು ತೆಗೆದುಹಾಕುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಜಿಯೋ ಫೈನಾನ್ಷಿಯಲ್ ನಿರ್ದೇಶಕ ಹಿತೇಶ್ ಸೇಥಿಯಾ ಹೇಳಿದ್ದಾರೆ. ಗ್ರಾಹಕರಿಗೆ ಪರಿಣಾಮಕಾರಿ ತೆರಿಗೆ ಯೋಜನಾ ಸೇವೆಗಳನ್ನು ಒದಗಿಸುವುದು ಮುಖ್ಯ, ಇದರಿಂದ ಅವರು ಹಣಕಾಸು ವರ್ಷದುದ್ದಕ್ಕೂ ತಮ್ಮ ತೆರಿಗೆ ಹೊಣೆಗಾರಿಕೆಯನ್ನು ಉತ್ತಮವಾಗಿ ತಿಳಿದುಕೊಳ್ಳಬಹುದು. ಈ ಮಾಡ್ಯೂಲ್‌ನ ಪ್ರಾರಂಭವು ಪ್ರವೇಶಿಸಬಹುದಾದ, ಡಿಜಿಟಲ್-ಮೊದಲ ಹಣಕಾಸು ಪರಿಹಾರಗಳನ್ನು ಒದಗಿಸುವ ನಮ್ಮ ಪ್ರಯತ್ನಕ್ಕೆ ಮತ್ತೊಂದು ಆಯಾಮವನ್ನು ಸೇರಿಸುತ್ತದೆ ಎಂದಿದ್ದಾರೆ.