ನವದೆಹಲಿ[ಜು.08]: ಕಡಿಮೆ ಆದಾಯ ಹೊಂದಿದ್ದರೂ ಭಾರಿ ಮೊತ್ತವನ್ನು ಖರ್ಚು ಮಾಡುವವರ ಮೇಲೆ ಇದೀಗ ಆದಾಯ ತೆರಿಗೆ ಇಲಾಖೆ ಹದ್ದಿನಗಣ್ಣು ಇಡಲು ಮುಂದಾಗಿದೆ. ವಿದೇಶ ಪ್ರವಾಸದ ಮೇಲೆ 2 ಲಕ್ಷ ರು.ಗೂ ಅಧಿಕ ವೆಚ್ಚ ಮಾಡುವವರು ಅಥವಾ ಒಂದು ವರ್ಷದಲ್ಲಿ 1 ಕೋಟಿ ರು. ಹಣವನ್ನು ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡುವವರು ಅಥವಾ ವರ್ಷವೊಂದರಲ್ಲಿ 1 ಲಕ್ಷ ರು. ಹಣವನ್ನು ವಿದ್ಯುಚ್ಛಕ್ತಿ ಶುಲ್ಕವಾಗಿ ಪಾವತಿಸುವವರು ಆದಾಯ ಕಡಿಮೆ ಇದ್ದರೂ ರಿಟರ್ನ್ ಸಲ್ಲಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ವಿನಾಯಿತಿ ಇರುವುದಕ್ಕಿಂತ ಹೆಚ್ಚು ಆದಾಯ ಹೊಂದಿದವರು ಮಾತ್ರವೇ ರಿಟರ್ನ್ ಸಲ್ಲಿಸಬೇಕು ಎಂಬ ನಿಯಮ ಇದೆ. ಅದರ ಜತೆಗೆ ಹೆಚ್ಚು ಖರ್ಚು ಮಾಡುವ ವ್ಯಕ್ತಿಗಳು ರಿಟರ್ನ್ ಸಲ್ಲಿಕೆ ಮಾಡಬೇಕು ಎಂಬ ಅಂಶವನ್ನು ಸೇರಿಸಲು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139ಕ್ಕೆ ಸೇರ್ಪಡೆಗೊಳಿಸುವ ಅಂಶ ಬಜೆಟ್ ದಾಖಲೆಗಳಲ್ಲಿ ಇದೆ.

1 ಕೋಟಿ ರು. ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಒಂದು ಅಥವಾ ಹೆಚ್ಚು ಕರೆಂಟ್ ಅಕೌಂಟ್‌ಗಳಲ್ಲಿ ಠೇವಣಿ ಮಾಡಿದವರು ಅಥವಾ ತಮಗೆ ಅಥವಾ ಬೇರೊಬ್ಬರ ವಿದೇಶ ಪ್ರವಾಸಕ್ಕೆ 2 ಲಕ್ಷ ರು.ಗಿಂತ ಅಧಿಕ ವೆಚ್ಚ ಮಾಡಿದವರು ಅಥವಾ 1 ಲಕ್ಷ ರು. ಮೇಲ್ಪಟ್ಟು ವಿದ್ಯುಚ್ಛಕ್ತಿ ಬಿಲ್ ಪಾವತಿಸಿದವರು ತೆರಿಗೆ ರಿಟರ್ನ್ ಸಲ್ಲಿಕೆ ಮಾಡಬೇಕು.

ಅವರು ತೆರಿಗೆ ವಿನಾಯಿತಿ ಹೊಂದಿರುವ ಆದಾಯವನ್ನು ಹೊಂದಿದ್ದರೂ ರಿಟರ್ನ್ ಸಲ್ಲಿಸಬೇಕು ಎಂಬ ಪ್ರಸ್ತಾಪ ಬಜೆಟ್ ದಾಖಲೆಗಳಲ್ಲಿದೆ. ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್‌ನಿಂದ ವಿನಾಯಿತಿ ಬಯ ಸುವವರು ಕೂಡ ರಿಟರ್ನ್ ಸಲ್ಲಿಸಬೇಕು ಎಂಬ ಅಂಶವೂ ಇದೆ.