ರೈತರಿಗಾಗಿ ವಿಶೇಷ ಕೋರ್ಸ್: ಚಕ್ರವರ್ತಿ ಸೂಲಿಬೆಲೆ ಲೋಕಾರ್ಪಣೆ
ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿ ವಿನ್ಯಾಸಗೊಳಿಸಿರುವ ವಿಶೇಷ ಕೋರ್ಸ್ ಆಪ್‌ನನ್ನು ಲೋಕಾಪರ್ಣೆ ಮಾಡಲಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ
ಬೆಂಗಳೂರು, (ಸೆ.28): ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿ ವಿನ್ಯಾಸಗೊಳಿಸಿರುವ ವಿಶೇಷ ಕೋರ್ಸ್ ಗಳನ್ನು ಲೋಕಾರ್ಪಣೆ ಮಾಡಿದರು.
ಬೆಂಗಳೂರಿನ ಶಾಂತಿನಗರದಲ್ಲಿರುವ ಇಂಡಿಯನ್ ಮನಿ ಡಾಟ್ ಕಾಂನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಎದುರಾದ ಸಂದರ್ಭದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳೂ ನೆಲಕಚ್ಚಿದರೂ ಸಹಿತ ಕೃಷಿ ವಲಯ ನಮ್ಮ ದೇಶದ ಜನರ ಕೈ ಹಿಡಿಯತು. ಕೃಷಿ ಪ್ರಧಾನ ದೇಶ ಎನಿಸಿಕೊಳ್ಳವ ಭಾರತ ಈ ಕ್ಷೇತ್ರದಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲು ಸಾಧ್ಯವಿದೆ ಎಂದರು.
ಕೃಷಿ ಕಾಯಿದೆಯ ನಿಜವಾದ ಪರಿಣಾಮಗಳೇನು? ಬಿಚ್ಚಿಟ್ಟ ಕಿಶೋರ್!
ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಯ ಜತೆಗೆ ಹೊಸ ಆವಿಷ್ಕಾರಗಳಾಗಬೇಕಿದೆ. ರೈತರು ಕೃಷಿಯ ಜತೆಗೆ ಉಪ ಕಸುಬುಗಳನ್ನು ಮಾಡಲು ಆರಂಭಿಸಿದರೆ ಕೃಷಿ ಖಂಡಿತವಾಗಿಯೂ ಲಾಭದಾಯಕವಾಗುತ್ತದೆ. ಇಂಡಿಯನ್ ಮನಿ ಡಾಟ್ ಕಾಂ ನ ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ಕೃಷಿಗೆ ಸಂಬಂಧಿಸಿದಂತೆ ಹೊರ ತಂದಿರುವ ಜೇನು ಸಾಕಣೆ, ಕುರಿ ಮತ್ತು ಮೇಕೆ ಸಾಕಣೆ, ಹಳ್ಳಿಯಿಂದ ಜಾಗತಿಕ ಬಿಸಿನೆಸ್ ನಿರ್ಮಾಣ, ಪ್ಲಾಂಟ್ ನರ್ಸರಿ ಕೃಷಿ ಸೇರಿದಂತೆ ಪ್ರಮುಖ ಕೋರ್ಸ್ ಗಳು ರೈತರಿಗೆ ನೆರವಾಗಲಿವೆ ಎಂದು ವಿವರಿಸಿದರು.
ರೈತರ ಆದಾಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳಾದಾಗ ಕೃಷಿಯಿಂದ ದೇಶದ ಜಿಡಿಪಿಗೆ ಹೆಚ್ಚು ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯನ್ ಮನಿ ಡಾಟ್ ಕಾಂ ನ ಸಂಸ್ಥಾಪಕ- ಸಿಇಒ ಸಿ ಎಸ್ ಸುಧೀರ್, ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕಾದರೆ ಕಲಿಕೆ ಬಹಳ ಮುಖ್ಯ. ಈ ಮಾತು ಕೃಷಿ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ರೈತರಿಗೆ ಪ್ರಗತಿಪರ ರೈತರಿಂದಲೇ ಹೊಸ ವಿಚಾರಗಳನ್ನು ಕಲಿಸಲು ಮತ್ತು ತಿಳಿಸಲು ಫೈನಾನ್ಸಿಯಲ್ ಫ್ರೀಡಂ ಆಪ್ ನಲ್ಲಿ ಹೊಸ ಕೋರ್ಸ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.